ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತೃಭಾಷೆಯಲ್ಲಿ ಶಿಕ್ಷಣ; ಮಕ್ಕಳ ಗ್ರಹಿಕೆ ಸುಲಲಿತ: ಸಾಹಿತಿ ಪ್ರಮೀಳಾ

ಕಲಬುರಗಿ ತಾಲ್ಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತಿ ಪ್ರಮೀಳಾ ಚಿಂಚೋಳಿ
Published : 30 ಆಗಸ್ಟ್ 2024, 4:52 IST
Last Updated : 30 ಆಗಸ್ಟ್ 2024, 4:52 IST
ಫಾಲೋ ಮಾಡಿ
Comments

ಕಲಬುರಗಿ: ‘ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವು ಮಾತೃಭಾಷೆಯಲ್ಲಿಯೇ ನೀಡಿದರೆ, ವಿಷಯಗಳನ್ನು ಚೆನ್ನಾಗಿ, ಸುಲಭವಾಗಿ ಗ್ರಹಿಸಿಕೊಳ್ಳಬಲ್ಲರು. ಆಗ, ಶಿಕ್ಷಣವು ಅವರಿಗೆ ಭಾರ ಎನಿಸದೆ ಸಹಜ ಪ್ರೀತಿಯಿಂದ ಕಲಿಯುತ್ತಾರೆ’ ಎಂದು ಸಮ್ಮೇಳನ ಅಧ್ಯಕ್ಷೆ, ಸಾಹಿತಿ ಪ್ರಮೀಳಾ ಜಾನಪ್ಪಗೌಡ ಚಿಂಚೋಳಿ ಪ್ರತಿಪಾದಿಸಿದರು.

ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲ್ಲೂಕು ಘಟಕ ಆಯೋಜಿಸಿದ್ದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅನ್ಯ ಭಾಷೆಗಳಲ್ಲಿ ಶಿಕ್ಷಣ ನೀಡುವುದರಿಂದ ಮಗುವಿನ ಮೇಲೆ ಪರೋಕ್ಷ ಒತ್ತಡ ಉಂಟಾಗುತ್ತದೆ. ಅದು ಕಲಿಕೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಮನೋವಿಜ್ಞಾನಿಗಳು, ಶಿಕ್ಷಣ ತಜ್ಞರು ಮಗುವಿನ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ಇದನ್ನು ಕೇಳುವ ಮನಸ್ಥಿತಿಯಲ್ಲಿ ನಾವಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಅನ್ಯ ಭಾಷೆಗಳು ಕೇವಲ ಕನ್ನಡ ಭಾಷೆ ಮೇಲೆ ದಾಳಿ ಮಾಡುವುದಿಲ್ಲ. ನಮ್ಮ ಪರಂಪರೆ, ಜೀವನಶೈಲಿ, ಸಂಸ್ಕೃತಿ, ಆಹಾರ ಪದ್ಧತಿಗೂ ಧಕ್ಕೆ ತರುತ್ತವೆ. ಮಾತೃಭಾಷೆ ಕೇವಲ ಸಂಭಾಷಣೆಯ ಮಾಧ್ಯಮವಲ್ಲ. ಅದು, ನಮ್ಮ ಅಂತರಂಗದ ಭಾವನೆಗಳ ಹಂಚುವಿಕೆಯ ಸಾಧನವಾಗಿದೆ’ ಎಂದರು.

‘ಹತ್ತಾರು ಬೆಳವಣಿಗೆಗಳ ನಡುವೆ ಕನ್ನಡ ಮಾಧ್ಯಮ ಶಾಲೆಗಳು ಸೊರಗುತ್ತಿವೆ. ಇದಕ್ಕೆ ಉತ್ತರ ಎಂಬಂತೆ ಅನ್ಯ ಭಾಷೆಗಳ ಕುರಿತು ಸಹಿಷ್ಣುತೆ ಹೊಂದಿ, ಕನ್ನಡಕ್ಕೆ ಪ್ರಥಮ ಆದ್ಯತೆ ಕೊಡಬೇಕು. ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವೆಂಬ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಲಹೆಗಳನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಸಲಹೆ ನೀಡಿದರು. 

‘ನಾವು ಬಳಸುತ್ತಿರುವ ಕನ್ನಡದಲ್ಲಿ ಅನ್ಯ ಭಾಷೆಯ ಶಬ್ದಗಳೇ ಸೇರಿಕೊಂಡಿವೆ. ಕನ್ನಡದಲ್ಲಿ ಶಬ್ದಗಳಿಗೆ ಕೊರತೆ ಇಲ್ಲ. ಆದರೆ, ಅವುಗಳನ್ನು ಬಳಸದೆ ಹೋದಾಗ ತುಕ್ಕು ಹಿಡಿಯುತ್ತವೆ. ಆಧುನಿಕ ಸಲಕರಣೆಗಳು ಓದುವ ಸಂಸ್ಕೃತಿಯನ್ನು ಕಿತ್ತುಕೊಂಡಿದ್ದು, ಅದೇ ಸಲಕರಣೆಗಳನ್ನು ಬಳಸಿಕೊಂಡು ಕನ್ನಡವನ್ನು ಕಟ್ಟಬೇಕಿದೆ’ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ, ‘ಸಾಹಿತಿಗಳು ಒಂದಾದರೆ ಇಡೀ ಜಗತ್ತು ಒಗ್ಗೂಡುತ್ತದೆ. ಎಲ್ಲರನ್ನು ಒಂದುಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಹೀಗಾಗಿ, ಕನ್ನಡ ಭಾಷೆ ನಮ್ಮ ಬದುಕಿನ ಉಸಿರಾಗಬೇಕು’ ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ವಚನ, ತತ್ವಪದಗಳು, ದಾಸ ಸಾಹಿತ್ಯ ಹುಟ್ಟಿದ ನೆಲದಲ್ಲಿ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಿದೆ. ಮುಂದಿನ ದಿನಗಳಲ್ಲಿ ಸೂಫಿ ಸಾಹಿತ್ಯ ಸಮ್ಮೇಳನವನ್ನೂ ಆಯೋಜಿಸಲಾಗುವುದು’ ಎಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ (ಎಸ್‌ವಿಪಿ) ವೃತ್ತದಿಂದ ನಾನಾ ಕಲಾತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಮಾಡಲಾಯಿತು. ‘ಹೊನ್ನುಸಿರು’ ಸ್ಮರಣ ಸಂಚಿಕೆಯನ್ನು ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಾಗೇಂದ್ರ ಮಸೂತಿ, ಸ್ವಾಗತ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಸರಡಗಿ, ಕಾರ್ಯಾಧ್ಯಕ್ಷ ರಾಘವೇಂದ್ರ ಅ.ಕಲ್ಯಾಣಕರ್, ಕಸಾಪ ತಾಲ್ಲೂಕು ಅಧ್ಯಕ್ಷ ಗುರುಬಸಪ್ಪ ಎಸ್‌.ಸಜ್ಜನಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಸಾರ್ವಜನಿಕರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಸಾರ್ವಜನಿಕರು –ಪ್ರಜಾವಾಣಿ ಚಿತ್ರ

ಸಮ್ಮೇಳನದ ನಿರ್ಣಯಗಳು

*ತೊಗರಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಬೇಕು

*ಜವಳಿ ಉದ್ಯಮದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡಬೇಕು

*ಖಾಸಗಿ ಕಂಪನಿಯಲ್ಲಿ ಕನ್ನಡ ಮಾಧ್ಯಮದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು

*ಕಲ್ಯಾಣ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಲೇಖಕರ ಪುಸ್ತಕಗಳನ್ನು ಖರೀದಿಸಬೇಕು

*ನಗರದ ಪ್ರಮುಖ ರಸ್ತೆಗಳಿಗೆ ಜಿಲ್ಲೆಯ ಸಾಹಿತಿಗಳ ಹೆಸರಿಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT