ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಜಿಲ್ಲಾಧಿಕಾರಿ ಸಂದರ್ಶನ: ಎರಡು ಪಾಳಿಯಲ್ಲಿ ಕೊರೊನಾ ಟೆಸ್ಟ್

Last Updated 9 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಕೋವಿಡ್‌ 19 ಕಾಯಿಲೆಯಿಂದ ಇಬ್ಬರು ಸಾವಿಗೀಡಾಗಿ, ಸೋಂಕಿತರ ಸಂಖ್ಯೆ 9ಕ್ಕೆ ಏರಿದ ಬೆಳವಣಿಗೆ
ಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತ, ಜಿಮ್ಸ್‌ ಆಸ್ಪತ್ರೆಯಲ್ಲಿರುವ ಕೋವಿಡ್‌–19 ಪ್ರಯೋಗಾಲಯವನ್ನು 2 ಪಾಳಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿದೆ.

ಜಿಲ್ಲೆಯಲ್ಲಿರುವ ನಾಲ್ಕು ಜ್ವರ ತಪಾಸಣಾ ಕೇಂದ್ರಗಳನ್ನು (ಫಿವರ್ ಕ್ಲಿನಿಕ್‌) 27ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದ್ದು, 20 ಕೇಂದ್ರಗಳು ಕಲಬುರ್ಗಿ ನಗರವೊಂದರಲ್ಲೇ ಆರಂಭಿಸಲು ನಿರ್ಧರಿಸಲಾಗಿದೆ.

‘ಪ್ರಜಾವಾಣಿ’ಗೆ ಗುರುವಾರ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶರತ್ ಬಿ. ಅವರು, ‘ಕೊರೊನಾ ಸೋಂಕಿತರ ತಪಾಸಣೆ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದೊಂದೇ ನಮ್ಮ ಮುಂದಿರುವ ಏಕೈಕ ಮಾರ್ಗ. ಇಲ್ಲಿಯವರೆಗೆ ಜಿಮ್ಸ್‌ ಪ್ರಯೋಗಾಲಯದಲ್ಲಿ 282 ಜನ ಕೊರೊನಾ ಸೋಂಕಿತರ ಗಂಟಲು ದ್ರವದಮಾದರಿಯನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 205 ಮಾದರಿಗಳು ಕಲಬುರ್ಗಿ ಜಿಲ್ಲೆಯವರದ್ದೇ ಆಗಿದೆ’ ಎಂದರು.

ಸಂದರ್ಶನದ ಆಯ್ದ ಭಾಗ ಇಲ್ಲಿದೆ.‌..

* ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ಹೇಗಿದೆ?
ಕೋವಿಡ್‌ನಿಂದ ಮಾರ್ಚ್‌ 10ರಂದು ವೃದ್ಧರೊಬ್ಬರು ತೀರಿಕೊಂಡ ಬಳಿಕ ಅವರ ಮನೆ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್‌ ಝೋನ್ ಆಗಿ ಪರಿವರ್ತಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ಆದರೆ, ದೆಹಲಿಯ ತಬ್ಲಿಗಿಯಿಂದ ಬಂದ 26 ಜನ ಸೂಕ್ತ ಮಾಹಿತಿ ಕೊಡಲಿಲ್ಲ. ಕೂಡಲೇ ವೈದ್ಯಕೀಯ ತಪಾಸಣೆಗೂ ಒಳಪಡಲಿಲ್ಲ. ಹೀಗಾಗಿ, ಅವರು ಎಲ್ಲೆಲ್ಲಿ ಓಡಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆಯು
ವುದೇ ಸವಾಲಾಗಿದೆ. ಇದರ ಜತೆ, ಅವರು ಜಿಲ್ಲಾಡಳಿತದ ಗಮನಕ್ಕೆ ತರದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಸ್ಪತ್ರೆಯವರೂ ನಮ್ಮ ಗಮನಕ್ಕೆ ತಂದಿಲ್ಲ. ಪರಿಸ್ಥಿತಿ ಗಂಭೀರವಾದ ಮೇಲೆಯಷ್ಟೇ ಅವರು ಇಎಸ್ಐ ಆಸ್ಪತ್ರೆಗೆ ಕೊರೊನಾ ಸೋಂಕಿತ ವ್ಯಕ್ತಿಯನ್ನು ಕಳುಹಿಸಿಕೊಟ್ಟಿದ್ದಾರೆ. ನಾವು ಮೊದಲಿನಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಬೇರೆ ರಾಜ್ಯಗಳಿಂದ ಬಂದವರು, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದವರು, ಕೋವಿಡ್‌–19ನಿಂದ ಮೃತಪಟ್ಟವರೊಂದಿಗೆ ಒಡನಾಟ ಹೊಂದಿದ್ದವರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗುವಂತೆ ತಿಳಿಸಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ.

* ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ?
ರಾಜ್ಯದ ಬಹುತೇಕ ಕಡೆಗಳಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹೋಟೆಲ್‌ಗಳಿಂದ ಪಾರ್ಸೆಲ್ ಒಯ್ಯಲು, ಬೇಕರಿಗಳನ್ನು
ಆರಂಭಿಸಲು ಅವಕಾಶ ನೀಡಲಾಗಿದೆ. ನಮ್ಮಲ್ಲಿ ಅನುಮತಿ ನೀಡಿಲ್ಲ. ಕೋವಿಡ್‌ನಿಂದ ದೇಶದಲ್ಲಿ ಮೊದಲು ಮೃತಪಟ್ಟ ವ್ಯಕ್ತಿಕಲಬುರ್ಗಿಯವರೇ ಆಗಿದ್ದರಿಂದ ನಾವು ಸಾಕಷ್ಟು ಎಚ್ಚರ ವಹಿಸಿದ್ದೇವೆ. ಇಎಸ್‌ಐಸಿ, ಜಿಮ್ಸ್‌ ಅಲ್ಲದೇ ಜನರನ್ನು ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್‌ನಲ್ಲಿ ಇಡಲು ಕಲಬುರ್ಗಿಯ ಟ್ರಾಮಾ ಆಸ್ಪತ್ರೆಯನ್ನೂ ಬಳಸಿಕೊಂಡಿದ್ದೇವೆ. ಒಟ್ಟಾರೆ 700 ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯರಿಗೆ ಪಿಪಿಇ ಕಿಟ್‌, ಮಾಸ್ಕ್‌, ಸ್ಯಾನಿಟೈಜರ್‌ಗಳಿಗೆ ಯಾವುದೇ ಕೊರತೆ ಇಲ್ಲ.

* ಹೆಚ್ಚುವರಿ ಪೊಲೀಸ್‌ ಪಡೆ ತರಿಸುತ್ತೀರಾ?
ಜಿಲ್ಲಾ ಪೊಲೀಸ್ ಹಾಗೂ ಕಮಿಷನರೇಟ್‌ ಪೊಲೀಸರ ಜತೆ ಮೂರು ಕೆಎಸ್‌ಆರ್‌ಪಿ ತುಕಡಿಗಳನ್ನು ತರಿಸಿಕೊಳ್ಳುವಂತೆ ಕಮಿಷನರ್ ಹಾಗೂ ಎಸ್ಪಿ ಅವರಿಗೆ ಮನವಿ ಮಾಡಿದ್ದೆ. ಅದರಂತೆ ತುಕಡಿಗಳು ಬಂದಿದ್ದು, ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

* ವೆಂಟಿಲೇಟರ್‌ ಎಷ್ಟಿವೆ? ಹೊಸದಾಗಿ ತರಿಸುತ್ತೀರಾ?
ಜಿಲ್ಲೆಯಲ್ಲಿ 40 ವೆಂಟಿಲೇಟರ್‌ಗಳಿದ್ದು, ಹೊಸದಾಗಿ 44 ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಜೊತೆಗೆ 20 ವೆಂಟಿ
ಲೇಟರ್‌ಗಳನ್ನು ಜಿಮ್ಸ್ ಆಸ್ಪತ್ರೆಗೆ ನೇರವಾಗಿ ಖರೀದಿಸಲು ತೀರ್ಮಾನಿಸಿದ್ದೇವೆ. ಹೀಗಾಗಿ, ಒಟ್ಟು 104 ವೆಂಟಿಲೇಟರ್‌ ಸಿಕ್ಕಂತಾಗುತ್ತದೆ.

ಲಾಕ್‌ಡೌನ್‌ ಇನ್ನಷ್ಟು ಬಿಗಿ
‘ನಿಷೇಧಾಜ್ಞೆ ಇದ್ದರೂ ರಸ್ತೆಯಲ್ಲಿ ಸಂಚರಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಿ ತೀರಾ ಅವಶ್ಯ ಇದ್ದವರನ್ನಷ್ಟೇ ಒಳಬಿಡಲಿದ್ದೇವೆ. ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಅತ್ಯವಶ್ಯಕ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸೀಮಿತ ಜನರಿಗೆ ಮಾತ್ರ ಇಂಧನ ಭರ್ತಿ ಮಾಡುವಂತೆ ಬಂಕ್‌ ಮಾಲೀಕರಿಗೆ ಸೂಚನೆ ನೀಡಿದ್ದೇನೆ. ಕೆಲ ದಿನಗಳ ಹಿಂದೆಯೇ ಈ ತೀರ್ಮಾನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿತ್ತು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಕೊರೊನಾ ಸೋಂಕಿತರು ಹಾಗೂ ಇತರ ಕಾಯಿಲೆಯವರಿಗೆ ಚಿಕಿತ್ಸೆ ನೀಡಿದ್ದರಿಂದ ಬೇರೆಯವರಿಗೂ ಸೋಂಕು ತಗುಲಿರುವ ಮಾಹಿತಿ ಬಂದಿದೆ. ಅದಕ್ಕೂ ಮೊದಲೇ ಮುಂಜಾಗೃತಾ ಕ್ರಮವಾಗಿ ನಾವು ಜಿಮ್ಸ್ ಹಾಗೂ ಇಎಸ್‌ಐಸಿಯಲ್ಲಿ ಒಪಿಡಿ ಹಾಗೂ ಒಳರೋಗಿಗಳ ವಿಭಾಗಗಳನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡೆವು. ಈ ಆಸ್ಪತ್ರೆಗಳಿಗೆ ಬರುವವರು ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇತರ ಖಾಸಗಿ ಆಸ್ಪತ್ರೆಗಳಿಗೂ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಕರ್ತವ್ಯ ಮರೆತು ಚಿಕಿತ್ಸೆ ನಿರಾಕರಿಸಿದರೆ ಅಂಥವರ ಲೈಸೆನ್ಸ್‌ ರದ್ದುಗೊಳಿಸಲೂ ಹಿಂಜರಿಯುವುದಿಲ್ಲ’ ಎಂದು ಜಿಲ್ಲಾಧಿಕಾರಿ ಅವರು ಇಎಸ್‌ಐಸಿ ಹಾಗೂ ಜಿಮ್ಸ್‌ ಆಸ್ಪತ್ರೆಗಳನ್ನು ಕೋವಿಡ್ 19 ಆಸ್ಪತ್ರೆಗಳನ್ನಾಗಿ ಪರಿವರ್ತಿಸುವುದರಿಂದ ಬೇರೆ ಕಾಯಿಲೆ ಇದ್ದ ರೋಗಿಗಳಿಗೆ ಪರ್ಯಾಯ ಕ್ರಮಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT