ಮಂಗಳವಾರ, ನವೆಂಬರ್ 24, 2020
22 °C
ಮುನ್ನೆಲೆಗೆ ಬಂದ ಕಡಬೂರು ಗ್ರಾಮಸ್ಥರ ಬೇಡಿಕೆ

ಊಟ, ಹಣ ಬೇಡ, ಸ್ಥಳಾಂತರ ಮಾಡಿ ಸಾಕು: ಕಡಬೂರು ಗ್ರಾಮಸ್ಥರ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಭೀಮಾ ನದಿ ದಂಡೆಯ ಕಡಬೂರು ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾದ ಸ್ಥಳಾಂತರದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. ಈ ಬಾರಿ ಉಕ್ಕಿ ಹರಿದ ಪ್ರವಾಹ ಗ್ರಾಮದ 140ಕ್ಕೂ ಅಧಿಕ ಮನೆಗಳಿಗೆ ತೀವ್ರ ಧಕ್ಕೆ ತಂದಿದೆ. 400ಕ್ಕೂ ಅಧಿಕ ಜನರು ನಿರಾಶ್ರಿಗೊಂಡು ಪರಿಹಾರ ಕೇಂದ್ರದ ಮೊರೆ ಹೋಗಬೇಕಾಯಿತು. ಗ್ರಾಮದ ದಲಿತರ ಬಡಾವಣೆ, ಮಹಿಬೂಬ್ ಸುಭಾನಿ ದರ್ಗಾ ಏರಿಯಾದ ಬಹುತೇಕ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿವೆ.

‘ಪ್ರತಿ ಸಲ ಪ್ರವಾಹ ನಮ್ಮ ಬದುಕನ್ನು ಮುಕ್ಕುತ್ತಿದೆ. ಭಯ, ಆತಂಕದ ಮಧ್ಯೆ ಜೀವನ ನಡೆಸುವಂತಾಗಿದೆ. ನಾವು ಹೇಗೋ ಬದುಕಿದೆವು, ಈ ಕಷ್ಟ ನಮ್ಮ ಮಕ್ಕಳಿಗೆ ಬೇಡ, ನಮಗೆ ಸರ್ಕಾರ ನೀಡುವ ಊಟ ತಿಂಡಿ ಬೇಡ, ಪರಿಹಾರದ ಆಸೆಯೂ ನಮಗಿಲ್ಲ, ಹೊರಗಡೆ ಜಾಗದಲ್ಲಿ ಮನೆ ಕಟ್ಟಿಕೊಟ್ಟರೆ ನೆಮ್ಮದಿಯಾಗಿ ಬದುಕು ನಡೆಸ್ತೀವಿ' ಎಂದು ‘ಪ್ರಜಾವಾಣಿ’ಯೆದುರು ಶರಣಮ್ಮ, ಅನಸಾದೇವಿ, ರಿಯಾನ ಬೇಗಂ, ಆಬೇದ ಬೇಗಂ, ಸೋಮಯ್ಯಾ ಸ್ವಾಮಿ ಅಳಲು ತೋಡಿಕೊಂಡರು.

‘ದಲಿತರ ಬಡಾವಣೆಯ ಹಲವು ಮನೆಗಳು ನೀರಲ್ಲಿ ಸಿಲುಕಿದ್ದು ಬದುಕು ಅತಂತ್ರವಾಗಿದೆ. ಈ ಹಿಂದೆ ನೆರೆ ಸಂತ್ರಸ್ತರಿಗೆ ಮಂಜೂರಾಗಿದ್ದ ಮನೆಗಳು ಉಳ್ಳವರ ಪಾಲಾಗಿವೆ. ಸಂಕಷ್ಟದಲ್ಲಿರುವ ನಮಗೆ ಆಶ್ರಯ ಕಲ್ಪಿಸಿ' ಎಂದು ಮಹಾದೇವಿ, ಭಾಗಮ್ಮ ಒತ್ತಾಯಿಸಿದರು.

2008ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರವಲಯದಲ್ಲಿ 60 ಮನೆಗಳನ್ನು ಕಟ್ಟಿಸಿಕೊಟ್ಟು ಸ್ಥಳಾಂತರಕ್ಕೆ ಮುನ್ನುಡಿ ಬರೆಯಿತು. ಈಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮಸ್ಥರು ಸ್ಥಳಾಂತರ ಮಾಡುವ ಕುರಿತು ಒಕ್ಕೂರಲಿನ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು