ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ವಿವಿಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ

Last Updated 31 ಮೇ 2022, 9:58 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವೆಗಳ ಪರೀಕ್ಷೆಗೆವಸತಿ ಸಹಿತ ಉಚಿತ ತರಬೇತಿ ನೀಡಲಾಗುವುದು ಎಂದು ಕುಲಪತಿ ಪ್ರೊ.ಬಟ್ಟು ಸತ್ಯಾನಾರಾಯಣ ತಿಳಿಸಿದರು.

‘ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ದೇಶದ 30 ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಡಾ.ಅಂಬೇಡ್ಕರ್ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ ಕೇಂದ್ರ (ಡಿಎಸಿಇ)ಗಳನ್ನು ಸ್ಥಾಪಿಸಿದೆ. ಈ ಮೂಲಕ ಪ್ರತಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿಯ 100 ಅರ್ಹ ಅಭ್ಯರ್ಥಿಗಳಿಗೆ ಯುಪಿಎಸ್‌ಸಿಯ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಎದುರಿಸುವ ಬಗ್ಗೆ ತರಬೇತಿ ಒದಗಿಸಲಾಗುತ್ತಿದೆ. ಈ ತರಬೇತಿಯು ನಮ್ಮ ವಿ.ವಿ.ಯಲ್ಲೂ ಲಭ್ಯ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪ್ರವೇಶ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ 100 ಅಭ್ಯರ್ಥಿಗಳು ತರಬೇತಿಗೆ ಆಯ್ಕೆ ಆಗಲಿದ್ದಾರೆ. ಇದರಲ್ಲಿ 30 ಸೀಟುಗಳು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿವೆ. ದೇಶದ ಯಾವುದೇ ವಿ.ವಿ.ಯಿಂದ ಪದವಿ ಪಡೆದ ಅರ್ಹ ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಬರೆಯಬಹುದು. ಜುಲೈ 31ರಂದು ಪ್ರವೇಶ ಪರೀಕ್ಷೆ ನಡೆಸುವ ಸಾಧ್ಯತೆ ಇದ್ದು, ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.

ಯುಪಿಎಸ್ಸಿಯ ಮೊದಲ ಬ್ಯಾಚ್‌ ತರಬೇತಿಯು ಇದೇ ಅಕ್ಟೋಬರ್‌ ತಿಂಗಳಿಂದ ಆರಂಭವಾಗಲಿದೆ. 2023ರ ಸೆಪ್ಟೆಂಬರ್‌ನಲ್ಲಿ ನಡೆಯುವ ಪ್ರಿಲಿಮ್ಸ್, ಮೇನ್ಸ್ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಅಣಿಗೊಳಿಸಲಾಗುವುದು. ಐಚ್ಛಿಕ ವಿಷಯಗಳಾದ ಭೂಗೋಳ, ಇತಿಹಾಸ ಮತ್ತು ಸಾರ್ವಜನಿಕ ಆಡಳಿತ ವಿಷಯಗಳಿಗೆ ನುರಿತ ಪ್ರತ್ಯೇಕ ಬೋಧಕ ಸಿಬ್ಬಂದಿ ತರಬೇತಿ ನೀಡಲಿದ್ದಾರೆ. ಇದರ ಜತೆಗೆ ಸಾಮಾನ್ಯ ಜ್ಞಾನ ಅಧ್ಯಯನ, ಆಪ್ಟಿಟ್ಯೂಡ್ ಟೆಸ್ಟ್‌ನಂತಹ ಪರೀಕ್ಷೆಗಳ ಬಗ್ಗೆಯೂ ಕೋಚಿಂಗ್ ಒದಗಿಸಲಾಗುತ್ತದೆ. ವಿಶ್ವವಿದ್ಯಾಲಯದಲ್ಲಿನ ಅರ್ಥಶಾಸ್ತ್ರ, ವಿಜ್ಞಾನ, ಗಣಿತ, ಭೌತವಿಜ್ಞಾನ ವಿಷಯಗಳಪರಿಣಿತ ಬೋಧಕರನ್ನೂ ತರಬೇತಿಗೆ ಬಳಸಿಕೊಳ್ಳುವುದಾಗಿ ಪ್ರೊ. ಸತ್ಯಾನಾರಾಯಣ ಹೇಳಿದರು.

‘ಒಂದು ವರ್ಷ ತರಬೇತಿಯ ಅವಧಿ ಇದ್ದು, ಒಬ್ಬ ಅಭ್ಯರ್ಥಿಗೆ ಒಂದು ಬಾರಿ ಮಾತ್ರವೇ ತರಬೇತಿ ನೀಡಲಾಗುತ್ತದೆ. ಕೇಂದ್ರದಲ್ಲಿ ಪ್ರತ್ಯೇಕ ತರಗತಿ ಕೊಠಡಿಗಳು, ಗ್ರಂಥಾಲಯ, ವಸತಿಯಂತಹ ಅಗತ್ಯ ಸೌಕರ್ಯಗಳ ವ್ಯವಸ್ಥೆ ಇದೆ. ಪ್ರತಿ ಅಭ್ಯರ್ಥಿಗೆ ₹ 75 ಸಾವಿರದಂತೆ ₹ 75 ಲಕ್ಷ ಅನುದಾನವನ್ನು ಕೇಂದ್ರಕ್ಕೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಪರಿಶಿಷ್ಟ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಇದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

ಪ್ರವೇಶ ಪರೀಕ್ಷಾ ಸಂಬಂಧಿತ ಮಾಹಿತಿಯನ್ನು ವಿಶ್ವವಿದ್ಯಾಲಯದ ವೇಬ್‌ಸೈಟ್‌ https://www.cuk.ac.in ನಲ್ಲಿ ಪ್ರಕಟಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT