ಗುಲಬರ್ಗಾ ಲೋಕಸಭಾ ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ 21ರಂದು ಸಂಜೆ ತೆರೆ

ಬುಧವಾರ, ಏಪ್ರಿಲ್ 24, 2019
23 °C
130 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌

ಗುಲಬರ್ಗಾ ಲೋಕಸಭಾ ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ 21ರಂದು ಸಂಜೆ ತೆರೆ

Published:
Updated:
Prajavani

ಕಲಬುರ್ಗಿ: ‘ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಬಹಿರಂಗ ಪ್ರಚಾರ ಏ.21ರಂದು ಸಂಜೆ 6ಕ್ಕೆ ಕೊನೆಗೊಳ್ಳಲಿದೆ. ಆ ನಂತರ ಮನೆ ಮನೆ ಪ್ರಚಾರಕ್ಕೆ ಅವಕಾಶ ಇದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದರು.

‘ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿನ ಅವಧಿಯಲ್ಲಿ ಮತದಾರರಲ್ಲದವರು ಕ್ಷೇತ್ರ ತೊರೆಯಬೇಕು. ಆದರೆ, ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವವರಿಗೆ ವಿನಾಯಿತಿ ಇದೆ. ಈ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೂ ಅನುಮತಿ ಇಲ್ಲ’ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘516 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಈ ಪೈಕಿ 130 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ವೀಕ್ಷಿಸಲು ವೆಬ್‌ಕಾಸ್ಟಿಂಗ್‌ ಮಾಡಲಾಗುತ್ತಿದೆ. ಜಿಲ್ಲಾ, ರಾಜ್ಯ ಮತ್ತು ಕೇಂದ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ’ ಎಂದರು.

ಮತಗಟ್ಟೆಗಳ 100 ಮೀಟರ್‌ ವ್ಯಾಪ್ತಿಯಲ್ಲಿ ಏ.21ರ ಸಂಜೆ 6ರಿಂದ ಮತದಾನ ಮುಗಿಯುವವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಏ.21ರ ಸಂಜೆ 6ರಿಂದ ಏ.24ರ ಮಧ್ಯರಾತ್ರಿಯ ವರೆಗೆ ಇಡೀ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧಿಸಲಾಗುವುದು.

ಮತದಾರರ ಭಾವಚಿತ್ರವಿರುವ ಚೀಟಿಗಳನ್ನು ಜಿಲ್ಲಾ ಆಡಳಿತದಿಂದ ಮನೆ ಮನೆಗೆ ವಿತರಿಸಲಾಗುತ್ತಿದೆ. ಆದರೆ, ಚುನಾವಣಾ ಆಯೋಗ ನಿಗದಿ ಪಡಿಸಿರುವ ಭಾವಚಿತ್ರ ಇರುವ 11 ಗುರುತಿನ ಚೀಟಿಗಳ ಪೈಕಿ ಒಂದನ್ನು ತರುವುದು ಕಡ್ಡಾಯ ಎಂದರು.

₹18 ಲಕ್ಷ ನಗದು ವಶ: ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ₹18 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಆ ಪೈಕಿ ದಾಖಲೆ ಹಾಜರು ಪಡಿಸಿದ ₹8.87 ಲಕ್ಷ ಹಣವನ್ನು ಸಂಬಂಧಿಸಿದವರಿಗೆ ಹಿಂದಿರುಗಿಸಲಾಗಿದೆ. ಮದ್ಯ ಸಾಗಾಣಿಗೆ ಸಂಬಂಧಿಸಿದಂತೆ ಒಟ್ಟು 316 ಪ್ರಕರಣ ದಾಖಲಾಗಿದ್ದು, ₹38.53 ಲಕ್ಷ ಮೌಲ್ಯದ 7,340 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್‌ ಇದ್ದರು.

ವೈದ್ಯರ ಅಮಾನತಿಗೆ ಶಿಫಾರಸು

ಒಂದು ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ ಆರೋಪದ ಮೇರೆಗೆ ಸರ್ಕಾರಿ ವೈದ್ಯರೊಬ್ಬರನ್ನು ಅಮಾನತುಗೊಳಿಸುವಂತೆ ಶಿಫಾಸರು ಮಾಡಲಾಗಿದೆ. ಇದೇ ಕಾರಣಕ್ಕೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !