ಹೈಕೋರ್ಟ್‌ ಪೀಠಕ್ಕೆ ದಶಮಾನೋತ್ಸವ ಸಂಭ್ರಮ

7
ಹತ್ತು ವರ್ಷಗಳಲ್ಲಿ ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ

ಹೈಕೋರ್ಟ್‌ ಪೀಠಕ್ಕೆ ದಶಮಾನೋತ್ಸವ ಸಂಭ್ರಮ

Published:
Updated:
Deccan Herald

ಕಲಬುರ್ಗಿ: ‘ಪ್ರಾದೇಶಿಕ ಅಸಮಾನತೆ ನಿವಾರಣೆ’ ಹಾಗೂ ‘ನೊಂದವರಿಗೆ ಅವರ ಸನಿಹದಲ್ಲೇ ಶೀಘ್ರ ನ್ಯಾಯದಾನ’ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಹೈಕೋರ್ಟ್‌ನ ಕಲಬುರ್ಗಿ ಪೀಠಕ್ಕೆ ದಶಮಾನೋತ್ಸವದ ಸಂಭ್ರಮ.

ಶನಿವಾರ (ಸೆ.8ರಂದು) ದಶಮಾನೋತ್ಸವ ಸಮಾರಂಭ ನಡೆಯಲಿದ್ದು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಪಾಲ್ಗೊಳ್ಳಲಿದ್ದಾರೆ.

ಹತ್ತು ವರ್ಷಗಳಲ್ಲಿ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ಇತ್ಯರ್ಥಗೊಂಡಿವೆ. ಆದರೆ, ಈ ಪೀಠದಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ದಾಖಲಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ.

ಕಲಬುರ್ಗಿ ಮತ್ತು ಧಾರವಾಡದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠಗಳನ್ನು ಸ್ಥಾಪಿಸಲಾಗಿತ್ತು. ನಂತರ ಎರಡನ್ನೂ ಕಾಯಂ ಪೀಠಗಳನ್ನಾಗಿ ಪರಿವರ್ತಿಸಲಾಯಿತು. ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಕಲಬುರ್ಗಿ ಪೀಠದ ವ್ಯಾಪ್ತಿಯಲ್ಲಿವೆ.

58 ಎಕರೆ 28 ಗುಂಟೆ ವಿಶಾಲ ಸ್ಥಳದಲ್ಲಿ ಹೈಕೋರ್ಟ್‌ ಕಟ್ಟಡ ತಲೆ ಎತ್ತಿದೆ. ಮೂರು ಮಹಡಿಯ ಈ ಕಟ್ಟಡ ಬೆಂಗಳೂರಿನ ಹೈಕೋರ್ಟ್‌ ಮಾದರಿಯಲ್ಲಿಯೇ ಇದೆ. ‘ಬೆಂಗಳೂರು ಹಾಗೂ ಧಾರವಾಡಗಳಿಗಿಂತಲೂ ಈ ಕಟ್ಟಡ ಹೆಚ್ಚು ಆಕರ್ಷಕವಾಗಿದೆ’ ಎಂದು ವಕೀಲರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಈ ಕಟ್ಟಡದಲ್ಲಿ ಆಸ್ಪತ್ರೆ, ಅಂಚೆ ಕಚೇರಿ, ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಶಾಖೆ, ಕ್ಯಾಂಟೀನ್‌, ಸಿಬ್ಬಂದಿಗೆ 180 ವಸತಿಗೃಹ, ನ್ಯಾಯಮೂರ್ತಿಗಳಿಗೆ ಆರು ಬಂಗಲೆಗಳು, ಎಂಟು ಸೂಟ್‌ಗಳನ್ನು ಹೊಂದಿರುವ ಅತಿಥಿಗೃಹ, ಕ್ಲಬ್‌ ಹೌಸ್‌, ಎರಡು ಗಾರ್ಡ್‌ ಕೋಣೆಗಳಿವೆ. ಆಕರ್ಷಕ ಹುಲ್ಲುಹಾಸು, ಉದ್ಯಾನಗಳು ಇವೆ.

ಸುಂದರ ಕಟ್ಟಡ, ಸ್ವಚ್ಛ ಪರಿಸರದಿಂದ ಇದು ಕಲಬುರ್ಗಿ ನಗರದ ಪ್ರಮುಖ ಆಕರ್ಷಣೆಯೂ ಆಗಿದೆ.

ಜುಲೈ 5ರಂದು ಉದ್ಘಾಟನೆಯಾಗಿತ್ತು

ಸಂಚಾರಿ ಪೀಠವನ್ನು ಜುಲೈ 5, 2008ರಂದು ಸುಪ್ರೀಂ ಕೋರ್ಟ್‌ನ ಆಗಿನ ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್‌  ಅವರು ಉದ್ಘಾಟಿಸಿದ್ದರು. ಪೂರ್ಣಪ್ರಮಾಣದ ಪೀಠವನ್ನು ಆಗಸ್ಟ್‌ 31, 2013ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗೋಪಾಲಗೌಡ ಅವರು ಉದ್ಘಾಟಿಸಿದ್ದರು.

ಮೂವರು ನ್ಯಾಯಮೂರ್ತಿಗಳು

ಕಲಬುರ್ಗಿ ಹೈಕೋರ್ಟ್‌ನಲ್ಲಿ ಆರು ಪೀಠಗಳು ಇವೆ. ಸದ್ಯ ಇಲ್ಲಿ ಮೂವರು ನ್ಯಾಯಮೂರ್ತಿಗಳು ಸರದಿಯಂತೆ ಎಂಟು ವಾರಗಳ ಅವಧಿಗೆ ಕಾರ್ಯನಿರ್ವಹಿಸುತ್ತಾರೆ.

ಈಗ ನ್ಯಾಯಮೂರ್ತಿ ಎಸ್‌.ಸುಜಾತಾ, ನ್ಯಾಯಮೂರ್ತಿ ಎನ್‌.ಕೆ. ಸುಧೀಂದ್ರರಾವ್‌, ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

‘ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಇನ್ನೂ ಇಬ್ಬರು ಇಲ್ಲವೆ ಮೂವರು ನ್ಯಾಯಮೂರ್ತಿಗಳು ಇಲ್ಲಿ ಕಾರ್ಯನಿರ್ವಹಿಸುವಂತಾಗಬೇಕು’ ಎಂದು ವಕೀಲರು ಹೇಳುತ್ತಾರೆ.

224 ಸದಸ್ಯರು

‘ಗುಲಬರ್ಗಾ ನ್ಯಾಯವಾದಿಗಳ ಸಂಘ’ಕ್ಕೆ ಜಿಲ್ಲಾ ನ್ಯಾಯಾಲಯ ಘಟಕ ಹಾಗೂ ಹೈಕೋರ್ಟ್‌ ಘಟಕ ಇವೆ. ಎರಡೂ ಘಟಕಗಳಿಗೆ ಒಬ್ಬರೇ ಅಧ್ಯಕ್ಷರು. ಹೈಕೋರ್ಟ್‌ ಘಟಕಕ್ಕೆ ಪ್ರತ್ಯೇಕ ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದಾರೆ. ಜಿಲ್ಲಾ ಘಟಕಕ್ಕೆ 1800ಕ್ಕೂ ಹೆಚ್ಚು ಹಾಗೂ ಹೈಕೋರ್ಟ್‌ ಘಟಕಕ್ಕೆ 224 ವಕೀಲರು ಸದಸ್ಯರಾಗಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !