ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಗೆ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ: ಮಲ್ಲಿಕಾರ್ಜುನ ಕಡಕೋಳ

ಯುಗದರ್ಶಿನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಹೇಳಿಕೆ
Last Updated 8 ನವೆಂಬರ್ 2021, 7:04 IST
ಅಕ್ಷರ ಗಾತ್ರ

ಕಲಬುರಗಿ: ‘ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆ ಹೊಂದಿರುವ ಕಲಬುರಗಿಯ ನೆಲ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ ಹೊಂದಿದೆ. ಹೊರಗಿನಿಂದ ಬಂದವರನ್ನು ಈ ನೆಲ ಒಪ್ಪಿಕೊಂಡಿದೆ. ಹೊರಗಿನಿಂದ ಬಂದವರು ಕಲಬುರಗಿಗೆ ಸಾಂಸ್ಕೃತಿಕವಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ’ ಎಂದು ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಸಿದ್ದಲಿಂಗೇಶ್ವರ ಪ್ರಕಾಶನ, ಪ್ರಕಾಶ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ನಡೆದ ಸಾಧಕರಿಗೆ ಯುಗದರ್ಶಿನಿ ಪ್ರಶಸ್ತಿ, ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಹಿತಿಗಳಾದ ಎ.ಕೆ.ರಾಮೇಶ್ವರ ಮತ್ತು ಸರಸ್ವತಿ ಚಿಮ್ಮಲಗಿ ಅವರು ಪಕ್ಕದ ವಿಜಯಪುರದವರು ಆಗಿದ್ದರೂ ಈಗ ಕಲಬುರಗಿಯ ಭಾಗವೇ ಆಗಿದ್ದಾರೆ. ಕರ್ನಾಟಕದ ಏಕೀಕರಣದ ಬಳಿಕ ರಾಜಕೀಯ ಏಕೀಕರಣವಾಗಿದೆ ಹೊರತು ಸಾಂಸ್ಕೃತಿಕ ಏಕೀಕರಣ ಆಗಿಲ್ಲ. ಈ ನೆಲದ ಕನ್ನಡ, ಸಾಂಸ್ಕೃತಿಕ, ಸಮೃದ್ಧಿಗೆ ಮಾನ್ಯತೆ ಸಿಕ್ಕಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಹಿರಿಯರಾದ ರಾಮೇಶ್ವರ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಆಗಿಲ್ಲ ಎಂಬುವುದು ಬೇಸರದ ಸಂಗತಿ’ ಎಂದರು.

‘ನಮ್ಮಲ್ಲಿ ಎಲ್ಲ ಜಾತಿ, ಧರ್ಮದವರು ಸೇರಿ 500 ತತ್ವಪದಕಾರರು ಇದ್ದಾರೆ. ಆದರೆ, ಸದ್ಯ ಕಡಕೋಳ ಮಡಿವಾಳಪ್ಪನವರ ತತ್ವಗಳ ಸಂಗ್ರಹ ಮಾತ್ರ ಇದೆ. ಉಳಿದವರ ತತ್ವ ಪದಗಳನ್ನು ಗುರುತಿಸುವ ಕೆಲಸವಾಗಬೇಕು. ಇದಕ್ಕಾಗಿ ತತ್ವಗಳ ಅಧ್ಯಯನ ಪ್ರಾಧಿಕಾರ ಸ್ಥಾಪನೆ ಮಾಡಬೇಕಿದೆ’ ಎಂದರು.

ಲೇಖಕಿ ಡಾ. ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಪುಸ್ತಕಗಳ ಮೂಲಕ ತುಲಾಭಾರ ಮಾಡುವ ಪರಿಪಾಠ ಹಾಕಿಕೊಳ್ಳಬೇಕು. ಮಠ–ಮಾನ್ಯಗಳು ಇಂಥ ಪದ್ಧತಿ ಅಳವಡಿಸಿಕೊಂಡು ಜ್ಞಾನ ಹಂಚುವ ಕೆಲಸ ಮಾಡಬೇಕು’ ಎಂದರು. ‘ಮಹಿಳೆಯರಿಗೆ ಪುರುಷರ ಸಹಕಾರ ಇರಬೇಕು. ಆಗ ಮಹಿಳೆಯರು ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಡೋಣೂರ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉಪಾಧ್ಯಕ್ಷೆ ಹೇಮಾ ಕೊಡ್ಡಣ್ಣನವರ್ ಮಾತನಾಡಿದರು.ಸಾಹಿತಿಗಳಾದ ಎ.ಕೆ.ರಾಮೇಶ್ವರ ಅವರಿಗೆ ಜೀವಮಾನ ಸಾಧನೆ ಸಮ್ಮಾನ ಮತ್ತು ಡಾ.ಸರಸ್ವತಿ ಚಿಮ್ಮಲಗಿ ಅವರಿಗೆ ಸರಸ್ವತಿ ಸಮ್ಮಾನ ಗ್ರಂಥ ತುಲಾಭಾರ ಮಾಡಲಾಯಿತು.ವಿಶಾಲಾಕ್ಷಿ ಕರಡ್ಡಿ, ಮಹಿಪಾಲರೆಡ್ಡಿ ಮನ್ನೂರ, ಸಿ.ಎನ್.ಬಾಬಳಗಾಂವ, ಎಚ್.ಎನ್. ಮಹಾಬಲೇಶ್ವರಪ್ಪ ಅವರಿಗೆ ಯುಗದರ್ಶಿನಿ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಯುಗದರ್ಶಿನಿ ಪುರಸ್ಕಾರ ಮತ್ತು ಸಾವಿತ್ರಿಬಾಯಿ ಫುಲೆ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.

ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸೇವಂತಾ ಚವ್ಹಾಣ, ಶ್ರೀಸಿದ್ಧಲಿಂಗೇಶ್ವರ ಪ್ರಕಾಶನದ ಅಧ್ಯಕ್ಷ ಬಸವರಾಜ ಕೊನೆಕ್, ಪ್ರಕಾಶ ಎಜುಕೇಶನ್ ಟ್ರಸ್ಟ್ ಅಧ್ಯಕ್ಷೆ ಸುಶೀಲಮ್ಮ ಪ್ರಕಾಶ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT