ಶುಕ್ರವಾರ, ಜುಲೈ 30, 2021
23 °C
ಕಡಿಮೆಯಾದ ಉತ್ಪನ್ನಗಳ ಆವಕ; ಸಂಕಷ್ಟದಲ್ಲಿ ಕಾರ್ಮಿಕರು, ಮಾಲೀಕರು

ಎಪಿಎಂಸಿ: ವಹಿವಾಟು ಚೇತರಿಕೆ ನಿರೀಕ್ಷೆ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಲಾಕ್‌ಡೌನ್ ಸಡಿಲಿಕೆ ನಂತರವೂ ಇಲ್ಲಿನ ಗಂಜ್ ಪ್ರದೇಶದಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ಚುರುಕುಗೊಂಡಿಲ್ಲ. ಇಲ್ಲಿನ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರು ವಹಿವಾಟು ಚೇತರಿಕೆ ನಿರೀಕ್ಷೆಯಲ್ಲಿದ್ದಾರೆ.‌

ಮಾರುಕಟ್ಟೆಗೆ ಬರುವ ಗ್ರಾಮೀಣರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಸಗಟು ಹಾಗೂ ಚಿಲ್ಲರೆ ವ್ಯಾಪಾರದ ಬಹುಪಾಲು ಮಳಿಗೆಗಳ ಮುಂದೆ ಮಾಲೀಕರು ಹಾಗೂ ಕಾರ್ಮಿಕರು ಖರೀದಿದಾರರ ನಿರೀಕ್ಷೆಯಲ್ಲಿ ಕುಳಿತಕೊಂಡಿದ್ದಾರೆ. ಕೆಲವೇ ಕೆಲವು ಮಳಿಗೆಗಳಲ್ಲಿ ಕಾರ್ಮಿಕರು ಲಾರಿಗಳಿಗೆ ಧಾನ್ಯಗಳ ಚೀಲ ತುಂಬಿಸುತ್ತಿರುವ ದೃಶ್ಯಗಳು ಬುಧವಾರ ಕಂಡುಬಂದವು.‌

ಬಹುತೇಕ ಉತ್ಪನ್ನಗಳ ಆವಕ ಕಡಿಮೆಯಾಗಿದೆ. ಮೆಕ್ಕೆಜೋಳ, ಅಕ್ಕಿ, ಅಲಸಂದಿ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಹಲವು ಧಾನ್ಯಗಳ ಆವಕ ನಿಂತುಹೋಗಿದೆ. ಇಲ್ಲಿನ ಎಪಿಎಂಸಿಯಲ್ಲಿರುವ ಕಂಡು ಬರುವ ಪ್ರಮುಖ ಬೆಳೆ ತೊಗರಿ ಸರಬರಾಜಿನಲ್ಲೂ ಇಳಿಕೆ ಕಂಡಿದ್ದು, ತೊಗರಿ ಖರೀದಿಸುವವರ ಸಂಖ್ಯೆಯೂ ಕಡಿಮೆ ಆಗಿದೆ. 5206 ಕ್ವಿಂಟಲ್ ತೊಗರಿ ಆವಕವಾಗಿದ್ದರೆ, ಕಡಲೆ 235 ಕ್ವಿಂಟಲ್ ಆವಕವಾಗಿದೆ. ಇನ್ನುಳಿದಂತೆ ಹೆಸರು 20 ಕ್ವಿಂಟಲ್, ಉದ್ದು 20 ಕ್ವಿಂಟಲ್, ಜೋಳ 80 ಕ್ವಿಂಟಲ್, ಗೋಧಿ (ಶರಬತಿ) 10 ಕ್ವಿಂಟಲ್ ಹಾಗೂ ಸಜ್ಜೆ 5 ಕ್ವಿಂಟಲ್ ಆವಕವಾಗಿದೆ.

ಧಾರಣೆ ಕುಸಿತ: ಖರೀದಿದಾರರು ಬಾರದ ಕಾರಣ ಬೇಡಿಕೆ ಕಡಿಮೆಯಾಗಿದ್ದು, ಬಹುತೇಕ ಉತ್ಪನ್ನಗಳ ಧಾರಣೆ ಕುಸಿದಿದೆ. ಉತ್ತಮ ಗುಣಮಟ್ಟದ ತೊಗರಿಗೆ ಕ್ವಿಂಟಲ್‌ಗೆ ₹ 6350 ದರವಿದೆ. ಉತ್ತರ ಕರ್ನಾಟಕದ ಪ್ರಮುಖ ಆಹಾರಧಾನ್ಯ ಬಿಳಿ ಜೋಳದ ಧಾರಣೆಯು ಕುಸಿದಿದೆ. ‌ಮಾಲ್ದಂಡಿ ಜೋಳಕ್ಕೆ ₹ 3,200 ದರವಿದ್ದರೆ, ಹೈಬ್ರಿಡ್ ಜೋಳಕ್ಕೆ 1,400 ಇದೆ.

ಅಕ್ಕಿಗೆ (ಸೋನಾಮಸೂರಿ ಹೊಸ) ₹ 3600 ಧಾರಣೆಯಿದ್ದರೆ, ಅಕ್ಕಿಗೆ (ಸೋನಾಮಸೂರಿ ಹಳೆ) ₹ 4500 ದರವಿದೆ. ಮೆಕ್ಕೆಜೋಳ ₹ 1500, ಅಲಸಂದೆ ₹ 4500, ಸೋಯಾಬಿನ್ ₹ 1625, ಕುಸುಬೆ ₹ 4750, ಎಳ್ಳು ₹ 8,000 ಹಾಗೂ ಬೆಲ್ಲಕ್ಕೆ ₹ 3500 ಧಾರಣೆಯಿದೆ. 100 ತೆಂಗಿನಕಾಯಿಗಳಿಗೆ ₹ 1200 ಬೆಲೆಯಿದೆ.

‘ಶೇ 30ರಷ್ಟು ವ್ಯಾಪಾರ ಕೂಡ ನಡೆಯುತ್ತಿಲ್ಲ. ಹತ್ತಿ, ಎಳ್ಳು, ಎಳ್ಳು ಸೇರಿದಂತೆ ಹಲವು ಉತ್ಪನ್ನಗಳ ಆವಕ ನಿಂತುಹೋಗಿದೆ. ಇಲ್ಲಿನ ಕಾರ್ಮಿಕರಿಗೆ ವೇತನ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಿದೆ’ ಎನ್ನುತ್ತಾರೆ ಶಿವಗಂಗಾ ಟ್ರೇಡರ್ಸ್‌ನ ಶಾಂತಲಿಂಗ ತಿಳಿಸಿದರು.‌

‘ಲಾಕ್‌ಡೌನ್ ಮೊದಲು ನಿತ್ಯ 30ರಿಂದ 40 ಕ್ವಿಂಟಲ್ ಆಹಾರಧಾನ್ಯ ಮಾರಾಟ ಮಾಡುತ್ತಿದ್ದೇವು. ಈಗ 3ರಿಂದ 4 ಕ್ವಿಂಟಲ್ ಧಾನ್ಯಗಳು ಮಾರಾಟವಾದರೆ ಹೆಚ್ಚು ಎನ್ನುವಂತಾಗಿದೆ. ಗ್ರಾಮೀಣ ಭಾಗದ ಜನರು ಎಪಿಎಂಸಿಯತ್ತ ಬರುತ್ತಿಲ್ಲ. ಮುಂಬರುವ ದಿನಗಳಲ್ಲಿ ವಹಿವಾಟು ಚೇತರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ’ ಎಂದು ಇಲ್ಲಿನ ಸಿದ್ಧಗಂಗಾ ಟ್ರೇಡರ್ಸ್ ಮಾಲೀಕ ರವಿಕುಮಾರ ಭರವಸೆ ವ್ಯಕ್ತಪಡಿಸಿದರು.

ಪೇಟೆಧಾರಣೆ
ಕೃಷಿ ಉತ್ಪನ್ನ; ಕನಿಷ್ಠ;ಗರಿಷ್ಠ‌ (ಕ್ವಿಂಟಲ್‌ಗೆ ₹ ಗಳಲ್ಲಿ)
ತೊಗರಿ (ಹೊಸ); 
4351;6350
ಕಡಲೆ; 3500; 4800
ಹೆಸರು; 3900; 5400
ಉದ್ದು; 3350; 6550
ಜೋಳ (ಬಿಳಿ); 2000; 3100
ಗೋಧಿ (ಶರಬತಿ); 1950; 2425
ಸಜ್ಜೆ; 1425; 1650

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು