ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನ ನಾಲ್ವರ ಪೈಪೋಟಿ

ಬಿಜೆಪಿಯಲ್ಲಿಯೂ ತೀವ್ರ ಚಟುವಟಿಕೆ; ಪಕ್ಷೇತರರೇ ನಿರ್ಣಾಯಕ
Last Updated 21 ಸೆಪ್ಟೆಂಬರ್ 2018, 15:29 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದಲ್ಲಿ ಲತಾ ರಾಠೋಡ, ಮಲ್ಲಮ್ಮ ವಳಕೇರಿ, ಯಾಸ್ಮೀನ್‌ ಬೇಗಂ, ಆಲಿಯಾ ಶೀರಿನ್‌ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಶುಕ್ರವಾರ ಇಲ್ಲಿ ನಡೆಸಿದ ಪಾಲಿಕೆಯ ಸದಸ್ಯರ ಸಭೆಯಲ್ಲಿ ಈ ನಾಲ್ವರ ಬಗ್ಗೆ ಸದಸ್ಯರು ಒಲವು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

‘ಮೇಯರ್‌ ಹಾಗೂ ಉಪ ಮೇಯರ್‌ ಹುದ್ದೆಗಳಿಗೆ ಹಿಂದೂ–ಮುಸ್ಲಿಂರ ಮಧ್ಯೆ ಅಧಿಕಾರ ಹಂಚಿಕೆಯ ಸೂತ್ರ ಈ ಬಾರಿಯೂ ಮುಂದುವರೆಯಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಅಭಿಪ್ರಾಯ ಸಂಗ್ರಹ: ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪಾಲಿಕೆಯ ಕಾಂಗ್ರೆಸ್‌ ಪಕ್ಷದ ಎಲ್ಲ ಸದಸ್ಯರು ಹಾಗೂ 12 ಜನ ಪಕ್ಷೇತರ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಮೊದಲಿಗೆ ಎಲ್ಲ ಸದ್ಯರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿದರು. ನಂತರ ಒಟ್ಟಾಗಿ ಸಭೆ ನಡೆಸಿದರು.

‘ಮೇಯರ್–ಉಪ ಮೇಯರ್‌ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಇಲ್ಲ. ನಿಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಘೋಷಿಸಿತ್ತೇವೆ. ಪಕ್ಷ ಕೈಗೊಳ್ಳುವ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು’ ಎಂದು ಅವರು ಕೋರಿದರು.

ಒಮ್ಮತದ ಅಭ್ಯರ್ಥಿಗಳ ಆಯ್ಕೆ: ‘ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಬೆಂಬಲಿಸುತ್ತಿರುವ ಪಕ್ಷೇತರ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ 14 ಜನ ಸದಸ್ಯೆಯರಿದ್ದು, ಎಲ್ಲರೂ ಆಕಾಂಕ್ಷಿಗಳಾಗಿದ್ದಾರೆ. ಯಾರ ಹೆಸರೂ ಅಂತಿಮವಾಗಿಲ್ಲ. ಶನಿವಾರ ಬೆಳಿಗ್ಗೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸುವ ಹೆಸರನ್ನು ಅಲ್ಲಿ ಪ್ರಕಟಿಸಲಾಗುವುದು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ತಿಳಿಸಿದರು.

ಬಿಜೆಪಿಯಿಂದಲೂ ಕಣಕ್ಕೆ: ಬಿಜೆಪಿಯಿಂದ ಮೇಯರ್‌ ಸ್ಥಾನಕ್ಕೆ ಆರತಿ ತಿವಾರಿ ಸ್ಪರ್ಧಿಸಲಿದ್ದಾರೆ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ.

‘ಚರ್ಚೆ ನಡೆದಿದ್ದು, ನಾನು ಸ್ಪರ್ಧಿಸುವುದು ಇನ್ನೂ ಅಂತಿಮವಾಗಿಲ್ಲ’ ಎಂದು ಆರತಿ ತಿವಾರಿ ಪ್ರತಿಕ್ರಿಯಿಸಿದರು.

‘ಪಕ್ಷೇತರರನ್ನು ಸೆಳೆದು ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಕಡೆಗಳಲ್ಲಿ ಶುಕ್ರವಾರ ತಡರಾತ್ರಿಯವರೆಗೂ ಸಭೆಗಳು ನಡೆದವು’ ಎಂದು ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT