ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮುಂಜಾವಿನ ಚಳಿಯಲ್ಲಿ ಯೋಗಥಾನ್ ಸಂಭ್ರಮ

Last Updated 15 ಜನವರಿ 2023, 4:20 IST
ಅಕ್ಷರ ಗಾತ್ರ

ಕಲಬುರಗಿ: ಮುಂಜಾವಿನ ಚುಮು ಚುಮು ಚಳಿಯ ನಡುವೆ ನಗರದ ಪರೇಡ್ ಮೈದಾನ ಮತ್ತು ನೂತನ ವಿದ್ಯಾಲಯ ಮೈದಾನದಲ್ಲಿ ಭಾನುವಾರ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಯೋಗಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಯೋಗ ಪ್ರದರ್ಶನದಲ್ಲಿ ‌ಗಿನ್ನಿಸ್‌ ವಿಶ್ವ ದಾಖಲೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ‌ರಾಜ್ಯದಾದ್ಯಂತ ಹಮ್ಮಿಕೊಂಡ ಯೋಗಥಾನ್ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಯುವಜನೋತ್ಸವ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ‌ ಮತ್ತು ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಮಹಾನಗರ ಪಾಲಿಕೆ, ಎನ್‌ಸಿಸಿ, ಎನ್‌ಎಸ್ಎಸ್ ಹಾಗೂ ಜಿಲ್ಲಾ ಮಟ್ಟದ ಯೋಗ ಸಂಸ್ಥೆಗಳ‌ ವತಿಯಿಂದ ಯೋಗಥಾನ್ ನಡೆಯಿತು.

ಬೆಳಗಿನ ಜಾವ ಐದು ಗಂಟೆಯಿಂದಲೇ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಮಧ್ಯ ವಯಸ್ಕರು, ವೃದ್ಧರು ಪರೇಡ್ ‌ಮೈದಾನ ಮತ್ತು ಎನ್‌ವಿ ಮೈದಾನಗಳತ್ತ ತಂಡೋಪತಂಡವಾಗಿ ಬಂದರು. ಚಳಿಯ ವಾತಾವರಣದ ನಡುವೆಯೂ ವಿಶಾಲ ಆವರಣದಲ್ಲಿ ಉತ್ತರಾಭಿಮುಖವಾಗಿ ಕುಳಿತು ಹರ್ಷದಿಂದ ಯೋಗಾಭ್ಯಾಸ ಮಾಡಿದರು.

ವಿಧಾನ ಪರಿಷತ್ ‌ಸದಸ್ಯ‌ ಶಶೀಲ್ ಜಿ.‌ನಮೋಶಿ ಮಾತನಾಡಿ, 'ಯೋಗಾಭ್ಯಾಸದಲ್ಲಿ ದಾಖಲೆ ಮಾಡುವುದು ಮುಖ್ಯವಲ್ಲ. ಯೋಗವನ್ನು ನಿತ್ಯ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.

ಜಿಲ್ಲಾಧಿಕಾರಿ ಯಶವಂತ ‌ಗುರುಕರ್ ಮಾತನಾಡಿ, 'ಕರ್ನಾಟಕವನ್ನು ದೇಶದ ಮೊದಲ ಯೋಗ ಸಾಕ್ಷರತೆಯ ರಾಜ್ಯವನ್ನು ಮಾಡುವ ನಿಟ್ಟಿನಲ್ಲಿ ಯೋಗಥಾನ್ ಆಯೋಜಿಸಲಾಗಿದೆ. ಮಕ್ಕಳು, ವಿದ್ಯಾರ್ಥಿಗಳು ಯೋಗವನ್ನು ಮುಂದುವರಿಸಿಕೊಂಡು ಹೋಗಬೇಕು' ಎಂದು ಸಲಹೆ ನೀಡಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ಯಶವಂತ ಗುರುಕರ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ನಗರ ಪೊಲೀಸ್ ಆಯುಕ್ತ ಚೇತನ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಡಿ.ಬದೋಲೆ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಯೋಗ ಮತ್ತು ಪ್ರಕೃತಿ ಆಯುಷ್ ಇಲಾಖೆ ಉಪ ನಿರ್ದೇಶಕ ಎಂ.ಎ.ದಾಸರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಡಿಸಿಪಿ ಅಡೂರು ಶ್ರೀನಿವಾಸಲು ಯೋಗಾಭ್ಯಾಸ ಮಾಡಿದರು.

ನಗರದ ವಿವಿಧ ಶಾಲೆ, ಕಾಲೇಜುಗಳ ಸುಮಾರು 10 ಸಾವಿರ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ‌ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT