ಪ್ರಭು ಅಡವಿಹಾಳ
ಕಲಬುರಗಿ: ನಮ್ಮ ಪರಂಪರೆಯುದ್ದಕ್ಕೂ ಅನೇಕ ಸಮುದಾಯಗಳು ತಮ್ಮ ವೃತ್ತಿ ಅನುಸರಿಸಿಕೊಂಡು ಬಂದಿವೆ. ಮನುಷ್ಯ ಆಧುನಿಕತೆಯ ಹೊಡೆತಕ್ಕೆ ಸಿಲುಕಿದರೂ ಅನೇಕ ವೃತ್ತಿಗಳು ಇಂದಿಗೂ ಜೀವಂತವಾಗಿವೆ. ಅದಕ್ಕೆ ತಾಜಾ ಉದಾಹರಣೆ ಕಲ್ಲು ಕುಟಿಗರು.
ನಗರದ ಹೊಸ ಜೇವರ್ಗಿ ರಸ್ತೆಯ ಗೋದುತಾಯಿ ಪ್ರದೇಶದ ಪ್ರವೇಶದ್ವಾರದ ಪಕ್ಕ ಸುಮಾರು ಎಂಟು ಕಲ್ಲುಕುಟಿಗರ ಕುಟುಂಬಗಳು ವಾಸವಾಗಿವೆ. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದಲ್ಲೇ ಈ ಕುಟುಂಬಗಳು ವಾಸವಾಗಿವೆ. ಮೂಲತಃ ಕಲಬುರಗಿಯವರೇ ಆದ ಈ ಕುಟುಂಬಗಳು ಭೋವಿ ಸಮುದಾಯಕ್ಕೆ ಸೇರಿದವರು. ಮೂಲವೃತ್ತಿಯನ್ನೇ ನಂಬಿ ಬದುಕು ನಡೆಸುತ್ತಿವೆ.
ಒಳಕಲ್ಲು, ಬೀಸುವ ಕಲ್ಲು, ರೊಟ್ಟಿ ಮಾಡುವ ಕಲ್ಲು, ರುಬ್ಬುವ ಕಲ್ಲು, ಖಾರ ಕುಟ್ಟುವ ಕಲ್ಲು, ಬಸವ, ಶಿವಲಿಂಗ, ನಾಗಪ್ಪ, ಲಕ್ಷ್ಮಿ ವಿಗ್ರಹ ಹೀಗೆ ಅನೇಕ ವಸ್ತುಗಳನ್ನು ಕಗ್ಗಲ್ಲಲ್ಲಿ ಅರಳಿಸಿ ಮಾರಾಟ ಮಾಡಿ ಬದುಕುತ್ತಿದ್ದಾರೆ. ಮಿಕ್ಸರ್, ಗ್ರೈಂಡರ್ ಭರಾಟೆಯಲ್ಲಿ ಈಗ ಇವುಗಳನ್ನು ಯಾರು ಬಳಕೆ ಮಾಡ್ತಾರೆ? ಎಂಬ ಪ್ರಶ್ನೆಗೆ ಕುಟುಂಬದ ಹಿರಿಯ ಬಾಬು, ‘ಮನೆ ಅಂದ್ಮೇಲೆ ಬೀಸುವ ಕಲ್ಲು, ರುಬ್ಬುವ ಕಲ್ಲು ಇರಲೇಬೇಕು. ಬಳಸದಿದ್ದರೂ ಸಂಪ್ರದಾಯಕ್ಕಾದರೂ ಹಾಕಲೇಬೇಕು. ಮದುವೆಯಲ್ಲಿ ಪೂಜೆಗೆ ಅತ್ಯಗತ್ಯ’ ಎಂದು ವಿವರಿಸತೊಡಗಿದರು.
ಗಾತ್ರಕ್ಕೆ ತಕ್ಕಂತೆ ವಸ್ತುಗಳಿಗೆ ಬೆಲೆ ನಿಗದಿಯಾಗಿದ್ದು, ₹ 200ರಿಂದ ₹ 2000ದವರೆಗೆ ಮಾರಾಟ ಮಾಡುತ್ತಾರೆ. ದಿನಕ್ಕೆ ಒಂದೋ ಎರಡೋ ಮಾರಾಟವಾದರೆ ಹೆಚ್ಚು ಎಂದು ನಿಟ್ಟುಸಿರು ಬಿಟ್ಟ ಬಾಬು, ಕಳೆದ 50 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದಾರೆ.
ಕೋರವಾರದಿಂದ ಕರಿಕಲ್ಲು ತರಿಸಿ ಕಡಿದು ಒಳಕಲ್ಲು ಮಾಡಿದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಹನುಮಸಾಗರದಿಂದ ಬಿಳಿ ಕಲ್ಲು ತರಿಸಿ ಬೀಸುವ ಕಲ್ಲು ತಯಾರಿಸುತ್ತಾರೆ. ಡಬರಾಬಾದ್ ಕ್ರಾಸ್ ಬಳಿಯ ಮೆಣಸಿನಕಾಯಿ ಫ್ಯಾಕ್ಟರಿ ಹಿಂಬದಿ ಸರ್ಕಾರದವರು ಇವರಿಗೆ ಜಾಗ ನೀಡಿ ಮನೆ ಕಟ್ಟಿಸಿಕೊಟ್ಟಿದ್ದು, ಅಲ್ಲೂ ನೀರಿಲ್ಲ, ಬೆಳಕಿಲ್ಲ ಎಂದು ಸುನಿತಾ ಬೇಸರ ವ್ಯಕ್ತಪಡಿಸಿದರು.
‘ಕಲ್ಲು ಕುಟಿಗರು ನಾವು, ಕಲ್ಲು ಕಡಿದು ಅರಮನೆಯ ಕಟ್ಟಿದೆವು, ನಮ್ಮ ಗುಡಿಸಲು ಮಾತ್ರ ಸೋರುವುದು ಬಿಡದು’ ಎನ್ನುವ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಸಾಲಿನಂತೆ ಈ ಕುಟುಂಬಗಳ ಜೋಪಡಿಗಳು ಮಳೆ ಬಂದರೆ ಸೋರುತ್ತವೆ. ನಾಲ್ಕು ದಿನಕ್ಕೊಮ್ಮೆ ಅಕ್ಕ–ಪಕ್ಕದ ಮನೆಗಳಿಗೆ ಬರುವ ಕೊಳಾಯಿ ನೀರು ಹಿಡಿದು ತುಂಬಿಟ್ಟುಕೊಳ್ಳುವ ಇವರು ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ. ಐದಾರು ವರ್ಷಗಳಿಂದ ಈ ಕುಟುಂಬಗಳು ಇಲ್ಲಿದ್ದರೂ ಪಾಲಿಕೆಯವರು ಒಂದು ಇ–ಟಾಯ್ಲೆಟ್ ವ್ಯವಸ್ಥೆಯನ್ನೂ ಮಾಡಿಲ್ಲ.
ರಸ್ತೆ ಪಕ್ಕದ ಪಾದಚಾರಿ ಮಾರ್ಗದ ಮೇಲೆಯೇ ರಾತ್ರಿ ಮಲಗುವ ಇವರಿಗೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿಕೊಂಡು ಬರುವವರ ಆತಂಕವೂ ಇದ್ದೇ ಇದೆ. ಮೂಲ ವೃತ್ತಿಯನ್ನೇ ನಂಬಿ ಬದುಕುವ ಇವರಿಗೆ ನಗರದಲ್ಲಿ ಸೂಕ್ತ ಜಾಗದ ಜತೆಗೆ ಮಳಿಗೆಯ ಅವಶ್ಯಕತೆಯಿದ್ದು, ಪಾಲಿಕೆಯವರು, ಸಂಘ–ಸಂಸ್ಥೆಯವರು ಈ ಬಗ್ಗೆ ಗಮನ ಹರಿಸಬೇಕಿದೆ.
ಕಲಬುರಗಿ ನಗರ ಅಷ್ಟೇ ಅಲ್ಲದೇ ಅಕ್ಕಪಕ್ಕದ ಊರುಗಳಿಂದಲೂ ಬಂದು ಜನ ನಮ್ಮಲ್ಲಿಯೇ ಖರೀದಿಸುತ್ತಾರೆ. ಹಾಗಾಗಿ ನಮ್ಮ ಜೀವನ ನಡೆದಿದೆ. ಯಲ್ಲಪ್ಪ ಕಲ್ಲುಕುಟಿಗ ಸಮುದಾಯದ ವ್ಯಕ್ತಿ
ಮೊದಲು ಬಸ್‌ಸ್ಟ್ಯಾಂಡ್ ಬಳಿ ಇದ್ದೆವು. ರಸ್ತೆ ವಿಸ್ತರಣೆ ಮಾಡಿದ್ದರಿಂದ ಇಲ್ಲಿ ಬಂದು ನೆಲೆಸಿದ್ದೇವೆ. ಚಿಕ್ಕಂದಿನಿಂದ ಇದೇ ಕೆಲಸ ಮಾಡುತ್ತಿದ್ದೇನೆ. ಬಾಬು ಕಲ್ಲುಕುಟಿಗ ಸಮುದಾಯದ ಹಿರಿಯ
ಜೋಪಡಿಗೆ ಕರೆಂಟ್ ಇಲ್ಲ ಮಕ್ಕಳು ಬೀದಿದೀಪದ ಕೆಳಗೇ ಅಭ್ಯಾಸ ಮಾಡುತ್ತಾರೆ. ಮಕ್ಕಳು ನಮ್ಮಂತಾಗದಿರಲಿ ಎಂದು ಶಾಲೆಗೆ ಕಳಿಸುತ್ತಿದ್ದೇವೆ ಸುನೀತಾ ಕಲ್ಲುಕುಟಿಗ ಸಮುದಾಯದ ಮಹಿಳೆ
ಬೀದಿದೀಪದ ಕೆಳಗೆ ಮಕ್ಕಳ ಅಭ್ಯಾಸ ಈ ಕುಟುಂಬಗಳ ನಾಲ್ಕಾರು ಮಕ್ಕಳು ಶಾಲೆಗೆ ಹೋಗುತ್ತಿದ್ದು ರಾತ್ರಿ ಬೀದಿದೀಪದ ಕೆಳಗೇ ಅಭ್ಯಾಸ ಮಾಡುತ್ತಿರುತ್ತಾರೆ. ಮಳೆಬಂದರೆ ಅದೂ ಅಸಾಧ್ಯವಾದ್ದರಿಂದ ಶಾಲೆಯಿಂದ ಬಂದ ತಕ್ಷಣವೇ ಹೋಂವರ್ಕ್ ಮುಗಿಸುವ ಧಾವಂತದಲ್ಲಿರುತ್ತಾರೆ. ಅದೇ ಸ್ಥಳದಲ್ಲಿ ಅಜ್ಜ ಅಪ್ಪ ಬೆಳೆಸಿದ ಮರಗಳಿಗೆ ಜೋಕಾಲಿ ಕಟ್ಟಿ ಆಟವಾಡುತ್ತಿರುತ್ತಾರೆ.
ಬಸವ ಶಿವಲಿಂಗಕ್ಕೆ ಬೇಡಿಕೆ ಇನ್ನೇನು ಕೆಲ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗುತ್ತಿರುವುದರಿಂದ ಬಸವ ಶಿವಲಿಂಗ ಮತ್ತು ನಾಗರ ಕಲ್ಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಮಕ್ಕಳು ಮಹಿಳೆಯರೂ ಮೂರ್ತಿ ತಯಾರಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಒಬ್ಬ ಮನುಷ್ಯ ಬೆಳಿಗ್ಗೆ ಕುಳಿತರೆ ಸಂಜೆಯೊಳಗೆ ಹೆಚ್ಚೆಂದರೆ ಎರಡು ವಸ್ತುಗಳನ್ನು ತಯಾರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.