ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆಗೆ ಒತ್ತಾಯ

Last Updated 28 ಜುಲೈ 2020, 14:04 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಸಕ್ತ ಸಾಲಿನಲ್ಲಿ 1,200 ಕಾಯಂ ಉಪನ್ಯಾಸಕರ ನೇಮಕಾತಿಯಾದರೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈಗಾಗಲೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕೆಲಸದಿಂದ ತೆಗೆದು ಹಾಕಬಾರದು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ‘ಅತಿಥಿ’ ಉಪನ್ಯಾಸಕರ ಸಂಘಟನೆ ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಎಲ್ಲ ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡುವಂತಹ ಸರ್ಕಾರಿ ಆದೇಶವನ್ನು ಕೂಡಲೇ ಹೊರಡಿಸಬೇಕು ಎಂದೂ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಮುಂಬರುವ ಎಲ್ಲಾ ನೇಮಕಾತಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಪ್ರಾತಿನಿಧ್ಯ ನೀಡಿ, ಅತಿಥಿ ಉಪನ್ಯಾಸಕರನ್ನು ನಿರ್ದಿಷ್ಟ ಸಂಖ್ಯೆಯಲ್ಲಿ ಈ ಕಾಯಂ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಗೆ ನಿರ್ದಿಷ್ಟ ಕೋಟಾ ಕಾದಿರಿಸುವ, ವಿಶೇಷ ಅಂಕ (ವೇಟೇಜ್) ನೀಡುವ ಹಾಗೂ ವಯೋಮಿತಿ ಏರಿಸುವ ಹಾಗೂ ಇತ್ಯಾದಿ ಪ್ರಜಾತಾಂತ್ರಿಕ ಪದ್ಧತಿಗಳನ್ನು ಜಾರಿಗೊಳಿಸುವ ನಿರ್ಧಾರವನ್ನು ತಕ್ಷಣವೇ ಸಚಿವ ಸಂಪುಟ ತೆಗೆದುಕೊಳ್ಳಬೇಕು.

ರಾಜ್ಯ ಸರ್ಕಾರ ಈ ಕೂಡಲೇ ಎಲ್ಲಾ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಖಾಸಗಿ ಶಾಲಾ–ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕೋವಿಡ್ ವಿಶೇಷ ಆರ್ಥಿಕ ಪ್ಯಾಕೇಜು ಘೋಷಿಸಬೇಕು.

ಈ ಕೂಡಲೇ ಸರ್ಕಾರ ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಬೇಕು, ವರ್ಷದ 12 ತಿಂಗಳು ಸಂಬಳ ನೀಡಬೇಕು ಮತ್ತು ಇದು ಪ್ರತಿ ತಿಂಗಳ ಮೊದಲ ವಾರದಲ್ಲಿ ಅತಿಥಿ ಉಪನ್ಯಾಸಕರಿಗೆ ತಲುಪಬೇಕು ಎಂದು ಆಗ್ರಹಿಸಿದರು.

ಉಪನ್ಯಾಸಕರಾದ ಸುರೇಶ ತಳಕೇರಿ, ವಿಜಯಕುಮಾರ, ಶರಣಬಸಪ್ಪ ಗಡ್ಡಿ, ಅಂಬಿಕಾ ಮಠಪತಿ, ರುಬಿಯಾ ಬೇಗಂ, ರೇಣುಕಾ ಪೂಜಾರಿ, ಶ್ರೀಶೈಲ, ಮಹೆಬೂಬ, ವಿಕಾಸ ಗಾರಂಪಳ್ಳಿ, ಪೂರ್ಣಿಮಾ, ಅಶ್ವಿನಿ ಎ. ಮುಂತಾದ ಉಪನ್ಯಾಸಕರು ಪಾಲ್ಗೊಂಡಿದ್ದರು.

ಪ್ರತಿಭಟನೆಯಲ್ಲಿ ಎಂಟು ತಿಂಗಳ ಗರ್ಭಿಣಿ

ಅತಿಥಿ ಉಪನ್ಯಾಸಕಿಯಾಗಿ ಕಮಲಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವ ಸಂಘಮಿತ್ರ ಪಟ್ನಾಯಕ್‌ ಎಂಟು ತಿಂಗಳ ಗರ್ಭಿಣಿ. ಮಾರ್ಚ್‌ ತಿಂಗಳಿಂದ ಇಲ್ಲಿಯವರೆಗೆ ವೇತನ ಆಗಿರಲಿಲ್ಲ. ಮರು ನೇಮಕಾತಿಯೂ ಆಗಿಲ್ಲ. ಈ ಬಗ್ಗೆ ಪ್ರಶ್ನಿಸುವ ಸಲುವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

‘ಲಾಕ್‌ಡೌನ್‌ ಇರುವುದರಿಂದ ಬೇರೆ ಕೆಲಸವನ್ನೂ ಮಾಡುವಂತಿಲ್ಲ. ಹೆರಿಗೆಯಾದ ಬಳಿಕ ಐದಾರು ತಿಂಗಳು ಉಪನ್ಯಾಸಕಿ ಕೆಲಸವನ್ನೂ ಮಾಡುವಂತಿಲ್ಲ. ಮುಂದೇನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ಸಂಘಮಿತ್ರ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT