ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಒಕ್ಕೂಟ: 9 ಸ್ಥಾನಗಳಿಗೆ 16 ಜನ ಕಣದಲ್ಲಿ

ಇಂದು ಮತದಾನ; ಸಂಜೆ ವೇಳೆಗೆ ಫಲಿತಾಂಶ
Last Updated 30 ಅಕ್ಟೋಬರ್ 2018, 13:36 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಅ.31ರಂದು ಬೆಳಿಗ್ಗೆ 8ರಿಂದ ಸಂಜೆ 4ರ ವರೆಗೆ ಒಕ್ಕೂಟದ ಸ್ಥಳೀಯ ಮುಖ್ಯ ಕಚೇರಿಯಲ್ಲಿ ಮತದಾನ ನಡೆಯಲಿದೆ. ಸಂಜೆಯ ವೇಳೆಗೆ ಫಲಿತಾಂಶ ಹೊರಬರಲಿದೆ.

ಒಕ್ಕೂಟದ ಆಡಳಿತ ಮಂಡಳಿಯ 15 ಸ್ಥಾನಗಳ ಪೈಕಿ ಬೀದರ್‌ ಉಪ ವಿಭಾಗದ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಯಾದಗಿರಿ ಉಪ ವಿಭಾಗದಲ್ಲಿ ಮೂರು ಸ್ಥಾನಗಳು ಇದ್ದು, ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಂಘಗಳು ಅರ್ಹತೆ ಪಡೆದಿಲ್ಲ. ಹೀಗಾಗಿ ಆ ಮೂರು ಸ್ಥಾನ ಖಾಲಿ ಉಳಿಯಲಿವೆ.

ಕಲಬುರ್ಗಿಯ ನಾಲ್ಕು, ಸೇಡಂನ ಎರಡು ಮತ್ತು ಬಸವಕಲ್ಯಾಣ ಉಪ ವಿಭಾಗದ ಮೂರು ಹೀಗೆ ಒಟ್ಟು ಒಂಬತ್ತು ಸ್ಥಾನಗಳಿಗೆ ಮತದಾನ ನಡೆಯಲಿದ್ದು, 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅವಿರೋಧ ಆಯ್ಕೆಯಾಗಿರುವ ಮೂವರಲ್ಲಿ ಇಬ್ಬರು ಪುನರಾಯ್ಕೆಯಾಗಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಆರು ಜನ ಮರು ಆಯ್ಕೆ ಬಯಸಿದ್ದಾರೆ.

ಐದು ಉಪ ವಿಭಾಗ: ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟದಲ್ಲಿ ಐದು ಉಪ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಬೀದರ್‌ ಮತ್ತು ಔರಾದ್ ತಾಲ್ಲೂಕುಗಳನ್ನು ಒಳಗೊಂಡಿರುವ ಬೀದರ್‌ ಉಪ ವಿಭಾಗದಲ್ಲಿ ಮೂರು 3 ಸ್ಥಾನಗಳಿದ್ದು ಅಲ್ಲಿಅವಿರೋಧ ಆಯ್ಕೆ ನಡೆದಿದೆ. ಅಲ್ಲಿ 17 ಮತದಾರರು ಇದ್ದಾರೆ.

ಭಾಲ್ಕಿ, ಹುಮನಾಬಾದ್ ಮತ್ತು ಬಸವಕಲ್ಯಾಣ ತಾಲ್ಲೂಕುಗಳನ್ನು ಒಳಗೊಂಡಿರುವ ಬಸವಕಲ್ಯಾಣ ಉಪ ವಿಭಾಗ ಮೂರು ಸ್ಥಾನಗಳನ್ನು ಹೊಂದಿದ್ದು, ನಾಲ್ವರು ಕಣದಲ್ಲಿದ್ದಾರೆ. 51 ಮತದಾರರು ಇದ್ದಾರೆ.

ಸೇಡಂ, ಚಿಂಚೋಳಿ, ಚಿತ್ತಾಪುರ ತಾಲ್ಲೂಕುಗಳನ್ನು ಒಳಗೊಂಡಿರುವ ಸೇಡಂ ಉಪ ವಿಭಾಗ ಎರಡು ಸ್ಥಾನಗಳನ್ನು ಹೊಂದಿದ್ದು, ನಾಲ್ವರು ಕಣದಲ್ಲಿದ್ದಾರೆ. 14 ಜನ ಮತದಾರರು ಇದ್ದಾರೆ.

ಕಲಬುರ್ಗಿ, ಆಳಂದ, ಅಫಜಲಪುರ, ಜೇವರ್ಗಿ ತಾಲ್ಲೂಕುಗಳ ವ್ಯಾಪ್ತಿ ಹೊಂದಿರುವ ಕಲಬುರ್ಗಿ ಉಪ ವಿಭಾಗ ನಾಲ್ಕು ಸ್ಥಾನಗಳನ್ನು ಹೊಂದಿದೆ. ಇಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದು, 38 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ಇಡೀ ಯಾದಗಿರಿ ಜಿಲ್ಲೆಯನ್ನು ಒಂದು ಉಪ ವಿಭಾಗ ಎಂದು ಒಕ್ಕೂಟ ಪರಿಗಣಿಸಿದ್ದು, ಅಲ್ಲಿ ಮೂರು ಸ್ಥಾನಗಳಿವೆ. ಒಬ್ಬರು ಮತದಾರರು ಇದ್ದು, ಅಲ್ಲಿ ಚುನಾವಣೆ ನಡೆಯುತ್ತಿಲ್ಲ.

ಒಟ್ಟು 121 ಅರ್ಹ ಮತದಾರರು ಇದ್ದರೂ ಬೀದರ್‌ ಉಪ ವಿಭಾಗದಲ್ಲಿ ಅವಿರೋಧ ಆಯ್ಕೆ ನಡೆದಿದೆ. ಯಾದಗಿರಿಯಲ್ಲಿ ಸ್ಪರ್ಧೆಗೆ ಯಾರೂ ಅರ್ಹತೆ ಪಡೆದಿಲ್ಲ. ಹೀಗಾಗಿ ಬೀದರ್‌ನ 17 ಮತ್ತು ಯಾದಗಿರಿಯ ಒಬ್ಬರು ಮತದಾನ ಮಾಡುತ್ತಿಲ್ಲ. ಹೀಗಾಗಿ ಮತದಾನ ಮಾಡುವ ಮತದಾರರ ಸಂಖ್ಯೆ 103 ಮಾತ್ರ.

ಬಸವಕಲ್ಯಾಣ ಉಪವಿಭಾಗ: ಬಂಡುರಾವ್ ಕಿಶನರಾವ್ ಕುಲಕರ್ಣಿ, ರೇವಣಸಿದ್ದಪ್ಪ ವೀರಣ್ಣ ಪಾಟೀಲ, ಶಾಂತಕುಮಾರ ವೀರಶೆಟ್ಟಿ ಹಾಗೂ ಶ್ರೀಕಾಂತ ವೈಜನಾಥ ದಾನಿ.

ಸೇಡಂ ಉಪವಿಭಾಗ: ಅಶೋಕ ಅಣ್ಣಾರಾವ, ದಿವಾಕರರಾವ್ ಕಿಶನ್‌ರಾವ್ ಜಹಗೀರದಾರ, ವಿಠ್ಠಲರಡ್ಡಿ ಕಿಷ್ಣಾರಡ್ಡಿ ಹಾಗೂ ಸುಭಾಷ ಧರ್ಮಣ್ಣ.

ಕಲಬುರ್ಗಿ ಉಪವಿಭಾಗ: ಅರವಿಂದ ವೆಂಕಯ್ಯ ಗುತ್ತೇದಾರ, ಈರಣ್ಣ ಶಿವಲಿಂಗಪ್ಪ ಝಳಕಿ, ಚಂದ್ರಕಾಂತ ಗುರುಶಾಂತಪ್ಪ ಭೂಸನೂರ, ಮಲ್ಲಿನಾಥ ಸಂಗಪ್ಪ ಪೊಲೀಸ್‌ ಪಾಟೀಲ, ರವೀಂದ್ರ ಕರಬಸಪ್ಪ ಪಾಟೀಲ, ರಾಮಚಂದ್ರಪ್ಪ ಕಲ್ಯಾಣರಾವ ಪಾಟೀಲ, ವಿಶ್ವನಾಥ ಶಿವಶರಣಪ್ಪ ಪಾಟೀಲ, ಸಂತೋಷ ಸುಭಾಷ ಗುತ್ತೇದಾರ.

‌‌ಅವಿರೋಧ ಆಯ್ಕೆಯಾದವರು: ಮಾರುತಿ ಕಾಶೆಂಪೂರ, ಮಲ್ಲಿಕಾರ್ಜುನ ಬಿರಾದಾರ (ಪರಿಹಾರ), ಭೀಮರಾವ್ ಬಳತೆ

ಯಾದಗಿರಿ ಜಿಲ್ಲೆಯಲ್ಲಿ ‘ಅರ್ಹ’ರೇ ಇಲ್ಲ!
ಯಾದಗಿರಿ ಜಿಲ್ಲೆಯನ್ನು ಒಂದು ಉಪ ವಿಭಾಗ ಎಂದು ಒಕ್ಕೂಟ ಪರಿಗಣಿಸಿದೆ.ಅಲ್ಲಿಂದ ಆಡಳಿತ ಮಂಡಳಿಗೆ ಮೂವರು ನಿರ್ದೇಶಕರು ಆಯ್ಕೆಯಾಗಬೇಕು.

‘ಚುನಾವಣೆಗೆ ಸ್ಪರ್ಧಿಸಲು ಯಾರೂ ಅರ್ಹತೆ ಪಡೆದಿಲ್ಲ. ಹೀಗಾಗಿ ಅಲ್ಲಿಂದ ಯಾರೂ ಸ್ಪರ್ಧಿಸಿಲ್ಲ. ಆದರೆ, ಸುರಪುರ ತಾಲ್ಲೂಕು ಗೆದ್ದಲಮರಿ ಹಾಲು ಉತ್ಪಾದಕರ ಸಹಕಾರ ಸಂಘದವರು ಹೈಕೋರ್ಟ್‌ ಮೊರೆ ಹೋಗಿ ಮತದಾನದ ಹಕ್ಕು ಪಡೆದಿದ್ದಾರೆ. ಆದರೆ, ಅವರ ಕ್ಷೇತ್ರದಿಂದ ಮತದಾನ ನಡೆಯದ ಕಾರಣ ಅವರಿಗೆ ಮತದಾನಕ್ಕೆ ಅವಕಾಶ ಇಲ್ಲ’ ಎನ್ನುತ್ತವೆ ಒಕ್ಕೂಟದ ಮೂಲಗಳು.

ಅರ್ಹತೆ ಏನು?
ಒಕ್ಕೂಟದ ಸದಸ್ಯತ್ವ ಹೊಂದಿರುವಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಅಥವಾ ಆ ಸಂಘದ ಆಡಳಿತ ಮಂಡಳಿಯಿಂದ ಸೂಚಿಸಲ್ಪಡುವ ಒಬ್ಬ ನಿರ್ದೇಶಕರು ಒಕ್ಕೂಟದ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಲು ಅಥವಾ ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಆದರೆ, ಅದಕ್ಕೆ ಕೆಲವೊಂದಿಷ್ಟು ಷರತ್ತುಗಳೂ ಇವೆ.

‘ಆ ಹಾಲು ಉತ್ಪಾದಕರ ಸಂಘದವರು ವರ್ಷದಲ್ಲಿ ಕನಿಷ್ಠ 270 ದಿನ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡಿರಬೇಕು. ಐದು ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಮೂರು ಮಹಾಸಭೆಗಳಿಗೆ ಹಾಜರಾಗಿರಬೇಕು. ಸ್ಪರ್ಧೆ ಹಾಗೂ ಮತದಾನಕ್ಕೆ ಈ ಎರಡೂ ಷರತ್ತು ಅನ್ವಯಿಸುತ್ತವೆ’ ಎಂಬುದು ಒಕ್ಕೂಟದ ಮೂಲಗಳ ಮಾಹಿತಿ.

25 ಸಂಘಗಳಿಗೆ ಆಡಳಿತ ಮಂಡಳಿಗಳೇ ಇಲ್ಲ!
ಈ ಒಕ್ಕೂಟದಲ್ಲಿ 575 ಹಾಲು ಉತ್ಪಾದಕರ ಸಹಕಾರ ಸಂಘಗಳು ಸದಸ್ಯತ್ವ ಪಡೆದಿವೆ. ಆ ಪೈಕಿ 269 ಸಂಘದವರು ಒಕ್ಕೂಟಕ್ಕೆ ಕನಿಷ್ಠ 270 ದಿನ ಹಾಲು ಪೂರೈಸಿದ್ದಾರೆ.

‘ಈ 270 ಸಂಘಗಳ ಪೈಕಿ 113 ಸಂಘದವರು ಮೂರು ವಾರ್ಷಿಕ ಮಹಾಸಭೆಗೆ ಹಾಜರಾಗಿದ್ದಾರೆ. ಆದರೂ ಕರಡು ಮತದಾರರ ಪಟ್ಟಿಯಲ್ಲಿ88 ಸಂಘದವರುಮಾತ್ರ ಅರ್ಹತೆ ಪಡೆದಿದ್ದರು.ಏಕೆಂದರೆ ಉಳಿದ 25 ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಯ ಐದು ವರ್ಷದ ಅವಧಿ ಪೂರ್ಣಗೊಂಡಿದೆ. ಆದರೆ, ಅವುಗಳಿಗೆ ಚುನಾವಣೆ ನಡೆದಿಲ್ಲ. ಚುನಾವಣೆ ನಡೆದಿಲ್ಲ ಎಂದರೆ ಆ ಸಂಘಗಳಿಗೆ ಆಡಳಿತ ಮಂಡಳಿ ಇಲ್ಲ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಅಂತಹ ಸಂಘಗಳಿಗೆ ಮತದಾನ ಮತ್ತು ಸ್ಪರ್ಧೆಗೆ ಅರ್ಹತೆ ಇಲ್ಲವಾಗುತ್ತದೆ. ಆ ಕಾರಣಕ್ಕಾಗಿ 25 ಸಂಘಗಳನ್ನು ಮತದಾರರ ಕರಡು ಪಟ್ಟಿನಿಂದ ಹೊರಗಿಡಲಾಗಿತ್ತು’ಎಂಬುದು ಒಕ್ಕೂಟದ ವಿವರಣೆ.

‘ಈ ಕ್ರಮ ಖಂಡಿಸಿ ಕೆಲವರು ಹೈಕೋರ್ಟ್‌ ಮೊರೆ ಹೋದರು. ಸ್ಪರ್ಧೆಗೆ ಅಲ್ಲದಿದ್ದರೂ ಮತದಾನಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್‌ ಆದೇಶಿಸಿದೆ. ಹೀಗಾಗಿ ಒಟ್ಟು ಮತದಾರರ ಪಟ್ಟಿಯಲ್ಲಿ ಬದಲಾವಣೆಯಾಯಿತು’ ಎಂಬುದು ಆ ಮೂಲಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT