ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ವಾರ್ಡ್‌ಗೆ ಎರಡು ಕೊಳವೆಬಾವಿ

ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಮಹಾನಗರ ಪಾಲಿಕೆ ತುರ್ತು ಕ್ರಮ
Last Updated 7 ಮಾರ್ಚ್ 2019, 14:50 IST
ಅಕ್ಷರ ಗಾತ್ರ

ಕಲಬುರ್ಗಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ವಾರ್ಡ್‌ಗಳಲ್ಲಿ ತಲಾ ಎರಡು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ವಾರ್ಡ್‌ಗಳಲ್ಲಿ ಮೂರು ಕೊಳವೆಬಾವಿ ಕೊರೆಯಲು ಗುರುವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಪ್ರತಿ ಕೊಳವೆಬಾವಿಗೆ ₹1.50 ಲಕ್ಷ ವಿನಿಯೋಗಿಸಲು ಹಾಗೂ 14ನೇ ಹಣಕಾಸು ಯೋಜನೆಯಲ್ಲಿ ಉಳಿದಿರುವ ₹1.58 ಕೋಟಿ ಅನುದಾನವನ್ನುಇದಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.

‘ನಗರದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದೆ. ಚರಂಡಿ ನೀರು ಮಿಶ್ರಿತ ಕಲುಷಿತ ನೀರು ಪೂರೈಕೆಯಾಗುತ್ತಿದೆ’ ಎಂದು ಬಹುಪಾಲು ಸದಸ್ಯರು ಆರೋಪಿಸಿದರು. ಇದಕ್ಕೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳು, ’ನಲ್ಲಿಗಳಲ್ಲಿ ಪೂರೈಕೆಯಾಗುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪ್ರಯೋಗಾಲಯದ ವರದಿ ಹೇಳುತ್ತದೆ’ ಎಂದು ಸಮರ್ಥಿಸಿಕೊಂಡರು.

ಎರಡು ದೊಡ್ಡ ಹಾಗೂ ಮೂರು ಚಿಕ್ಕ ಟ್ಯಾಂಕರ್‌ಗಳಿವೆ. ಸಮಸ್ಯಾತ್ಮಕ ಪ್ರದೇಶಗಳಿಗೆ ಅವುಗಳಿಂದ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು.

‘ಸುಂದರ ನಗರ, ಭರತ್‌ ನಗರ ತಾಂಡಾ ಸೇರಿದಂತೆ 52ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ’ ಎಂದ ಸದಸ್ಯ ರಮಾನಂದ ಉಪಾಧ್ಯಾಯ, ಸಾರ್ವಜನಿಕರೊಬ್ಬರಿಂದ ಬಂದ ಕರೆ ಸ್ವೀಕರಿಸಿ ಸ್ಪೀಕರ್‌ ಆನ್‌ ಮಾಡಿದರು. ‘ಬೆಳಿಗ್ಗೆ ನೀರು ಬರುತ್ತದೆ ಎಂದು ಹೇಳಿದ್ದರು. ಇನ್ನೂ ಬಿಟ್ಟಿಲ್ಲ. ನಾವೆಲ್ಲ ಕಾಯುತ್ತ ಕುಳಿತಿದ್ದೇವೆ’ ಎಂದು ಕರೆ ಮಾಡಿದ್ದ ಮಹಿಳೆ ಅಲವತ್ತುಕೊಂಡರು.

ಇದರಿಂದ ಸಿಟ್ಟಾದ ಮೇಯರ್‌ ಮಲ್ಲಮ್ಮ ವಳಕೇರಿ, ‘ಮೊಬೈಲ್‌ ಬಂದ್‌ ಮಾಡಿ. ಸಮಸ್ಯೆ ಮಾತ್ರ ಹೇಳಿ’ ಎಂದು ಸೂಚಿಸರು.

‘₹5ಲಕ್ಷಕಕ್ಕಿಂತ ಕಡಿಮೆ ಮೊತ್ತದ ನೀರಿನ ಕಾಮಗಾರಿಗಳನ್ನು ಕಡಿಮೆ ಅವಧಿಯ ಟೆಂಡರ್‌ ಕರೆದು ಅನುಷ್ಠಾನಗೊಳಿಸಲು ಅನುಮೋದನೆ ನೀಡಬೇಕು’ ಎಂದು ವಿರೋಧ ಪಕ್ಷದ ನಾಯಕ ವಿಠಲ ಜಾಧವ ಸಲಹೆ ನೀಡಿದರು.

‘ಬಸವನಗರ ಟ್ಯಾಂಕ್‌ನಿಂದ ಸಂಪರ್ಕ ಕಲ್ಪಿಸಿ ಎಂದು ಆರು ತಿಂಗಳಿನಿಂದ ಹೇಳುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು 37ನೇ ವಾರ್ಡ್‌ನ ಸದಸ್ಯೆ ಆರೋಪಿಸಿದರು. ಅವರಿಗೆ 10 ದಿನಗಳಲ್ಲಿ ಸಂಪರ್ಕ ಕಲ್ಪಿಸುವ ಭರವಸೆ ನೀಡಲಾಯಿತು.

‘ನಮ್ಮ ವಾರ್ಡ್‌ನಲ್ಲಿ ಕೊಳವೆಬಾವಿಗೆ ಪಂಪ್‌ಸೆಟ್‌ ಅಳವಡಿಸಿಲ್ಲ’ ಎಂದು ಗೀತಾ ರಾಜು ವಾಡೇಕರದೂರಿದರು.

‘ಕೋರಂಟಿ ಹನುಮಾನ ದೇವಸ್ಥಾನ, ತಾರಾಫೈಲ್‌ , ಹನುಮಾನ ತಾಂಡಾ ಮತ್ತಿತರ ಪ್ರದೇಶದಲ್ಲಿ ನೀರು ಸೋರಿಕೆಯಾಗುತ್ತಿದೆ. ಒಡೆದಿರುವ ಕೊಳವೆಯಲ್ಲಿ ಚರಂಡಿ ನೀರು ಮಿಶ್ರಣವಾಗಿ, ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳುಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದು ಹರಿಹಾಯ್ದರು.

‘ಒಂದು ಸೋರಿಕೆ ತಡೆಗಟ್ಟಿದ್ದು, ಇನ್ನೊಂದು ಬದಿಯ ಸೋರಿಕೆ ತಡೆಗಟ್ಟುತ್ತೇವೆ’ ಎಂದು ಅಧಿಕಾರಿಗಳು ಹೇಳಿದರು.

‘ವಾರ್ಡ್‌ ನಂ.18ರಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, 14 ವರ್ಷಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ’ ಎಂದು ಶರಣಮ್ಮ ಬೆಣ್ಣೂರ ಅಸಹಾಯಕತೆ ವ್ಯಕ್ತಪಡಿಸಿದರು.

‘ನನ್ನ ವಾರ್ಡ್‌ನಲ್ಲಿಯ ಕೊಳವೆಬಾವಿಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಮಾಡಿಸಿ. ನೀರು ಇರುವ ಕೊಳವೆಬಾವಿಗಳಿಗೆ ಪಂಪ್‌ಸೆಟ್‌ ಅಳವಡಿಸಿ ನೀರು ಪೂರೈಸಿ’ ಎಂದು ಆರತಿ ತಿವಾರಿ ನೀಡಿದ ಸಲಹೆಗೆ ಅಧಿಕಾರಿಗಳು ಸಮ್ಮತಿಸಿದರು.

‘ಮಿಸ್ಬಾನಗರದಲ್ಲಿ 2 ವರ್ಷದ ಹಿಂದೆಯೇ ಪೈಪ್‌ಲೈನ್‌ ಅಳವಡಿಸಿದ್ದು, ಸಂಪರ್ಕ ಕಲ್ಪಿಸಿಲ್ಲ’ ಎಂದು ಆ ವಾರ್ಡ್‌ ಸದಸ್ಯರು ದೂರಿದರೆ,‘300 ಅಡಿ ಬದಲು ಅಂತರ್ಜಲಮಟ್ಟದ ಅಧ್ಯಯನ ನಡೆಸಿ ಅದಕ್ಕೆ ತಕ್ಕಷ್ಟು ಆಳ ಕೊಳವೆಬಾವಿ ಕೊರೆಯುವಂತೆ ಕ್ರಿಯಾಯೋಜನೆ ರೂಪಿಸಿ’ ಎಂದು ಸೈಯದ್‌ ಅಹ್ಮದ್‌ ಸಲಹೆ ನೀಡಿದರು.

‘ಸರಡಗಿ ಬ್ಯಾರೇಜ್‌ನಲ್ಲಿ ಲಭ್ಯ ಇರುವ ನೀರನ್ನು ಪರಿಶೀಲಿಸಿದ್ದೀರಾ’ ಎಂದು ಶರಣು ಮೋದಿ ಪ್ರಶ್ನಿಸಿದರು.

ಇರುವ ನೀರು 10 ದಿನಕ್ಕಷ್ಟೇ ಸಾಲುತ್ತೆ!
ಕಲಬುರ್ಗಿ ನಗರಕ್ಕೆ ಪೂರೈಕೆಯಾಗುವ ಜಲಮೂಲಗಳಲ್ಲಿ ಹತ್ತು ದಿನಕ್ಕೆ ಸಾಲುವಷ್ಟು ಮಾತ್ರ ನೀರಿದೆ.

ಭೋಸಗಾ ಕೆರೆ ಬತ್ತಿದ್ದರಿಂದ ಅಲ್ಲಿಂದ ನೀರು ಪಡೆಯುತ್ತಿಲ್ಲ. ಭೀಮಾ ನದಿಯ ಸರಡಗಿ ಬ್ಯಾರೇಜ್‌ನಲ್ಲಿ 0.03 ಟಿಎಂಸಿ ಅಡಿ ನೀರಿದ್ದು, ಇದು 10 ದಿನಕ್ಕೆ ಸಾಲುತ್ತದೆ. ನಾರಾಯಣಪುರ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಆ ನೀರು ಕಲ್ಲೂರ್‌ ಬ್ಯಾರೇಜ್‌ ತಲುಪಿದೆ. ಅಲ್ಲಿಂದ ಸರಡಗಿ ಬ್ಯಾರೇಜ್‌ಗೆ ತಲುಪಲಿದೆ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪಾಟೀಲ ತಿಳಿಸಿದರು.

ಬೆಣ್ಣೆತೊರಾ ಜಲಾಶಯದಲ್ಲಿಯೂ 10 ದಿನಕ್ಕೆ ಸಾಲುವಷ್ಟು ನೀರಿದ್ದು, ಗಂಡೋರಿ ನಾಲಾದಿಂದ ಬೆಣ್ಣೆತೊರಾಕ್ಕೆ ನೀರು ಹರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

190 ಕೊಳವೆಬಾವಿ ಬರಿದು
ಸಾರ್ವಜನಿಕರಿಗೆ ನೀರು ಪೂರೈಸಲು ನಗರದಲ್ಲಿ ಕೊರೆದಿರುವ ಕೊಳವೆಬಾವಿಗಳಲ್ಲಿ 190 ಬತ್ತಿವೆ. 848 ಕೊಳವೆಬಾವಿಗಳಲ್ಲಿ ನೀರಿದ್ದು, ಅವುಗಳಿಂದ ನೀರು ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT