ಕಾಳಗಿ: ಕಳೆದ ಮೂರುದಿನಗಳಿಂದ ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆ ಮತ್ತು ಹೇರೂರ ಬೆಣ್ಣೆತೊರಾ ಜಲಾಶಯದ ನೀರಿನ ಪ್ರವಾಹಕ್ಕೆ ಮೂರು ಸೇತುವೆಗಳು ಮುಳುಗಡೆಯಾಗಿ ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ಮಲಘಾಣ-ಕಾಳಗಿ, ಕಲಗುರ್ತಿ-ಡೊಣ್ಣೂರ ಮತ್ತು ತೆಂಗಳಿ-ತೆಂಗಳಿ ಕ್ರಾಸ್ ನಡುವಿನ ರಸ್ತೆ ಸಂಪರ್ಕದ ಹಳ್ಳದ ಸೇತುವೆಗಳು ನೀರಿನ ಪ್ರವಾಹಕ್ಕೆ ಭಾನುವಾರದಿಂದಲೇ ಮುಳುಗಿ ಹೋಗಿವೆ. ಪರಿಣಾಮ ಮಲಘಾಣ, ಕಲಗುರ್ತಿ, ಚಿತ್ತಾಪುರ ರಸ್ತೆ ಮಾರ್ಗದ ಸಂಪರ್ಕ ಕಡಿತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ.
ಕಣಸೂರ, ಹೆಬ್ಬಾಳ, ಶೆಳ್ಳಗಿ, ಹೇರೂರ, ಮಲಘಾಣ, ಡೊಣ್ಣೂರ, ಅರಜಂಬಗಾ, ತೆಂಗಳಿ, ತೊನಸನಹಳ್ಳಿ (ಟಿ), ಗೋಟೂರ, ಅಶೋಕನಗರ, ಚಿಂಚೋಳಿ ಎಚ್, ಬಣಬಿ, ಕಲ್ಲಹಿಪ್ಪರ್ಗಾ, ಕಂಚನಾಳ, ರಾಜಾಪುರ, ಭರತನೂರ ಹಳ್ಳದ ದಂಡೆಯ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ತೊಗರಿ, ಉದ್ದು, ಹೆಸರು ಬೆಳೆ ಹಾಳಾಗಿದೆ. ಹೆಬ್ಬಾಳ, ಕಲಗುರ್ತಿ, ತೆಂಗಳಿ, ರಾಜಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ತೆಂಗಳಿಯ ಅಂಬಿಗರ ಚೌಡಯ್ಯ ದೇವಸ್ಥಾನ ಜಲಾವೃತಗೊಂಡಿದೆ.
ಶ್ರಾವಣಮಾಸದ ಕಡೆಯ ಸೋಮವಾರ ಐತಿಹಾಸಿಕ ಕಾಳಗಿ ನೀಲಕಂಠ ಕಾಳೇಶ್ವರ, ಕೋರವಾರ ಅಣಿವೀರಭದ್ರೇಶ್ವರ, ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ, ಸುಗೂರಿನ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದುಹೋಗಲು ಭಕ್ತರು ಮಳೆಯಲ್ಲೆ ಪರದಾಡಿದರು. ವಾರದ ಸಂತೆಗೆ ಪಟ್ಟಣದಲ್ಲಿ ವ್ಯಾಪಾರಸ್ಥರು ಮತ್ತು ಗ್ರಾಹಕರು ಮಳೆನೀರಿನ ಗಿಜಿಗಿಜಿ ಅನುಭವಿಸಿದರು.
‘ಬೆಣ್ಣೆತೊರಾ ಜಲಾಶಯದ ಒಳಹರಿವು 6500 ಕ್ಯುಸೆಕ್‌ಗೆ ಇಳಿದಿದ್ದು 8000 ಕ್ಯುಸೆಕ್ ನೀರು ಹೊರಬಿಡಲಾಗಿದೆ. 6 ಮನೆಗಳಿಗೆ ಹಾನಿಯಾಗಿದೆ’ ಎಂದು ತಹಶೀಲ್ದಾರ್ ಘಮಾವತಿ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಏಕೆ?
ಕಾಳಗಿ ತಾಲ್ಲೂಕಿನ ಹೇರೂರ ಬೆಣ್ಣೆತೊರಾ ಜಲಾಶಯಕ್ಕೆ ಒಮ್ಮೆಲೆ ನೀರು ಹರಿದು ಬಂದು ಸಂಗ್ರಹವಾಗುವುದಿಲ್ಲ. ನೀರು ಬಂದಾಗಲೆಲ್ಲ ಹಂತಹಂತವಾಗಿ ನೀರು ಹೊರಬಿಡದೆ ದಿಢೀರ್ ಆಗಿ ಬಿಡುತ್ತಾರೆ. ಒಂದೆಡೆ ಮಳೆ ನೀರು ಇನ್ನೊಂದೆಡೆ ಜಲಾಶಯದ ನೀರಿಗೆ ಕಾಲುವೆ ಹಳ್ಳದ ಪ್ರವಾಹ ಉಕ್ಕೇರಿ ಅಕ್ಕಪಕ್ಕದ ಹೊಲಗಳಲ್ಲಿನ ಬೆಳೆಗಳು ಕೊಚ್ಚಿಹೋಗುತ್ತಿವೆ. ಅನೇಕ ಊರುಗಳ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ದುಸ್ಥಿತಿ ಪ್ರತಿವರ್ಷ ತಲೆದೋರುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ರೈತರ ಬೆಳೆ ಜನಜಾನುವಾರುಗಳ ಸಂರಕ್ಷಣೆ ಬಗ್ಗೆ ಮುಂಜಾಗ್ರತ ಕ್ರಮ ವಹಿಸುತ್ತಿಲ್ಲ ಏಕೆ ಎಂದು ಹೆಬ್ಬಾಳ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಶಿವಗೋಳ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.