ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸೈಸ್‌ ಸುಂಕ ಕಡಿತದಿಂದ ವಿತ್ತೀಯ ಶಿಸ್ತಿಗೆ ಧಕ್ಕೆ’

ಇಂಧನ ದರ ಏರಿಕೆ, ಸರ್ಕಾರದ ಮೇಲೆ ಹೆಚ್ಚಿದ ಒತ್ತಡ: ಮೂಡೀಸ್‌
Last Updated 17 ಜೂನ್ 2018, 18:53 IST
ಅಕ್ಷರ ಗಾತ್ರ

ನವದೆಹಲಿ: ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಕಡಿತದಿಂದ ವಿತ್ತೀಯ ಶಿಸ್ತಿಗೆ ಧಕ್ಕೆಯಾಗಲಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಮೂಡೀಸ್‌
ಅಭಿಪ್ರಾಯಪಟ್ಟಿದೆ.

ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3 ರಲ್ಲಿ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ಕಚ್ಚಾ ತೈಲ ದರ ಏರಿಕೆಯಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ತುಟ್ಟಿಯಾಗಿವೆ. ಹೀಗಾಗಿ ಎಕ್ಸೈಸ್‌ ಸುಂಕ ಕಡಿತ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ.ವೆಚ್ಚಕ್ಕೆ ಸರ್ಕಾರ ಕಡಿವಾಣ ಹಾಕದೇ ಇದ್ದರೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದೂ ಅದು ಹೇಳಿದೆ.

ಸರ್ಕಾರದ ಅಂದಾಜಿನ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಒಂದು ರೂಪಾಯಿ ಸುಂಕ ಕಡಿತ ಮಾಡಿದರೆ ಅದರಿಂದ ವರಮಾನದಲ್ಲಿ ₹ 13 ಸಾವಿರ ಕೋಟಿಗಳಷ್ಟು ನಷ್ಟ ಆಗಲಿದೆ.

ವಿತ್ತೀಯ ಶಿಸ್ತು ಕಾಯ್ದುಕೊಂಡರೆ ಮಾತ್ರವೇ ಸಾಲ ಮರುಪಾವತಿ ಸಾಮರ್ಥ್ಯ ಹೆಚ್ಚಾಗಲಿದೆ. ಇದು ಭಾರತಕ್ಕೆ ದೊಡ್ಡ ಸವಾಲಾಗಿದೆ ಎಂದು ಮೂಡೀಸ್‌ ಹೇಳಿದೆ.

‘ಎಕ್ಸೈಸ್ ಸುಂಕದಲ್ಲಿ ಕಡಿತ ಮಾಡಿದರೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳಲು ವೆಚ್ಚ ತಗ್ಗಿಸುವುದು ಅನಿವಾರ್ಯವಾಗುತ್ತದೆ’ ಎಂದು ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವೀಸ್‌ನ ಉಪಾಧ್ಯಕ್ಷ ವಿಲಿಯಂ ಫೋಸ್ಟರ್‌ ಹೇಳಿದ್ದಾರೆ.

ಮೂಡೀಸ್‌, 13 ವರ್ಷಗಳ ಬಳಿಕ 2017ರಲ್ಲಿ ಭಾರತದ ಹಣಕಾಸು ಸ್ಥಿತಿಯ ರೇಟಿಂಗ್ಸ್‌ ಅನ್ನು ‘ಬಿಎಎ2’ಗೆ ಉನ್ನತೀಕ
ರಿಸಿತ್ತು. ಆರ್ಥಿಕ ಮತ್ತು ಹಣಕಾಸು ಸುಧಾರಣೆಗಳಿಂದಾಗಿ ದೇಶದ ಒಟ್ಟಾರೆ ಬೆಳವಣಿಗೆಯಲ್ಲಿ ಬಹಳಷ್ಟು ಬದಲಾವಣೆಗಳು ಗೋಚರಿಸುತ್ತಿವೆ ಎಂದು ಹೇಳಿತ್ತು.

‘ಆರ್‌ಬಿಐ ನಿರ್ಧಾರ ಸರಿಯಾಗಿದೆ’

ಭಾರತೀಯ ರಿಸರ್ವ್ ಬ್ಯಾಂಕ್‌ ನಾಲ್ಕು ವರ್ಷಗಳ ಬಳಿಕ ರೆಪೊ ದರವನ್ನು ಶೇ 0.25 ರಷ್ಟು ಹೆಚ್ಚಿಸಿದೆ. ಈ ನಿರ್ಧಾರ ಸರಿಯಾಗಿದೆ ಎಂದು ಮೂಡೀಸ್‌ ಹೇಳಿದೆ.

ಹಣದುಬ್ಬರದ ನಿಯಂತ್ರಣ ಮತ್ತು ಸುಸ್ಥಿರ ಆರ್ಥಿಕ ಪ್ರಗತಿ ಸಾಧಿಸುವ ನಿಟ್ಟಿನಿಂದ ಆರ್‌ಬಿಐ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದಿದೆ.

‘ಹಣಕಾಸು ನೀತಿ ಸಮಿತಿಯ (ಎಂಪಿಸಿ) ಇತ್ತೀಚಿನ ನಿರ್ಧಾರಗಳು ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೇ ಇವೆ. ಇದರಿಂದ ಭಾರತದ ಹಣಕಾಸು ನೀತಿ ರೂಪಿಸುವ ಬಗ್ಗೆ ವಿಶ್ವಾಸಾರ್ಥತೆ ಮೂಡಲಿದೆ’ ಎಂದು ಪೋಸ್ಟರ್‌ ಹೇಳಿದ್ದಾರೆ.

ಮುಖ್ಯಾಂಶಗಳು

* ಸರ್ಕಾರದ ಮೇಲೆ ಸುಂಕ ತಗ್ಗಿಸುವ ಒತ್ತಡ

* ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್‌, ಡೀಸೆಲ್‌

* ವಿತ್ತೀಯ ಶಿಸ್ತಿಗೆ ವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT