ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಖಜಾನೆಗೆ ‘ಚಿನ್ನ’ವಾದ ಸುಣ್ಣದ ‘ಕಲ್ಲು’

Last Updated 18 ಆಗಸ್ಟ್ 2022, 15:34 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಒಡಲಲ್ಲಿ ಹೇರಳವಾಗಿ ಹುದುಗಿರುವ ಸುಣ್ಣದ ಕಲ್ಲಿನಂತಹ (ಶಹಾಬಾದ್‌ ಸ್ಟೋನ್) ಖನಿಜಗಳ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಗಣನೀಯವಾಗಿ ಹೆಚ್ಚಳಗೊಂಡಿದೆ.

ಸುಣ್ಣದ ಕಲ್ಲು, ಫುಲ್ಲರ್ಸ್ ಅರ್ಥ, ರೆಡ್ ಅಕರ್, ಸಾಧಾರಣ ಮರಳು, ಕ್ವಾರ್ಟ್ಸ್, ಬಳಪದ ಕಲ್ಲಿನಂತಹ 20ಕ್ಕೂ ಹೆಚ್ಚು ಬಗೆಯ ಖನಿಜಗಳು ಜಿಲ್ಲೆಯಲ್ಲಿವೆ. ಇವುಗಳಲ್ಲಿ ಸುಣ್ಣದ ಕಲ್ಲು ಪ್ರಮುಖ ಹಾಗೂ ಕಟ್ಟಡ ಕಲ್ಲು, ಪುಲ್ಲರ್ಸ್‌ ಅರ್ಥ, ನಾರ್ಮಲ್ ಸ್ನ್ಯಾಡ್‌ ಅನ್ನು ಸಾಧಾರಣ ಖನಿಜವೆಂದು ಪರಿಗಣಿಸಲಾಗಿದೆ.

ಜಿಲ್ಲೆಯಾದ್ಯಂತ 246 ಕಲ್ಲು ಗಣಿಗಳು 490.57 ಎಕರೆ ಪ್ರದೇಶದಲ್ಲಿ ಗಣಿಗಾರಿಕೆಯಲ್ಲಿ ಸಕ್ರಿಯವಾಗಿವೆ. ಇವುಗಳಿಂದ 2021–22ನೇ ಸಾಲಿನಲ್ಲಿ ಜಿಲ್ಲೆಯ ಬೊಕ್ಕಸಕ್ಕೆ ₹294.96 ಕೋಟಿ ಹರಿದು ಬಂದಿದೆ.

ಮಾರ್ಬಲ್‌ ವಾಲ್ ಟೈಲ್ಸ್, ಗ್ಲಾಸ್ ವಾಲ್ ಟೈಲ್ಸ್, ಗ್ಲೇಜ್ಡ್ ಸೆರಾಮಿಕ್ ಟೈಲ್ಸ್, ಮೊಸಾಯ್ಕ್ ಟೈಲ್ಸ್, ವಿನೈಲ್‌ ಟೈಲ್ಸ್‌ನಂತಹ ನೆಲಹಾಸುಗಳ ನಡುವೆ ಶಹಾಬಾದ್ ಸ್ಟೋನ್ ತನ್ನ ಹೊಳಪನ್ನು ಕಾಯ್ದುಕೊಂಡಿದೆ. ಹೊರ ಜಿಲ್ಲೆ ಮತ್ತು ರಾಜ್ಯಗಳು ಸೇರಿ ವಿದೇಶದಲ್ಲೂ ಬೇಡಿಕೆ ಉಳಿಸಿಕೊಂಡಿದೆ.

‘ಜಿಲ್ಲೆಯಲ್ಲಿ 246 ಕಲ್ಲು ಗಣಿಗಳು ಸಕ್ರಿಯವಾಗಿದ್ದು, ಪ್ರತಿ ಚದರ ಅಡಿಗೆ ₹5 ರಾಯಲ್ಟಿ ವಿಧಿಸಲಾಗಿದೆ. ಗಣಿಗಾರಿಕೆಯಿಂದ ಉಂಟಾಗುವ ನೈಸರ್ಗಿಕ ಪರಿಣಾಮದ ವೆಚ್ಚಕ್ಕೆ ಶೇ 10 ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ’ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಜಯರಾಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಬಳಿಕವೂ ಸುಣ್ಣದ ಕಲ್ಲು ತನ್ನ ಚಹರೆ ಉಳಿಸಿಕೊಂಡಿದೆ. 2021–22ರಲ್ಲಿ ಪ್ರಮುಖ ಖನಿಜ ಲೈಮ್‌ಸ್ಟೋನ್‌ಗೆ ₹250 ಕೋಟಿ ಮತ್ತು ಸಾಧಾರಣ ಖನಿಜಗಳಿಗೆ ₹50 ಕೋಟಿ ರಾಜಧನ ಸಂಗ್ರಹದ ಗುರಿ ಹಾಕಿಕೊಳ್ಳಲಾಗಿತ್ತು. ಇದರಲ್ಲಿ ಲೈಮ್ಸ್‌ಸ್ಟೋನ್‌ನಿಂದ ₹257.81 ಕೋಟಿ ರಾಯಲ್ಟಿ ಸಂಗ್ರಹಿಸಿ, ಶೇ 103ರಷ್ಟು ಗುರಿ ಸಾಧಿಸಲಾಗಿದೆ. ಸಾಧಾರಣ ಖನಿಜಗಳಿಂದ ಶೇ 74ರಷ್ಟು ಸಾಧ
ನೆಯಡಿ ₹37.15 ಕೋಟಿ ಕಲೆಹಾಕ
ಲಾಗಿದೆ’ ಎಂದು ಮಾಹಿತಿ ನೀಡಿದರು.

ಗಣಿಗರಿಕೆಯಿಂದ ಜಿಲ್ಲೆಗೆ ಪ್ರತಿ ವರ್ಷ ನೂರಾರು ಕೋಟಿ ರಾಜಧನ ಸಂದಾಯ ಆಗುತ್ತಿದೆ. ಆದರೆ, ನಿರೀಕ್ಷಿಸಿದಷ್ಟು ಸೌಕರ್ಯ ಸಿಗುತ್ತಿಲ್ಲ. ಅಧಿಕ ದೈಹಿಕ ಶ್ರಮ ಬೇಡುವ ಗಣಿಗಾರಿಕೆಯ ಕೆಲಸಕ್ಕೆ ಕೂಲಿಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಸರ್ಕಾರದ ಉದ್ಯೋಗ ಖಾತ್ರಿಯಂತಹ ಯೋಜನೆಗಳತ್ತ ಕಾರ್ಮಿಕರು ಮುಖ ಮಾಡಿದ್ದಾರೆ. ಕೆಲವೊಮ್ಮೆ ನಾವೇ ಯಂತ್ರಗಳನ್ನು ಹಿಡಿದು ಕಲ್ಲು ಕೊರೆಯುವ ಕೆಲಸ ಮಾಡುತ್ತೇವೆ ಎಂದು ಇಂಗಳಿ ಗಣಿ ಮಾಲೀಕರೊಬ್ಬರು ಹೇಳಿದರು.

ಕಾರ್ಖಾನೆಗಳಿಗೆ 4,485 ಹೆಕ್ಟೇರ್‌

ಸುಣ್ಣದ ಕಲ್ಲು ಬಳಕೆಗೆ 4,485 ಹೆಕ್ಟೇರ್‌ ಪ್ರದೇಶದಲ್ಲಿ ಜಿಲ್ಲೆಯಲ್ಲಿನ ಎಂಟು ಸಿಮೆಂಟ್ ಕಾರ್ಖಾನೆಗಳಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಗಣಿಗಾರಿಕೆಯಲ್ಲಿ ಬಳಕೆಯಾದ ನಂತರ ಉಳಿದ ಸಣ್ಣ ಕಲ್ಲುಗಳನ್ನು ಸಿಮೆಂಟ್ ತಯಾರಿಕೆಗೆ ಬಳಸಿಕೊಳ್ಳಲಾಗುತ್ತಿದೆ.

ಚಿಂಚೋಳಿಯ ವಿಕಾಟ ಸಾಗರ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ 446.77 ಹೆಕ್ಟೇರ್, ಕಲಬುರಗಿ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ 465.39, ಚೆಟ್ಟಿನಾಡ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ 434.84, ಚಿತ್ತಾಪುರದ ವಾಡಿಯಲ್ಲಿನ ಎಸಿಸಿ ಸಿಮೆಂಟ್ 471.03, ಇಟಗಾದ ಓರಿಯಂಟಲ್‌ ಸಿಮೆಟ್‌ ಲಿಮಿಟೆಡ್ 519, ಮಳಖೇಡದ ಇಂಡಿಯನ್ ಸಿಮೆಂಟ್ ಲಿಮಿಟೆಡ್ 733.89, ಸೇಡಂನ ವಾಸವದತ್ತ ಸಿಮೆಂಟ್ 897.23 ಹಾಗೂ ಶ್ರೀ ಸಿಮೆಂಟ್ ಲಿಮಿಟೆಡ್ 517.61 ಹೆಕ್ಟೇರ್ ಪ್ರದೇಶದ ಸುಣ್ಣದ ಕಲ್ಲಿನ ನಿಕ್ಷೇಪ ಇರುವ ಜಮೀನು ಸ್ವಾಧೀನಪಡಿಸಿಕೊಂಡಿವೆ.

*ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಹೊಸದಾಗಿ 4 ಪ್ರಸ್ತಾವಗಳು ಬಂದಿದ್ದು, ಈ ಪೈಕಿ ವಾಡಿ ಹೊರವಲಯದ ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಬಳಿ 700 ಎಕರೆ ಜಮೀನು ಖರೀದಿಯಾಗಿದೆ
-ಜಯರಾಮಗೌಡ, ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ, ಭೂವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT