5
ಸ್ವೀಕೃತಗೊಳ್ಳದ ಗುತ್ತಿಗೆದಾರರ ಬಿಡ್‌; ಷರತ್ತು ಸರಳೀಕರಣಕ್ಕೆ ಜಿಲ್ಲಾ ಆಡಳಿತ ಸಲಹೆ

ನಿರಂತರ ನೀರು ಯೋಜನೆ ಗಗನಕುಸುಮ?

Published:
Updated:
ನೀರಿಗಾಗಿ.... ಕಲಬುರ್ಗಿಯ ಜಗತ್‌ ಪ್ರದೇಶದ ನಿವಾಸಿಗಳು ನೀರಿಗಾಗಿ ಪ್ರತಿಭಟನೆ ನಡೆಸಿದ ಸಂಗ್ರಹ ಚಿತ್ರ.

ಕಲಬುರ್ಗಿ: ನಗರಕ್ಕೆ ನಿರಂತರ ನೀರು ಪೂರೈಸುವ 24/7 ಯೋಜನೆ ಸದ್ಯ ಕಾರ್ಯಗತಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ವಿಶ್ವಬ್ಯಾಂಕ್‌ ನೆರವಿನ ಈ ಯೋಜನೆಯ ಅನುಷ್ಠಾನ ಮತ್ತು ನಿರ್ವಹಣೆಗೆ ಎರಡು ಬಾರಿ ಟೆಂಡರ್‌ ಕರೆದಿದ್ದರೂ ಯಾವುದೇ ಬಿಡ್‌ ಸ್ವೀಕೃತಗೊಂಡಿಲ್ಲ.

‘ಕರ್ನಾಟಕ ನಗರ ನೀರು ವಲಯ ಸುಧಾರಣಾ ಯೋಜನೆ’ ಅಡಿಯಲ್ಲಿ ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ ಮಹಾನಗರಗಳ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು ಪೂರೈಸಲು ರಾಜ್ಯ ಸರ್ಕಾರ ರೂಪಿಸಿರುವ ಯೋಜನೆ ಇದು. ಬೆಳಗಾವಿ ಮತ್ತು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗಳು ಈ ಯೋಜನೆಗೆ ಆರಂಭದಲ್ಲೇ ಒಪ್ಪಿಗೆ ಸೂಚಿಸಿದ್ದವು. ಕಲಬುರ್ಗಿ ಪಾಲಿಕೆ ಮಾತ್ರ ತಡವಾಗಿ ಸಮ್ಮತಿ ನೀಡಿತ್ತು. ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ತಾವರಗೇರಾ (ಸಲಾಮ್‌ ಟೇಕಡಿ) ಗ್ರಾಮದಲ್ಲಿ ಐದು ಎಕರೆ ಜಮೀನು ಖರೀದಿಗೂ ಒಪ್ಪಿಗೆ ನೀಡಿತ್ತು.

ಕಲಬುರ್ಗಿ ನಗರದ ಎಲ್ಲ 55 ವಾರ್ಡ್‌ಗಳಿಗೆ ನಿರಂತರ ನೀರು ಪೂರೈಸಲು ಆರಂಭದಲ್ಲಿ ₹489 ಕೋಟಿಯ ಯೋಜನೆ ರೂಪಿಸಲಾಗಿತ್ತು. ಈ ಮೊತ್ರದಲ್ಲಿ ₹352 (ಶೇ 72ರಷ್ಟು) ಕೋಟಿಯನ್ನು ವಿಶ್ವಬ್ಯಾಂಕ್‌ ಸಾಲದ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಲು ಒಪ್ಪಿತ್ತು. ಯೋಜನಾ ಮೊತ್ತದ ಶೇ 22ರಷ್ಟನ್ನು (₹137 ಕೋಟಿ)ನ್ನು ಮಹಾನಗರ ಪಾಲಿಕೆ ನೀಡಲು ಸಮ್ಮತಿಸಿತ್ತು.

ಈ ಯೋಜನೆ ನಿರ್ವಹಣೆಗೆ ಸುಯೆಜ್‌ ಇಂಡಿಯಾ, ವಿಯೋಲಿಯಾ ವಾಟರ್‌ ಇಂಡಿಯಾ ಲಿಮಿಟೆಡ್‌, ಮೆನಿಲ್ಯಾಡ್‌ ವಾಟರ್‌ ಸರ್ವೀಸಸ್‌, ಎಫ್‌ಸಿಸಿ ಅಕ್ವೇರಿಯಾ, ರೆಮಾಂಡಿಸ್‌, ಇಂಡಾ ಅಕ್ವಾ ಕಂಪನಿಗಳು ಆಸಕ್ತಿ ವಹಿಸಿದ್ದವು.

‘ಮೊದಲ ಬಾರಿ ಕರೆದಿದ್ದ ಟೆಂಡರ್‌ನಲ್ಲಿ ಯೋಜನಾ ಮೊತ್ತಕ್ಕಿಂತ ಶೇ 68ರಷ್ಟು ಹೆಚ್ಚಿನ ಮೊತ್ತ ನೀಡುವಂತೆ ಗುತ್ತಿಗೆದಾರ ಕಂಪನಿಯವರು ನಮೂದಿಸಿದ್ದರು. ಹೀಗಾಗಿ ಆ ಟೆಂಡರ್‌ ರದ್ದುಗೊಳಿಸಲಾಗಿತ್ತು. ಎರಡನೇ ಬಾರಿ ಕರೆದ ಟೆಂಡರ್‌ ಸಹ ಸ್ವೀಕೃತವಾಗಲಿಲ್ಲ’ ಎಂಬುದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ)ಯ ಅಧಿಕಾರಿಗಳ ಮಾಹಿತಿ.

ತಲಾ 135 ಲೀಟರ್‌ ನೀರು: 2026ಕ್ಕೆ ಕಲಬುರ್ಗಿ ನಗರದ ಜನಸಂಖ್ಯೆ 8.15 ಲಕ್ಷ ಹಾಗೂ 2041ನೇ ಸಾಲಿಗೆ ಜನಸಂಖ್ಯೆ 11.26 ಲಕ್ಷಕ್ಕೆ ತಲುಪುವ ಅಂದಾಜು ಇದೆ. ಅಷ್ಟು ಜನರಿಗೆ ನಿತ್ಯ 135 ಲೀಟರ್‌ ನೀರು ಪೂರೈಸಲು ಈ ಯೋಜನೆ ರೂಪಿಸಲಾಗಿದೆ. ನಗರದಲ್ಲಿ ಸದ್ಯ 50 ಸಾವಿರದಷ್ಟು ನಳಗಳ ಸಂಪರ್ಕ ಇದ್ದು, 80 ಸಾವಿರ ನಳಗಳ ಸಂಪರ್ಕ ಕಲ್ಪಿಸುವ ಅವಕಾಶ ಈ ಯೋಜನೆಯಲ್ಲಿದೆ.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಐಡಿಎಫ್‌ಸಿ) ಈ ಯೋಜನೆಯ ನೋಡಲ್‌ ಏಜೆನ್ಸಿಯಾಗಿದೆ. ಯೋಜನೆಯ ಒಡೆತನ ಮಹಾನಗರ ಪಾಲಿಕೆಯದ್ದು. ಮಹಾನಗರ ಪಾಲಿಕೆಯೇ ‘ವಿಶೇಷ ಉದ್ದೇಶದ ಕಂಪನಿ’ ಸ್ಥಾಪಿಸಿ ಅದರ ಮೂಲಕ ಯೋಜನೆಯನ್ನು ನಿರ್ವಹಿಸಬೇಕಾಗುತ್ತದೆ.

ಟೆಂಡರ್‌ ಷರತ್ತುಗಳ ಸರಳೀಕರಣ ಹಾಗೂ ತೊಂದರೆಗಳ ನಿವಾರಣೆಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆಯ ಅಧಿಕಾರಿಗಳನ್ನು ಕೋರಲಾಗಿದೆ.
ಆರ್‌.ವೆಂಕಟೇಶಕುಮಾರ್‌, ಜಿಲ್ಲಾಧಿಕಾರಿ

ಪರಿಷ್ಕೃತ ಮೊತ್ತಕ್ಕೆ ವಿಶ್ವಬ್ಯಾಂಕ್‌ನ ಒಪ್ಪಿಗೆ ಪಡೆದು ಕಾಮಗಾರಿಗೆ ಮತ್ತೆ ಟೆಂಡರ್‌ ಕರೆಯುವ ವಿಷಯದಲ್ಲಿ ನಮ್ಮ ಮುಖ್ಯ ಕಚೇರಿಯವರು ಕಾರ್ಯಪ್ರವೃತ್ತರಾಗಿದ್ದಾರೆ. ಡಿಸೆಂಬರ್‌ ವೇಳೆಗೆ ಟೆಂಡರ್‌ ವಹಿಸಿಕೊಡುವ ಗುರಿ ಹೊಂದಲಾಗಿದೆ.
ಡಿ.ವಿ. ಬಂಡೇವಾಡ, ಕಾರ್ಯನಿರ್ವಾಹಕ ಎಂಜಿನಿಯರ್‌, ಕೆಯುಐಎಫ್‌ಡಿಸಿ

ಯೋಜನಾ ಮೊತ್ತ ಹೆಚ್ಚಳ

ಈ ಯೋಜನೆಯ ಅಂದಾಜು ಮೊತ್ತ ₹489 ಕೋಟಿ ಇತ್ತು. ಅನುಷ್ಠಾನ ವಿಳಂಬವಾಗಿದ್ದರಿಂದ ಈಗ ಆ ಯೋಜನಾ ಮೊತ್ತ ₹562 ಕೋಟಿಗೆ ತಲುಪಿದೆ.  ‘ಪರಿಷ್ಕೃತ ಯೋಜನಾ ಮೊತ್ತಕ್ಕೆ ವಿಶ್ವಬ್ಯಾಂಕ್‌ನಿಂದ ಅನುಮೋದನೆ ಪಡೆಯಬೇಕು. ಆದರೆ, ಐದು ವರ್ಷದ ಹಿಂದೆ ರೂಪಿಸಿದ್ದ ಯೋಜನೆ ಇದಾಗಿದ್ದು, ಸದ್ಯ ನೀರು ನಿರ್ವಹಣೆಯಲ್ಲಿಯ ಹೊಸ ಆವಿಷ್ಕಾರಗಳನ್ನು ಪರಿಷ್ಕೃತ ಯೋಜನೆಯಲ್ಲಿ ಅಳವಡಿಸಿಕೊಳ್ಳುವಂತೆ ಷರತ್ತನ್ನು ವಿಶ್ವಬ್ಯಾಂಕ್‌ ವಿಧಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಪ್ರಯೋಗಿಕ ಅನುಷ್ಠಾನ

ಕಲಬುರ್ಗಿ ನಗರದ ನಾಲ್ಕು (17, 23, 33, 44) ವಾರ್ಡ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ಏಳು ವಾರ್ಡ್‌ಗಳ (6, 19, 24, 32, 42, 43, 49) ಭಾಗಶಃ ಪ್ರದೇಶಕ್ಕೆ ನಿರಂತರ ನೀರು ಪೂರೈಸುವ ಪ್ರಾಯೋಗಿಕ ಯೋಜನೆಯನ್ನು ಈಗಾಗಲೆ (2005–2011ರ ಅವಧಿಯಲ್ಲಿ) ಅನುಷ್ಠಾನಗೊಳಿಸಲಾಗಿದೆ.

‘ಈ ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಮೊದಲ ಮಹಡಿವರೆಗೆ ತಲುಪುವಷ್ಟು ನೀರಿನ ಒತ್ತಡ ಇರುತ್ತದೆ. ಆದರೆ, ಮೊದಲ ಮಳೆಗೆ ರಾಡಿ ನೀರು ನದಿಗೆ ಬಂದಾಗ ಸ್ವಲ್ಪ ರಾಡಿ ಮಿಶ್ರಿತ ನೀರು ಪೂರೈಕೆಯಾಗುವ ಸಾಧ್ಯತೆ ಇರುತ್ತದೆ’ ಎಂದು ಡಿ.ವಿ.ಬಂಡೆವಾಡ ಹೇಳಿದರು.

‘ನಿರಂತರ ನೀರು ಪೂರೈಕೆಯಾಗುತ್ತಿರುವ ಈ ವಾರ್ಡ್‌ಗಳವರು ನೀರು ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಪ್ರವಾಹ ನೀರು ನದಿಗೆ ಬರುವ ಸಾಧ್ಯತೆ ಇದ್ದರೆ ಈ ವಾರ್ಡ್‌ಗಳ ನಿವಾಸಿಗಳಿಗೆ ಮುಂಚಿತವಾಗಿ ತಿಳಿಸಿದರೆ ಅವರು ನೀರು ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಒಂದು ದಿನ ರಾಡಿ ಮಿಶ್ರಿತ ನೀರು ಪೂರೈಕೆಯಾದರೂ ಅಂಥದ್ದೇನು ಸಮಸ್ಯೆಯಾಗದು’ ಎನ್ನುತ್ತಾರೆ ಅವರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !