ಶನಿವಾರ, ಮೇ 15, 2021
23 °C
ಅಭಿವೃದ್ಧಿ ಕಾಮಗಾರಿ ನನೆಗುದಿಗೆ, ತೆರಿಗೆ ಹಣದಲ್ಲೇ ಸಿಬ್ಬಂದಿ ಸಂಬಳ

ಕಲಬುರ್ಗಿ ಮಹಾನಗರ ಪಾಲಿಕೆಗೆ ಬಾರದ ಅನುದಾನ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾನಗರ ಪಾಲಿಕೆಗೆ ಬರಬೇಕಿದ್ದ ಅನುದಾನ ನಿಂತಿದ್ದರಿಂದ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪಾಲಿಕೆಯ ನೌಕರರ ಸಂಬಳ ಕೊಡುವುದಕ್ಕೂ ಪರದಾಡುವ ಸ್ಥಿತಿ ಬಂದಿದೆ.

ಪ್ರತಿಬಾರಿ ಪಾಲಿಕೆಯ ಆಡಳಿತ ಸಲ್ಲಿಸುವ ಕೋರಿಕೆ ಆಧರಿಸಿ ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ಅನುದಾನ ನೀಡುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಪಾಲಿಕೆಗೆ ಸದಸ್ಯರೇ ಇಲ್ಲ. ಹೀಗಾಗಿ ‘ಬಿಗಿ ಹಚ್ಚಿ’ ಅನುದಾನ ಪಡೆಯುವ ದಾರಿಗಳೇ ಇಲ್ಲವಾಗಿವೆ ಎನ್ನುತ್ತಾರೆ ಪಾಲಿಕೆಯ ಕೆಲ ಮಾಜಿ ಸದಸ್ಯರು.

2021–22ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೆಲವೇ ದಿನಗಳ ಹಿಂದೆ 15ನೇ ಹಣಕಾಸು ಯೋಜನೆಯಲ್ಲಿ ₹ 30 ಕೋಟಿ ಬಂದಿದೆ. ಅಂದರೆ; ಇನ್ನೂ 2016ರಿಮದ 2021ರವರೆಗಿನ ಹಣಕಾಸು ಯೊಜನೆಯ ಹಣ ಪೆಂಡಿಂಗ್‌ ಇದೆ. ಸದ್ಯ ಬಂದ ಅನುದಾನದಲ್ಲಿಯೇ ಪರಿಶಿಷ್ಟರ ಕಲ್ಯಾಣ (ಶೇ 24.10), ಇತರೇ ಹಿಂದುಳಿದ ವರ್ಗಗಳ ಕಲ್ಯಾಣ (ಶೇ 7.25) ಹಾಗೂ ಅಂಗವಿಕಲರಿಗಾಗಿ ಶೇ 5ರ ಅನುದಾನ ತೆಗೆದಿಟ್ಟು ಉಳಿದ್ದಕ್ಕೆ ಮಾತ್ರ ಕ್ರಿಯಾಯೋಜನೆ ರೂಪಿಸಬೇಕಾಗಿದೆ.

₹ 150 ಕೋಟಿ ಐದು ವರ್ಷಕ್ಕೆ: ಮಹಾತ್ಮ ಗಾಂಧಿ ವಿಶೇಷ ಯೋಜನೆ ಅಡಿ ಪಾಲಿಕೆಗೆ ಈ ವರ್ಷ ₹ 150 ಕೋಟಿ ಮಂಜೂರಾಗಿದೆ. ಆದರೆ, ಇದು ಐದು ವರ್ಷಗಳ ಅವಧಿಗೆ ಬಂದ ಅನುದಾನ. ಭೌತಿಕ ಅಭಿವೃದ್ಧಿ ಬಿಟ್ಟರೆ ಇದನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲೂ ಆಗುವುದಿಲ್ಲ.

ಮುಖ್ಯಮಂತ್ರಿ ನಿಧಿಯೂ ಇಲ್ಲ: 2018ರಲ್ಲಿ ಮುಖ್ಯಮಂತ್ರಿಗಳ ನಗರ ವಿಶೇಷ ಯೋಜನೆ ಅಡಿ ಬಂದಿದ್ದ ₹ 100 ಕೋಟಿಯಲ್ಲಿ ಕೈಗೆತ್ತಿಕೊಂಡ ಕೆಲಸಗಳೇ ಇನ್ನೂ ಮುಗಿದಿಲ್ಲ. ಶೇ 50ರಷ್ಟು ಕಾಮಗಾರಿಗಳು ಅನುದಾನದ ಕೊರತೆಯಿಂದಾಗಿ ನಿಂತಿವೆ. ಹಳೆಯ ಕೆಲಸಗಳು ಮುಗಿದಿದ್ದರೆ ಮತ್ತೆ ಹಣ ಕೇಳಬಹುದಿತ್ತು ಎನ್ನುವುದು ಪಾಲಿಕೆಯ ಹಿಂದಿನ ಸದಸ್ಯರ ಹೇಳಿಕೆ.

ತೆರಿಗೆ ಹಣದಲ್ಲೇ ನೌಕರರ ಸಂಬಳ: ಪಾಲಿಕೆಯ ನೌಕರರ ಸಂಬಳ, ವಾಹನ ವೆಚ್ಚ ಹಾಗೂ ಇತರೇ ಖರ್ಚುಗಳು ಸೇರಿ ಪ್ರತಿ ತಿಂಗಳು ₹ 3.5 ಕೋಟಿ ಹಣ ಬೇಕು. ಪಾಲಿಕೆಗೆ ಎಸ್‌ಎಫ್‌ಸಿ ಅನುದಾನ ನಿಂತ ಕಾರಣ, ತೆರಿಗೆಯಿಂದ ಸಂಗ್ರಹವಾದ ಹಣದಲ್ಲೇ ಸಂಬಳ ನೀಡಿ ಸರಿದೂಗಿಸಲಾಗುತ್ತಿದೆ. 

‘ಈವರೆಗೆ ಶೇ 60ರಷ್ಟು ತೆರಿಗೆ ಅಂದರೆ; ₹ 30 ಕೋಟಿ ಮಾತ್ರ ಸಂಗ್ರಹವಾಗಿದೆ. ಸಾಕಷ್ಟು ಎಚ್ಚರಿಕೆ ನೀಡಿ, ಪ್ರಕರಣ ದಾಖಲಿಸಿದರೂ ಜನರು ತೆರಿಗೆ ನೀಡಲು ಮುಂದೆ ಬರುತ್ತಿಲ್ಲ. ಮೇಲಾಗಿ ಸರ್ಕಾರಿ ಕಚೇರಿಗಳಿಂದಲೇ ಬರಬೇಕಾದ ತೆರಿಗೆ ಸಾಕಷ್ಟು ಬಾಕಿ ಇದೆ’ ಎಂಬುದು ಪಾಲಿಕೆ ಅಧಿಕಾರಿಗಳ ಮಾತು. ಇಂದಿರಾ ಕ್ಯಾಂಟೀನ್‌ಗಳು ಹೊರೆಯಾಗಿ ಪರಿಣಮಿಸಿವೆ. ನಗರದಲ್ಲಿ ಏಳು ಕ್ಯಾಂಟೀನ್‌ಗಳು ಇದ್ದು 10 ತಿಂಗಳ ಬಿಲ್‌ ಇನ್ನೂ ಬಾಕಿ ಇದೆ. ಎಸ್‌ಎಫ್‌ಸಿ ಅನುದಾನ ಬಂದರೆ ಮಾತ್ರ ಇವುಗಳಿಗೆ ಹಣ ನೀಡಲು ಸಾಧ್ಯ.

ನನೆಗುದಿಗೆ ಬಿದ್ದ ಕಾಮಗಾರಿಗಳು: ಶರಣಬಸವೇಶ್ವರ ಮಂದಿರದ ಮುಂದಿನ ರಸ್ತೆ, ಸೋನಿಯಾ ಗಾಂಧಿ ಕಾಲೊನಿಯಲ್ಲಿ ರಸ್ತೆ, ಜಾಫರಾಬಾದ್‌, ದೇವರದಾಸಿಮಯ್ಯ ಕಾಲೊನಿ, ಅಮನ್‌ ಕಲೊನಿಯಲ್ಲಿ ಚರಂಡಿ ನಿರ್ಮಾಣ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಜಗತ್‌ ವೃತ್ತದವರೆಗಿನ ರಸ್ತೆ ವಿಭಜನೆ, ಪಾದಚಾರಿ ಮಾರ್ಗ ನಿರ್ಮಾಣ ಸೇರಿ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ‘ಅಮೃತ್‌’ ಯೋಜನೆ ಅಡಿ ಕೈಗೊಳ್ಳಬೇಕಾದ ಒಳಚರಂಡಿ ಕಾಮಗಾರಿಗಾರಿಗೂ ಮಹೂರ್ತ ಕೂಡಿ ಬಂದಿಲ್ಲ. ಕೊಳೆಗೇರಿಗಳ ಅಭಿವೃದ್ಧಿ ಮರೀಚಿಕೆ ಆಗಿದೆ ಎಂಬುದು ಮೂಲಗಳ ಮಾಹಿತಿ.

‘₹ 150 ಕೋಟಿ ಬಂದಿದೆ’
ಪ್ರಸಕ್ತ ವರ್ಷಕ್ಕೆ ಮಹಾತ್ಮ ಗಾಂಧಿ ಅಭಿವೃದ್ಧಿ ಅನುದಾ ನದಡಿ ₹ 150 ಕೋಟಿ ಮಂಜೂರಾಗಿದೆ. ಇದರಡಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರಿಯಾಯೋಜನೆ ಶೀಘ್ರ ಸಿದ್ಧಪಡಿಸಲಾಗುವುದು. ಇದರೊಂದಿಗೆ 15ನೇ ಹಣಕಾಸು ಯೋಜನೆ ಅಡಿ ಕೂಡ ₹ 30 ಕೋಟಿ ಬರುವುದಿದೆ. ಮೇಲಾಗಿ, ನಗರದಲ್ಲಿ ತೆರಿಗೆ ವಸೂಲಿಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಹೆಚ್ಚುವರಿ ಹಣವನ್ನೂ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ)ದಿಂದ ಪ್ರತಿ ವರ್ಷ ಬರಬೇಕಾದ ಅನುದಾನವನ್ನೂ ಕೊಡುವಂತೆ ಕೋರಲಾಗಿದೆ.‌
–ಸ್ನೇಹಲ್‌ ಸುಧಾಕರ ಲೋಖಂಡೆ ಆಯುಕ್ತ, ಮಹಾನಗರ ಪಾಲಿಕೆ, ಕಲಬುರ್ಗಿ

ಒಂದು ಬುಟ್ಟಿ ಮಣ್ಣು ಹಾಕಿಲ್ಲ
2019 ಎಪ್ರಿಲ್‌ 13ಕ್ಕೆ ಪಾಲಿಕೆಯ ಸದಸ್ಯರ ಅವಧಿ ಮುಗಿದಿದೆ. ಇಲ್ಲಿಗೆ ಮೂರು ವರ್ಷ ಮುಗಿದಾಯಿತು. ಆದರೂ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಸಿದ್ಧವಿಲ್ಲ. ಇಡೀ ರಾಜ್ಯದಲ್ಲಿ ಇಷ್ಟು ದೀರ್ಘ ಅವಧಿಯವರೆಗೆ ಆಡಳಿತ ಮಂಡಳಿಯೇ ಇಲ್ಲದ ಏಕಮಾತ್ರ ಪಾಲಿಕೆ ಎಂಬ ‘ಹಿರಿಮೆ’ಯೂ ಕಲಬುರ್ಗಿ ಪಾಲಿಕೆ ಒಲಿದಿದೆ.

2018ರಲ್ಲಿ ನಾವು ಕೈಗೆತ್ತಿಕೊಂಡ ಕೆಲವು ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಬಿಟ್ಟರೆ ಮತ್ತೆ ಒಂದು ಹಿಡಿ ಮಣ್ಣನ್ನೂ ಹಾಕಲ ಆಗಿಲ್ಲ. ಪಾಲಿಕೆಯಲ್ಲಿ ಆಡಳಿಯ ವ್ಯವಸ್ಥೆ ಇದ್ದರೆ ಮಾತ್ರ ಅನುದಾನ ತರಲು ಸಾಧ್ಯ. ಅಧಿಕಾರಿಗಳೇಕೆ ತಲೆ ಕೆಡಿಸಿಕೊಳ್ಳುತ್ತಾರೆ? ಉದ್ದೇಶಪೂರ್ವಕವಾಗಿಯೇ ಚುನಾವಣೆಯನ್ನು ಇನ್ನಿಲ್ಲದ ಕಾರಣಗಳಿಗಾಗಿ ಮುಂದೂಡಲಾಗುತ್ತಿದೆ. ನಗರದ ಜನರ ಗೋಳು ಕೇಳುವವರೇ ದಿಕ್ಕಿಲ್ಲ.
–ಶರಣಕುಮಾರ ಮೋದಿ‌, ಮಾಜಿ ಮೇಯರ್‌, ಕಲಬುರ್ಗಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು