ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ಸುರಿದ ಬಿರುಗಾಳಿ ಸಹಿತ ಜೋರು ಮಳೆಯಿಂದಾಗಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ರೈತರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಒಂದು ವಾರದಿಂದ ಮುಂಜಾನೆ ಬಿಸಿಲಿನಿಂದ ಶುರುವಾಗುವ ವಾತಾವರಣ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ಧಗೆ ಏರತೊಡಗುತ್ತದೆ. ಸಂಜೆಯಾಗುತ್ತಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತದೆ. ರಾತ್ರಿ ವೇಳೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಜೋರು ಮಳೆಯಾಗುತ್ತಿದೆ.

ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಾರಿಕೆ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಪಪ್ಪಾಯ, ಬಾಳೆ, ಮಾವು ಬೆಳೆಗಳ ಮೇಲೆ ಹಾಕಿದ ಬಂಡವಾಳ ಅಕಾಲಿಕ ಮಳೆಯಲ್ಲಿ ಕೊಚ್ಚಿ ಹೋಗುತ್ತಿದೆ. ವರುಣಾರ್ಭಟದಿಂದ ಗೊನೆಯೊಂದಿಗೆ ಮಲಗಿರುವ ಬಾಳೆ ಬೆಳೆಗಳನ್ನು ನೋಡಿ ಬೆಳೆಗಾರರು ಚಿಂತೆಗೀಡಾಗಿದ್ದಾರೆ.

ಕಲಬುರಗಿ ತಾಲ್ಲೂಕಿನ ನಂದೂರ (ಕೆ) ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 80 ಎಕರೆಯಲ್ಲಿನ ಬಾಳೆ ಬೆಳೆ ನಾಶವಾಗಿದೆ. ಅಕಾಲಿಕ ಮಳೆಗೆ ಗ್ರಾಮದ ಹತ್ತಾರು ರೈತರ ಬೆಳೆ ಹಾನಿಯಾಗಿದ್ದು, ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.

ಬೆಳೆಗಾರರಾದ ಶಿವಕುಮಾರ ಈರೇಗೌಡ, ಕಾಶಿರಾಯ, ಈರಣ್ಣ ಪಾಟೀಲ, ಗುಂಡಪ್ಪ ಹನುಮಂತರಾಯ, ಚನ್ನಪ್ಪ ಗೊಬ್ಬುರ, ಗುರುಲಿಂಗಪ್ಪ ಮಲ್ಪೆ, ಕಿಶನ್ ರಾಠೋಡ ಸೇರಿ ಹಲವು ರೈತರು ಬಾಳೆಯನ್ನೇ ನಂಬಿಕೊಂಡಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು 80 ಎಕರೆಯಲ್ಲಿ ಬಾಳೆ ಸಸಿಗಳನ್ನು ನಾಟಿ ಮಾಡಿದ್ದರು. ಗೊನೆ ಬಿಟ್ಟು ಕೆಲವು ವಾರಗಳಲ್ಲಿ ಮಾರುಕಟ್ಟೆ ಸೇರಬೇಕಿದ್ದ ಬಾಳೆ ಫಸಲು ಗಾಳಿ ಮಳೆಯಿಂದಾಗಿ ನೆಲಕಚ್ಚಿದೆ.

ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಹಾನಿಗೀಡಾದ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ರೈತರಿಗೆ ಬೆಳೆ ಪರಿಹಾರದ ಭರವಸೆಯೂ ನೀಡಿ, ಸಂಬಂಧಪಟ್ಟ ಅಧಿಕಾರಿಗಳ ಜತೆಗೂ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಸೂಚಿಸಿದ್ದಾರೆ.

ಬೆಳೆ ಹಾನಿ ಕುರಿತು ತೋಟಗಾರಿಕೆಯ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾನಿಗೀಡಾದ ಜಮೀನುಗಳಿಗೆ ತೆರಳಿ, ಜಿಯೊ ಟ್ಯಾಗ್ ಸಹಿತ ರೈತರ ಫೋಟೊಗಳನ್ನು ತೆಗೆದುಕೊಂಡು ಹಾನಿಯ ಅಂದಾಜು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಸರ್ಕಾರಕ್ಕೆ ಬೇಗನೇ ವರದಿ ಸಲ್ಲಿಸಿದರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ರೈತರು.

ಪ್ರಸಕ್ತ ವರ್ಷ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ತೋಟವನ್ನು ಗುತ್ತಿಗೆ ಪಡೆದವರಿಗೂ ನಿರೀಕ್ಷಿತ ಆದಾಯ ಬರಲಿಲ್ಲ
ನರಶಿಮ್ಲು ಕುಂಬಾರ ಮಾವು ಬೆಳೆಗಾರರು ಕುಂಚಾವರಂ

‘ಕಳೆದ ಬಾರಿಗಿಂತ ಹೆಚ್ಚು ಹಾನಿಯಾಗುವ ನಿರೀಕ್ಷೆ’

‘ಕಳೆದ ವರ್ಷ ಪೂರ್ವ ಮುಂಗಾರು ಅವಧಿಯಲ್ಲಿ 110 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿತ್ತು. ವಾರದ ಹಿಂದೆ 65 ಹೆಕ್ಟೇರ್ ಇದ್ದ ಹಾನಿಯ ಪ್ರಮಾಣ ಈಗ 96 ಹೆಕ್ಟೇರ್ಗೆ ತಲುಪಿದೆ. ಹಾನಿಯ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಮದಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಇಲಾಖೆಯ ಸಿಬ್ಬಂದಿ ಬೆಳೆ ಹಾನಿಯ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರತಿ ಹೆಕ್ಟೇರ್ ಬಹುವಾರ್ಷಿಕ ಬೆಳೆಗೆ ₹ 22 ಸಾವಿರ ಹಾಗೂ ರೆಗ್ಯುಲರ್ ಬೆಳೆಗೆ ₹ 75 ಸಾವಿರ ಪರಿಹಾರ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕಲಬುರಗಿ ತಾಲ್ಲೂಕು ಕಮಲಾಪುರ ಆಳಂದದಲ್ಲಿ ಬಾಳೆಯ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಚಿಂಚೋಳಿ ವ್ಯಾಪ್ತಿಯಲ್ಲಿ ಮಾವು ಅಲ್ಲಲ್ಲಿ ಪಪ್ಪಾಯ ಫಸಲು ಉದುರಿ ಬಿದ್ದಿದೆ’ ಎಂದರು.

ಪ್ರಜ್ಞೆ ತಪ್ಪಿ ಬಿದ್ದ ಬೆಳೆಗಾರ

ನಂದೂರು (ಬಿ) ಸಮೀಪದ ಬಾಪುನಾಯಕ ತಾಂಡಾದ ರೈತ ಕಿಶನ್ ರಾಠೋಡ ಅವರು ತಮ್ಮ ತೋಟದಲ್ಲಿ ಗಾಳಿ ಮಳೆಯಿಂದ ನೆಲೆಕಚ್ಚಿದ ಬಾಳೆ ಗಿಡಗಳನ್ನು ನೋಡಿ ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ಕರೆದೊಯ್ದ ಕಿಶನ್ ಅವರ ಪುತ್ರರು ಚಿಕಿತ್ಸೆ ಕೊಡಿಸಿ ಧೈರ್ಯ ತುಂಬಿದರು. ಇವರಂತೆ ಹಲವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ‘₹ 2.50 ಲಕ್ಷ ಖರ್ಚು ಮಾಡಿ 3 ಎಕರೆಯಲ್ಲಿ 4000 ಬಾಳೆ ಗಿಡಗಳನ್ನು ನಾಟಿ ಮಾಡಿದ್ದೆವು. ಒಂದೂವರೆ ತಿಂಗಳಲ್ಲಿ ಮಾರುಕಟ್ಟೆಗೆ ಸೇರಿ ₹ 9 ಲಕ್ಷ ಆದಾಯ ತಂದುಕೊಡುತ್ತಿತ್ತು. ಆದರೆ ಅಕಾಲಿಕ ಮಳೆ ಎಲ್ಲವನ್ನೂ ಕೊಂಚಿಕೊಂಡು ಹೋಗುವಂತೆ ಮಾಡಿದೆ’ ಎಂದು ಕಿಶನ್ ಪುತ್ರ ರಘು ರಾಠೋಡ ಬೇಸರ ವ್ಯಕ್ತಪಡಿಸಿದರು.

ಬೆಳೆಗಾರರಿಗೆ ಹುಳಿಯಾದ ಮಾವು

-ಜಗನ್ನಾಥ ಶೇರಿಕಾರ

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಬೆಳೆಗಾರರಿಗೆ ಮಾವು ಹುಳಿಯಾಗಿದೆ. ಒಂದು ಸಾವಿರ ಹೆಕ್ಟೇರ್ ಪ್ರದೇಶದ ಮಾವು ಬೆಳೆ ಪೈಕಿ 600 ಹೆಕ್ಟೇರ್ನಲ್ಲಿ ಗಿಡಗಳು ಫಲ ನೀಡುತ್ತಿದ್ದು ಉಳಿದವು ಬೆಳವಣಿಗೆ ಹಂತದಲ್ಲಿವೆ. ಈ ವರ್ಷದ ಅತಿಯಾದ ಬಿಸಿಲು ಮತ್ತು ಅಕಾಲಿಕ ಬಿರುಗಾಳಿ ಮಳೆಯಿಂದಾಗಿ ಮಾವು ಬೇಸಾಯ ಬೆಳೆಗಾರರಿಗೆ ನಷ್ಟ ತಂದಿದೆ. ಇಳುವರಿಯಲ್ಲಿ ಶೇ 35ರಿಂದ 45ರಷ್ಟು ಕುಸಿತವಾಗಿದೆ. ತಾಲ್ಲೂಕಿನಲ್ಲಿ ಮಲ್ಲಿಕಾ ಬೆನೆಶಾನ್ ದಶೇರಿ ಹಿಮಾಯತ್ ಕಲಮಿ ರಸಪುರಿ ಸೇರಿದಂತೆ ವಿವಿಧ ತಳಿಯ ಮಾವು ಬೆಳೆಯಲಾಗುತ್ತದೆ. ಬೇಸಿಗೆಯಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಬೆಳೆಗಾರರು ತೀವ್ರ ಹಾನಿ ಅನುಭವಿಸಿದ್ದಾರೆ. ಇದರಿಂದ ಕೆಲವು ಕಾಯಿಗಳು ಉದುರಿ ಬಿದ್ದಿವೆ. ಮರದಲ್ಲಿ ಉಳಿದ ಕಾಯಿಗಳಿಗೂ ಕಪ್ಪು ಕಲೆ ಉಂಟಾಗಿ ಹುಳುಗಳು ಹುಟ್ಟಿಕೊಳ್ಳುತ್ತಿವೆ ಎಂದು ಬೆಳೆಗಾರ ನರಶಿಮ್ಲು ಕುಂಬಾರ ಬೇಸರ ವ್ಯಕ್ತಪಡಿಸಿದರು. ‘ಮಾರ್ಚ್ ತಿಂಗಳಲ್ಲಿ ದಾಖಲೆಯ ಬಿಸಿಲು ಮಾವು ಬೇಸಾಯಕ್ಕೆ ಬರೆ ಹಾಕಿದೆ. ಹೀಗಾಗಿ ಗುಣಮಟ್ಟದ ಹಣ್ಣುಗಳ ಕೊರತೆ ಮಾರುಕಟ್ಟೆಯಲ್ಲಿ ಕಂಡುಬಂದಿದೆ.ನಾನು ವಾರ್ಷಿಕ 100ರಿಂದ 120 ಟನ್ ಮಾವು ವಿದೇಶಗಳಿಗೆ ರಫ್ತು ಮಾಡುತ್ತಿದ್ದೆ. ಆದರೆ ಪ್ರಸಕ್ತ ವರ್ಷ ಕೇವಲ 40 ಟನ್ ಮಾತ್ರ ರಫ್ತು ಮಾಡಿದ್ದೇನೆ. ಹಿಂದಿನ ಸಾಲಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಇಳುವರಿ ಶೇ 40ರಷ್ಟು ಕುಸಿದಿದೆ’ ಎನ್ನುತ್ತಾರೆ ಬೆಳೆಗಾರ ಸತ್ಯನಾರಾಯಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.