ಕಲಬುರಗಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮ ಉಲ್ಲಂಘಿಸಿ ವಿಶೇಷ ಆತಿಥ್ಯ ಪಡೆದಿದ್ದ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರ ಮ್ಯಾನೇಜರ್ ನಾಗರಾಜ್‌ನನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶನಿವಾರ ಕರೆ ತರಲಾಯಿತು.
ಪ್ರಕರಣದಲ್ಲಿ 11ನೇ ಆರೋಪಿ ಯಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಸಿಎಆರ್ ಪೊಲೀಸರು ಭದ್ರತೆಯಲ್ಲಿ ಕರೆ ತಂದರು. ಮತ್ತೊಬ್ಬ ಆರೋಪಿ ವಿನಯ್‌ನನ್ನು ವಿಜಯಪುರ ಜೈಲಿಗೆ ಸ್ಥಳಾಂತರಿಸಿದ್ದರಿಂದ ಸಂಜೆ 6.30ಕ್ಕೆ ಕಲಬುರಗಿಗೆ ಬಂದರು.
ಒಂದು ಪ್ಲಾಸ್ಟಿಕ್, ಎರಡು ಲಗೇಜ್ ಬ್ಯಾಗ್‌ಗಳೊಂದಿಗೆ ಜೈಲಿಗೆ ಬಂದ ಬಳಿಕ ನಾಗರಾಜ್‌ನ ಆರೋಗ್ಯ ತಪಾಸಣೆ ಮಾಡಿ, ಬ್ಯಾಗ್‌ಗಳನ್ನು ಪರಿಶೀಲಿಸಲಾಯಿತು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕೇಂದ್ರ ಕಾರಾಗೃಹದ ಒಳಗೆ ಕರೆದೊಯ್ಯಲಾಗಿದೆ.
‘ಸೆಲ್ ನಂಬರ್ 14ರಲ್ಲಿ ಇರಿಸಲಾಗಿದ್ದು, 2394 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ’ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.