ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೌರವಯುತ ಬದುಕು ಎಲ್ಲರ ಹಕ್ಕು’

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್ ಅಭಿಮತ
Last Updated 11 ಫೆಬ್ರುವರಿ 2021, 16:07 IST
ಅಕ್ಷರ ಗಾತ್ರ

ಕಲಬುರ್ಗಿ: ಬಡವರಿರಲಿ, ಮಕ್ಕಳಾಗಲಿ, ವೃದ್ಧರಾಗಲಿ ಪ್ರತಿಯೊಬ್ಬ ಮನುಷ್ಯನಿಗೆ ಗೌರವದಿಂದ ಬದುಕುವ ಹಕ್ಕಿದೆ. ಆ ಹಕ್ಕು ಒದಗಿಸುವ ಕಾರ್ಯ ಎಲ್ಲರಿಂದಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ್ ಸಿಂಗ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಆಶ್ರಯದಲ್ಲಿ ಗುರುವಾರ ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕುರಿತು ಬೀದಿ ನಾಟಕ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಾಲಕಾರ್ಮಿಕರ ನಿಷೇಧ ದಿನದಂದು ಮಾತ್ರ ಮಕ್ಕಳ ಬಗ್ಗೆ ಚಿಂತಿಸುವುದಲ್ಲ. ಪ್ರತಿ ದಿನ ನಾವು ನಮ್ಮ ಸುತ್ತಮುತ್ತಲಿನ ಪ್ರದೇಶ, ರಸ್ತೆ, ಬಡಾವಣೆ, ಹೋಟೆಲ್‌ಗಳಲ್ಲಿ ಕಂಡುಬರುವ ಮಕ್ಕಳ ಬಗ್ಗೆ ವಿಶೇಷ ಗಮನಹರಿಸಬೇಕು. 14 ವರ್ಷದೊಳಗಿನ ಬಾಲಕಾರ್ಮಿಕರಾಗಿದ್ದಲ್ಲಿ ಕರೆದು ವಿಚಾರಿಸಬೇಕು ಮತ್ತು ಅಂತಹ ಮಕ್ಕಳನ್ನು ಬಾಲ ಮಂದಿರಕ್ಕೆ ಕಳುಹಿಸುವ ಕಾರ್ಯ ಮಾಡಬೇಕು. ‘14 ವರ್ಷದ ಮಕ್ಕಳ ನಡೆ ಶಾಲೆಯ ಕಡೆ’ ಎಂಬ ಘೋಷವಾಕ್ಯದಂತೆ ನಾವೆಲ್ಲರೂ ಕಾರ್ಯಪ್ರವೃತ್ತರಾಗಿ ಮಕ್ಕಳಿಗೆ ಶಾಲೆಗೆ ಸೇರಿಸುವ ಮತ್ತು ಜಿಲ್ಲೆಯನ್ನು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್.ಶೆಟ್ಟರ್ ಮಾತನಾಡಿ, ಪ್ರತಿಯೊಬ್ಬರೂ ದೈನಂದಿನ ಬದುಕಿನಲ್ಲಿ ಒಂದು ದಿನವಾದರೂ ತಮ್ಮ ಹತ್ತಿರದ ಬಾಲಕಾರ್ಮಿಕರನ್ನು ಗುರುತಿಸಿ ಅವರನ್ನು ಬಾಲಮಂದಿರಕ್ಕೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಸಿಸ್ಟರ್ ರೀನಾ ಡಿಸೋಜಾ, ಕಲಬುರ್ಗಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಆರತಿ ಪೂಜಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇಷನರ್ ಕಾರ್ಮಿಕ ಅಧಿಕಾರಿ ಡಾ. ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ ಇದ್ದರು.

ಇದೇ ಸಂದರ್ಭದಲ್ಲಿ ಕಲಾವಿದರು ಸಾಂಕೇತಿಕವಾಗಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆಯ ಕುರಿತು ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT