ಸೋಮವಾರ, ಮೇ 25, 2020
27 °C
ರಕ್ತ ನೀಡುವ ಆಸಕ್ತಿ ಇದ್ದರೂ ಆಸ್ಪತ್ರೆಗೆ ಹೋಗಲು ಹಿಂಜರಿಕೆ: ಕಡಿಮೆಯಾದ ರಕ್ತದ ಸಂಗ್ರಹ

ಕಲಬುರ್ಗಿ: ರಕ್ತದಾನಿಗಳಿಗೆ ಬೇಕಿದೆ ಸುರಕ್ಷಿತ ವ್ಯವಸ್ಥೆ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಕ್ತದಾನ ಮಾಡುವವರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲದ ಕಾರಣ, ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಲಾಕ್‌ಡೌನ್‌ ಆದ ಮೇಲೆ ಜಿಮ್ಸ್‌ ಹಾಗೂ ಇಎಸ್‌ಐ ರಕ್ತ ಭಂಡಾರಗಳಲ್ಲಿ ರಕ್ತದ ಸಂಗ್ರಹ ಕಡಿಮೆಯಾಗುತ್ತಿದೆ.

ಜನವರಿ ಅಂತ್ಯದವರೆಗೂ ಪ್ರತಿ ದಿನ 8ರಿಂದ 10 ಕಡೆ ರಕ್ತದಾನ ಶಿಬಿರಗಳು ನಡೆಯುತ್ತಿದ್ದವು. ಕಾಲೇಜು ವಿದ್ಯಾರ್ಥಿಗಳು, ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರೋಗಿಗಳ ಸಂಬಂಧಿಕರು ಕೂಡ ರಕ್ತದಾನಕ್ಕೆ ಸ್ವಯಂ ಪ್ರೇರಣೆಯಿಂದ ಬರುತ್ತಿದ್ದರು. ಇದರಿಂದ ಜಿಮ್ಸ್‌ ರಕ್ತಭಂಡಾರಕ್ಕೆ ಪ್ರತಿ ದಿನ ಕನಿಷ್ಠ 300ರಿಂದ 400 ಯೂನಿಟ್‌ ರಕ್ತ ಸಂಗ್ರಹ ಆಗುತ್ತಿತ್ತು. ಆದರೆ, ಈಗ ಇದರ ಸಂಖ್ಯೆ ಎರಡಂಕಿ ದಾಟುತ್ತಿಲ್ಲ.

ಹಾಗೆಂದ ಮಾತ್ರಕ್ಕೆ ರಕ್ತದಾನಿಗಳು ಹಿಂಜರಿಯುತ್ತಿದ್ದಾರೆ ಎಂದಲ್ಲ. ಹಲವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಈಗಲೂ ಸಿದ್ಧರಿದ್ದಾರೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರಿಗೆ ಓಡಾಡುವ ವ್ಯವಸ್ಥೆ ಇಲ್ಲ. ಇಎಸ್‌ಐ ಹಾಗೂ ಜಿಮ್ಸ್‌ಗಳನ್ನು ಕೊರೊನಾ ಆಸ್ಪತ್ರೆ ಆಗಿ ಘೋಷಿಸಿದ್ದರಿಂದ, ಅಲ್ಲಿಗೆ ಹೋಗಿ ರಕ್ತ ನೀಡಲು ದಾನಿಗಳು ಹಿಂಜರಿಯುತ್ತಿದ್ದಾರೆ.

ವಿಶೇಷ ವ್ಯವ‌ಸ್ಥೆ ಮಾಡಲು ಕೋರಿಕೆ: ‘ರಕ್ತದಾನಕ್ಕೆ ಆಸ್ಪತ್ರೆಯ ಹೊರಗೆ ವ್ಯವಸ್ಥೆ ಮಾಡಬೇಕು. ಅಲ್ಲಿ ಸಾಮಾಜಿಕ ಸುರಕ್ಷತಾ ಅಂತರ ಕಾಯ್ದುಕೊಳ್ಳುವುದು, ರಕ್ತ ಪರೀಕ್ಷೆ, ಶುಚಿತ್ವ ಮುಂತಾದ ಸಿದ್ಧತೆಗಳನ್ನು ಮಾಡಿಕೊಂಡರೆ ಸರದಿ ಪ್ರಕಾರ ಬಂದು ರಕ್ತದಾನ ಮಾಡಬಹುದು’ ಎನ್ನುತ್ತಾರೆ ಕಲಬುರ್ಗಿಯ ‘ನಮ್ಮ ಸಂಕಲ್ಪ ಫೌಂಡೇಷನ್‌’ ಸದಸ್ಯರು.

ಹೆಚ್ಚುತ್ತಿದೆ ಬೇಡಿಕೆ: ಲಾಕ್‌ಡೌನ್‌ನಿಂದಾಗಿ ವಾಹನ ಅಪಘಾತ, ಅಪರಾಧ ಮುಂತಾದವುಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ಹೆರಿಗೆಗಳ ಸಂಖ್ಯೆ ಏರುತ್ತಲೇ ಇದೆ. ಈ ಭಾಗದಲ್ಲಿ ಬಹುಪಾಲು ಗರ್ಭಿಣಿಯರು ಅಪೌಷ್ಟಿಕ
ತೆಯಿಂದ ಬಳಲುವುದು ಸಾಮಾನ್ಯ. ಅಂತಹವರಿಗೆ ಹೆರಿಗೆ ಸಂದರ್ಭದಲ್ಲಿ ರಕ್ತ ನೀಡುವುದು ಅನಿವಾರ್ಯ. ಪ್ರತಿದಿನ 15 ಯೂನಿಟ್‌ನಷ್ಟು ರಕ್ತದ ಬೇಡಿಕೆ ಬರುತ್ತಿದೆ. ಆದರೆ, ಅಷ್ಟು ಪ್ರಮಾಣದ ದಾನ ಬರುತ್ತಿಲ್ಲ.ಇದಕ್ಕಿಂತ ಹೆಚ್ಚಾಗಿ, ತಲಸ್ಸೆಮಿಯಾ (thalassemia) ರೋಗಿಗಳಿಗೆ, ಡಯಾಲಿಸಿಸ್‌ ಮಾಡಿಸಿಕೊಳ್ಳುವವರಿಗೆ ನಿರಂತರ ರಕ್ತ ಕೊಡಬೇಕಾಗಿದೆ. ಸದ್ಯ ಜಿಮ್ಸ್‌ನಲ್ಲಿ ಕೊರತೆ ಇದ್ದ ಕಾರಣ, ಇಬ್ಬರು ತಲಸ್ಸೆಮಿಯಾ ರೋಗಿಗಳು ಸೊಲ್ಲಾಪುರಕ್ಕೆ ಹೋಗಲು ಯತ್ನಿಸಿದರು. ಆದರೆ, ಅವರಿಗೆ ವಾಹನ ವ್ಯವಸ್ಥೆ ಆಗಲಿಲ್ಲ. ಇಂಥ ಗಂಭೀರ ಸಂದರ್ಭಗಳಿಗಾಗಿ ಹೆಚ್ಚುವರಿ ರಕ್ತವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದೆ ಎಂಬುದು ಜಿಮ್ಸ್‌ ಮೂಲಗಳ ಮಾಹಿತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು