ಚರಂಡಿ ಸ್ವಚ್ಛತಾ ಅಭಿಯಾನ: ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿ ಸೂಚನೆ

7

ಚರಂಡಿ ಸ್ವಚ್ಛತಾ ಅಭಿಯಾನ: ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿ ಸೂಚನೆ

Published:
Updated:
Deccan Herald

ಕಲಬುರ್ಗಿ: ಕಲಬುರ್ಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಚರಂಡಿಗಳನ್ನು ಏಕಕಾಲದಲ್ಲಿ 10 ದಿನಗಳಲ್ಲಿ ಸ್ವಚ್ಛಗೊಳಿಸಲು ಮುಂದಿನ ವಾರ ‘ಚರಂಡಿ ಸ್ವಚ್ಛತಾ ವಿಶೇಷ ಅಭಿಯಾನ’ ಆರಂಭಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಅವರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಅಭಿವೃದ್ಧಿ, ಸ್ವಚ್ಛತೆ ಹಾಗೂ ನೀರು ಪೂರೈಕೆ ಕುರಿತು ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.

‘ನಗರದಲ್ಲಿಯ ತೆರೆದ ಚರಂಡಿಗಳು, ಪೌರಕಾರ್ಮಿಕರ ಸಂಖ್ಯೆ, ಚರಂಡಿ ಸ್ವಚ್ಛತೆಗೆ ನಿಯೋಜನೆಗೊಂಡಿರುವ ಸಫಾಯಿ ಕರ್ಮಚಾರಿಗಳ ಸಂಖ್ಯೆಯ ವಿವರದೊಂದಿಗೆ ವಿಶೇಷ ಅಭಿಯಾನದ ಸಂಪೂರ್ಣ ಕ್ರಿಯಾ ಯೋಜನೆಯನ್ನು ಮೂರು ದಿನಗಳಲ್ಲಿ ಸಲ್ಲಿಸಬೇಕು’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್‌ಗೆ ನಿರ್ದೇಶನ ನೀಡಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಈಚೆಗೆ ನಡೆಸಿದ ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಚರಂಡಿ ಸ್ವಚ್ಛತೆ ಸಂಬಂಧ ದೂರುಗಳು ಬಂದಿವೆ. ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಸಾಗದ ಕಾರಣ ದುರ್ವಾಸನೆ ಹಬ್ಬಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಆಗಾಗ ಚರಂಡಿ ಸ್ವಚ್ಛಗೊಳಿಸುತ್ತಿರಬೇಕು’ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವನಗೌಡ ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ.ಎ.ಆರಿಫ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತಾಂತ್ರಿಕ ಸಹಾಯಕ ಆರ್.ವಿ.ಪಾಟೀಲ, ಸಹಾಯಕ ಕಾರ್ಯನಿವಾಹಕ ಎಂಜಿನಿಯರ್‌ರಾದ ನರಸಿಂಹರೆಡ್ಡಿ, ಉಮೇಶ ಪಾಂಚಾಳ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್‌ ರಂಗಯ್ಯ ಬಡಿಗೇರ ಇದ್ದರು.

‘ಕುಂದು–ಕೊರತೆಗೆ ಸ್ಪಂದಿಸಿ’

‘ನಗರದಲ್ಲಿ ಕುಡಿಯುವ ನೀರಿನ ತೊಂದರೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಸಾರ್ವಜನಿಕರು ಕರೆ ಮಾಡಿದಾಗ ಸ್ವೀಕರಿಸಿ ಸಮಸ್ಯೆಗೆ ಕೂಡಲೆ ಸ್ಪಂದಿಸಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಕುಂದು– ಕೊರತೆಗಳನ್ನು ಗಮನಿಸಿ ಅವುಗಳ ಪರಿಹಾರಕ್ಕೂ ಕಾರ್ಯಪ್ರವೃತ್ತರಾಗಬೇಕು’ ಎಂದು ಪಾಲಿಕೆ ಮತ್ತು ಜಲಮಂಡಳಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದರು.

‘ಜಿಲ್ಲಾ ಆಸ್ಪತ್ರೆಗೆ ನೀರು ಪೂರೈಸಿ’

‘ಜಿಲ್ಲಾ ಆಸ್ಪತ್ರೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಸಮರ್ಪಕ ನೀರು ಪೂರೈಸದಿದ್ದರೆ ತೊಂದರೆಯಾಗುತ್ತದೆ. ಪ್ರಥಮ ಆದ್ಯತೆಯ ಮೇರೆಗೆ ಆಸ್ಪತ್ರೆಗೆ ಬೇಡಿಕೆಯಷ್ಟು ನೀರನ್ನು ಟ್ಯಾಂಕರ್‌ ಮೂಲಕ ಪೂರೈಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಜಲಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಹಂದಿ ಸಾಕುವವರ ಮೇಲೆ ಕ್ರಿಮಿನಲ್ ಮೊಕದ್ದಮೆ

‘ಹಂದಿಗಳ ಸಾಕಾಣಿಕೆಯಿಂದ ಸಾಂಕ್ರಾಮಿಕ ರೋಗಗಳು ಹರಡಿ ಜನರ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಹಂದಿ ಸಾಕಾಣಿಕೆಯ ಪ್ರದೇಶ ಗುರುತಿಸಬೇಕು. ದಸರಾ ಹಬ್ಬದ ನಂತರ ಅವುಗಳನ್ನು ಹಿಡಿಯಲು ಕಾರ್ಯಪ್ರವೃತ್ತರಾಗಬೇಕು. ಹಂದಿಗಳನ್ನು ಹಿಡಿಯುವ ಸಂದರ್ಭದಲ್ಲಿ ಹಂದಿ ಮಾಲೀಕರು ಎಂದು ಹೇಳಿಕೊಂಡು ಯಾರಾದರು ಅಡ್ಡಿಪಡಿಸಿದರೆ ಅವರ ವಿರುದ್ಧ ಪಾಲಿಕೆಯಿಂದ ಕ್ರಿಮಿನಲ್ ಮೊಕದಮ್ಮೆ ದಾಖಲಿಸಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪ್ಲಾಸ್ಟಿಕ್ ನಿಷೇಧ: ನ.1ರಿಂದ ವಿಶೇಷ ಅಭಿಯಾನ

ರಾಜ್ಯ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು, ಇನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲೆಯಲ್ಲಿ ನವೆಂಬರ್ 1 ರಿಂದ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಹೇಳಿದರು.

ಪ್ಲಾಸ್ಟಿಕ್ ನಿಷೇಧದ ಕುರಿತು ವಿಶೇಷ ಅಭಿಯಾನದ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ಸಿದ್ಧಪಡಿಸಬೇಕು. ಪ್ಲಾಸ್ಟಿಕ್ ಸಂಗ್ರಹ, ಬಳಕೆ ಮತ್ತು ಪೂರೈಕೆ ಮಾಡುವವರ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೆ ಮನೆ-ಮನೆಯಿಂದ ಪೌರಕಾರ್ಮಿಕರು ಕಸ ಸಂಗ್ರಹ ಮಾಡುತ್ತಿದ್ದು, ಇದು ಪ್ರತಿನಿತ್ಯ ಮತ್ತು ನಿಗಧಿತ ಅವಧಿಯಲ್ಲಿ ನಡೆಯುವಂತಾಗಬೇಕು. ಕಸ ವಿಂಗಡಣೆ ಹಾಗೂ ರಸ್ತೆಯಲ್ಲಿ ಕಸ ಎಸೆಯದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !