ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರಕ್ಕೆ ಖಂಡನೆ

ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ
Last Updated 20 ನವೆಂಬರ್ 2019, 16:50 IST
ಅಕ್ಷರ ಗಾತ್ರ

ಕಲಬುರ್ಗಿ: ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ದೆಹಲಿಯ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ ಘಟನೆಯನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಜಗತ್‌ ವೃತ್ತದಿಂದ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಕಾರರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ. ನೀಲಾ, ‘ದೇಶದ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಆದರೆ, ಇದು ಮರೀಚಿಕೆಯಾಗಿದ್ದು, ಇದರಿಂದ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಕುಸಿಯುತ್ತಿದೆ. ಮಕ್ಕಳ ಭವಿಷ್ಯ ಕರಾಳವಾಗುತ್ತಿದೆ. ಕಿತ್ತು ತಿನ್ನುವ ಬಡತನ, ನಿರುದ್ಯೋಗದಿಂದ ದೇಶದ ಭವಿಷ್ಯವೇ ಮಂಕಾಗುತ್ತಿದೆ.

ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಆದ್ಯತೆ ಕೊಡಬೇಕಾದ ಜರೂರತ್ತು ಇದೆ. ಇದಕ್ಕೆ ವ್ಯತಿರಿಕ್ತವೆಂಬಂತೆ ದೇಶದ ಹೆಮ್ಮೆಯ ವಿಶ್ವವಿದ್ಯಾಲಯವಾಗಿರುವ ಜವಹರಲಾಲ್‌ ನೆಹರೂ ವಿ.ವಿ. ವಿದ್ಯಾರ್ಥಿಗಳ ಓದಿನ ಹಾಗೂ ವಸತಿ ನಿಲಯದ ಶುಲ್ಕವನ್ನು ಏಕಾಏಕಿ ಹೆಚ್ಚಿಸಲಾಗಿದೆ. ಈ ವಿ.ವಿ.ಯಲ್ಲಿ ಅಧ್ಯಯನ ಮಾಡುತ್ತಿರುವವರಲ್ಲಿ ಸಾಮಾನ್ಯ ಬಡ ಮತತ್ತು ದಲಿತ ಹಿಂದುಳಿದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ತೀವ್ರ ಹೆಚ್ಚಳವಾಗಿರುವ ಶುಲ್ಕವನ್ನು ಕಟ್ಟಲು ಸಾಧ್ಯವಾಗದ ಈ ವಿದ್ಯಾರ್ಥಿಗಳು ಅನಿವಾರ್ಯವಾಗಿ ಹೋರಾಟಕ್ಕೆ ಇಳಿದಿದ್ದಾರೆ.

ಕಡಿಮೆ ವೆಚ್ಚದಲ್ಲಿ ಈ ವಿದ್ಯಾರ್ಥಿಗಳಿಗೆ ಶಿಕ್ಷಣವೇಕೆ ಕೊಡಬೇಕು ಎಂಬುದು ಕೇಂದ್ರ ಸರ್ಕಾರದ ಧೋರಣೆಯಾಗಿದೆ. ಅಲ್ಲದೇ, ವಿದ್ಯಾರ್ಥಿಗಳ ಮೇಲೆ ಹೆಚ್ಚು ಖರ್ಚು ಮಾಡುವ ಬದಲಿಗೆ ವಿ.ವಿ.ಯನ್ನೇ ಮುಚ್ಚುವ ಹುನ್ನಾರ ಇದ್ದಂತಿದೆ. ₹ 3 ಸಾವಿರ ಕೋಟಿ ಖರ್ಚು ಮಾಡಿ ಪ್ರತಿಮೆ ಸ್ಥಾಪಿಸುವ ಸರ್ಕಾರ ಮತ್ತೊಂದೆಡೆ ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ ಮಾತನಾಡಿ, ‘ಶುಲ್ಕ ಹೆಚ್ಚಳ ಕೈಬಿಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಶಾಂತಿಯುತವಾಗಿಯೇ ನಡೆಯುತ್ತಿದೆ. ಶಿಕ್ಷಣ ಖಾಸಗೀಕರಣ ಮಾಡಲು ತುದಿಗಾಲಲ್ಲಿ ನಿಂತಿರುವ ಸರ್ಕಾರ ಜೆಎನ್‌ಯುನಲ್ಲಿ ದಮನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಫ್ಯಾಸಿಸ್ಟ್‌ ಪ್ರಭುತ್ವದ ಈ ಹುನ್ನಾರವನ್ನು ಜನತೆ ಸೋಲಿಸಬೇಕು’ ಎಂದು ಒತ್ತಾಯಿಸಿದರು.

ದೇಶದಾದ್ಯಂತ ಇರುವ ದುಬಾರಿ ಶಿಕ್ಷಣ ಶುಲ್ಕ ಕೈಬಿಡಬೇಕು. ಸಾರ್ವತ್ರಿಕ ಉಚಿತ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು. ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂಧಿತರಾಗಿರುವ ವಿದ್ಯಾರ್ಥಿಗಳನ್ನು ಬೇಷರತ್ತ ಆಗಿ ಬಿಡುಗಡೆ ಮಾಡಿ ಅವರ ಮೇಲೆ ಹಾಕಲಾದ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ಶಿಕ್ಷಣದ ಖಾಸಗೀಕರಣ ನಿಲ್ಲಿಸಬೇಕು ಎಂದರು.

ಮುಖಂಡರಾದ ಶ್ರೀಮಂತ ಬಿರಾದಾರ, ಈರಣ್ಣ ಇಸಬಾ, ಲವಿತ್ರ ವಸ್ತ್ರದ,ಅಶ್ವಿನಿ, ಸ್ನೇಹಾ ಕಟ್ಟಿಮನಿ, ನಂದಕುಮಾರ್‌ ಕೆ.ಎನ್‌. ರುಕ್ಮಿಣಿ ನಾಗಣ್ಣವರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT