ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ v/s ಜಾಧವ; ‘ವೈಯಕ್ತಿಕ ಪ್ರತಿಷ್ಠೆ’ ಕಾರಣವೇ?

Last Updated 24 ಏಪ್ರಿಲ್ 2019, 8:40 IST
ಅಕ್ಷರ ಗಾತ್ರ

ಕಲಬುರ್ಗಿ: ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ನಡುವೆ ಆರಂಭಗೊಂಡಿರುವ ‘ಕದನ’ಕ್ಕೆ ‘ವೈಯಕ್ತಿಕ ಪ್ರತಿಷ್ಠೆ’ಯೂ ಕಾರಣ ಎಂದು ಹೇಳಲಾಗುತ್ತಿದೆ.

ಈ ಪ್ರತಿಷ್ಠೆಯ ಕಾರಣದಿಂದಾಗಿ ಇಬ್ಬರೂಮಾನಸಿಕವಾಗಿ ದೂರವಾಗಿದ್ದಾರೆ.‘ಹೆಚ್ಚು ದಿನ ಇಲ್ಲೇ ಇದ್ದರೆ ಮಗ್ಗಲು ಮುಳ್ಳು’ ಎಂಬ ನಿಲುವಿಗೆ ಬಂದಿದ್ದಾರೆ.ಹೀಗಾಗಿ ಜಾಧವ ಅವರು ಒಂದು ಕಾಲು ಹೊರಗೆ ಇಟ್ಟಿರುವಂತೆ ಹಾಗೂ ಪ್ರಿಯಾಂಕ್‌ ಅವರು ‘ಹೋದರೆ ಹೋಗಲಿ’ ಎಂಬಂತೆ ವರ್ತಿಸುತ್ತಿದ್ದಾರೆ.

ಜಾಧವ ಅವರನ್ನು ದೂಷಿಸುವ ಇಲ್ಲವೆ ಮನವೊಲಿಸುವ ಗೋಜಿಗೆ ಹೋಗದ ಮಲ್ಲಿಕಾರ್ಜುನ ಖರ್ಗೆ ‘ಟೀಕೆಗೆ ಸ್ವಾಗತ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿರುವುದನ್ನು ರಾಜಕೀಯ ವಲಯದಲ್ಲಿ ವಿಭಿನ್ನವಾಗಿ ಅರ್ಥೈಸಲಾಗುತ್ತಿದೆ.

ಏತನ್ಮಧ್ಯೆ ‘ಮುಳ್ಳನ್ನು ಮುಳ್ಳಿನಿಂದ ತೆಗೆಯುವ ತಂತ್ರಗಾರಿಕೆ’ಯನ್ನು ಕಾಂಗ್ರೆಸ್‌ ಹೆಣೆಯುತ್ತಿದೆ.

‘ಆಪರೇಷನ್‌ ಕಮಲಕ್ಕೆ ಜಾಧವ ಬಲಿಯಾಗಿದ್ದಾರೆ. ₹50 ಕೋಟಿಗೆ ಚಿಂಚೋಳಿ ಕ್ಷೇತ್ರದ ಮತದಾರರನ್ನು ಮಾರಿಕೊಂಡಿದ್ದಾರೆ’ ಎಂಬ ಆರೋಪವನ್ನು ಜಾಧವ ನಿವಾಸದ ಎದುರು ಪ್ರತಿಭಟನೆ ನಡೆಸಿದವರು ಮಾಡಿಯಾಗಿದೆ.

ಹನ್ನೆರಡು ದಿನ ‘ಅಜ್ಞಾತ ಸ್ಥಳ’ದಲ್ಲಿದ್ದ ಜಾಧವ, ಕೊನೆಗೂ ಪ್ರತ್ಯಕ್ಷರಾಗಿ ಕ್ಷೇತ್ರ ಸುತ್ತಿ ಬೆಂಗಳೂರಿಗೆ ತೆರಳಿದ್ದಾರೆ. ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಗಾದಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಹೋಗಿದ್ದಾರೆ.

ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಅವರು ‘ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ’ಯಾಗಿ ಜ.29ರಂದು ಅಧಿಕಾರ ವಹಿಸಿಕೊಳ್ಳಲಿದ್ದು, ಈ ಸಮಾರಂಭದಲ್ಲಿ ಜಾಧವ ಪಾಲ್ಗೊಳ್ಳುತ್ತಾರಾ? ಕಾಂಗ್ರೆಸ್‌ ನಾಯಕರನ್ನು ಭೇಟಿಯಾಗಿ ಚರ್ಚಿಸುತ್ತಾರಾ ಎಂಬುದು ಈಗಿನ ಪ್ರಶ್ನೆ.

ಆ ಮೂರು ಕಾರಣ:

ಜಾಧವ ಮುನಿಸಿಕೊಂಡಿರುವುದಕ್ಕೆ ಅವರಬೆಂಬಲಿಗರು ಮುಂದಿಡುವ ‘ಕಾರಣ’ಗಳ ಪಟ್ಟಿ ಹೀಗಿದೆ.

‘ಕಾರು ಪಲ್ಟಿಯಾಗಿ ಡಾ.ಉಮೇಶ ಜಾಧವ ಗಾಯಗೊಂಡಿದ್ದರು. ಹೈದರಾಬಾದ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಡಾ.ಅಜಯಸಿಂಗ್‌ ಅಲ್ಲಿಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು. ಆದರೆ, ಹೈದರಾಬಾದ್‌ ಮೂಲಕವೇ ಕಲಬುರ್ಗಿಗೆ ಬಂದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೈದರಾಬಾದ್‌ನ ಆಸ್ಪತ್ರೆಯಲ್ಲಿದ್ದ ಉಮೇಶ ಜಾಧವ ಅವರತ್ತ ತಿರುಗಿಯೂ ನೋಡಲಿಲ್ಲ’ವಂತೆ.

‘ಈಚೆಗೆ ಉಮೇಶ ಜಾಧವ ಅವರ ಪುತ್ರನ ವಿವಾಹ ಕಲಬುರ್ಗಿಯಲ್ಲಿ ನಡೆಯಿತು. ವಿವಾಹದ ಹಿಂದಿನ ದಿನ ಕಲಬುರ್ಗಿಯಲ್ಲೇ ಇದ್ದ ಸಂಸದ ಮಲ್ಲಿಕಾರ್ಜುನ ಖರ್ಗೆ, ಅವರ ಮನೆಗೆ ಹೋಗಲಿಲ್ಲ. ಆದರೆ, ಪ್ರಿಯಾಂಕ್‌ ಖರ್ಗೆ ವಿವಾಹಕ್ಕೆ ಹಾಜರಾಗಿದ್ದರು’.

‘ನಾನು ದೆಹಲಿಗೆ ಹೋಗಿ ವಿವಾಹ ಆಮಂತ್ರಣ ಪತ್ರ ಕೊಟ್ಟು ಬಂದಿದ್ದೆ. ಪೂರ್ವನಿಗದಿತ ಕಾರ್ಯಕ್ರಮ ಇದ್ದರೆ ವಿವಾಹ ಮಹೋತ್ಸವ ಬಿಡಲಿ, ಅದರ ಮುನ್ನಾದಿನ ನಮ್ಮ ಮನೆಗೆ ಬಂದು ಒಂದು ಕಪ್‌ ಚಹಾ ಸೇವಿಸಿ ಹೋಗಬಹುದಿತ್ತು. ನಮ್ಮ ನಾಯಕರು ಬಂದರು ಎಂಬ ಹೆಮ್ಮೆ ನಮಗೂಆಗುತ್ತಿತ್ತು. ಕ್ಷೇತ್ರದ ಸಣ್ಣಪುಟ್ಟವರ ಮದುವೆಗೆ ಬರುವ ಖರ್ಗೆ, ನಮ್ಮ ಮಗನ ಮದುವೆಗೆ ಬರಲಿಲ್ಲ ಎಂಬುದು ಜಾಧವ ಅವರ ಮುನಿಸಿಗೆ ಇನ್ನೊಂದು ಕಾರಣ’ ಎನ್ನುತ್ತಾರೆ ಬೆಂಬಲಿಗರು.

‘ಉಮೇಶ ಜಾಧವ ಬಿಜೆಪಿ ಸೇರುತ್ತಾರೆ. ಖರ್ಗೆ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಕಳೆದ ಹಲವು ತಿಂಗಳಿನಿಂದ ಬರುತ್ತಲೇ ಇದೆ. ಸಂಸದ ಖರ್ಗೆ ಅವರು ಕರೆದು ಮಾತನಾಡಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಅವರು ಉದ್ದೇಶಪೂರ್ವಕವಾಗಿಯೇ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ನಿಲುವಿಗೆ ಜಾಧವ ಬಂದಿದ್ದಾರೆ’ ಎನ್ನುವುದು ಬೆಂಬಲಿಗರು ನೀಡುವ ಮೂರನೇ ಕಾರಣ!

‘ನಿರ್ಧಾರ ಮಾಡಿ ಆಗಿದೆ’:

‘ಆಪರೇಷನ್‌ ಕಮಲಕ್ಕೆ ಬಲಿಯಾಗಿ ಉಮೇಶ ಜಾಧವ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ತಕ್ಷಣಕ್ಕೆ ರಾಜೀನಾಮೆ ನೀಡಿದರೆ ಲೋಕಸಭೆ ಚುನಾವಣೆಯೊಂದಿಗೆ ವಿಧಾನಸಭೆಗೆ ಉಪ ಚುನಾವಣೆಯೂ ನಡೆಯುತ್ತದೆ. ಹೀಗಾಗಿ ಅವರು ತಕ್ಷಣಕ್ಕೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್‌ನವರೇ ಹೊರಹಾಕಲಿ ಎಂದು ಪಕ್ಷ ಮತ್ತು ಮುಖಂಡರ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎನ್ನುವುದು ಹೆಸರು ಬಹಿರಂಗ ಪಡಿಸಲು ಒಲ್ಲದ ಕಾಂಗ್ರೆಸ್‌ ಮುಖಂಡರೊಬ್ಬರ ಹೇಳಿಕೆ.

‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು. ಒಂದೊಮ್ಮೆ ಹೆಚ್ಚು ಕಡಿಮೆಯಾದರೆ, ಚಿಂಚೋಳಿ ಕ್ಷೇತ್ರದಿಂದ ಬಿಜೆಪಿಯಿಂದ ಮತ್ತೆ ವಿಧಾನಸಭೆಗೆ ಸ್ಪರ್ಧಿಸುವುದು ಜಾಧವ ಅವರ ಉದ್ದೇಶ’ ಎನ್ನುತ್ತಾರೆ ಕಾಂಗ್ರೆಸ್‌ನ ಆ ನಾಯಕ.

ಮುಳ್ಳಿನಿಂದ ಮುಳ್ಳು ತೆಗೆಯುವ ತಂತ್ರ:

‘ಚಿಂಚೋಳಿ ಕ್ಷೇತ್ರ ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಉಮೇಶ ಜಾಧವ ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಿದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ನಿಲುವಿಗೆ ನಮ್ಮ ನಾಯಕರು ಬಂದಿದ್ದಾರೆ. ಕಲಬುರ್ಗಿ ಜಿಲ್ಲೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿವೆ. ಚಿತ್ತಾಪುರ ಬಲಗೈ, ಕಲಬುರ್ಗಿ ಗ್ರಾಮೀಣ ಎಡಗೈ ಹಾಗೂ ಚಿಂಚೋಳಿ ಕ್ಷೇತ್ರಕ್ಕೆ ಬಂಜಾರ ಸಮುದಾಯದವರಿಗೆ ಟಿಕೆಟ್‌ ಕೊಡಲಾಗುತ್ತದೆ. ಒಂದೊಮ್ಮೆ ಚಿಂಚೋಳಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೂ ಬಂಜಾರ ಸಮುದಾಯದವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಲಿದೆ. ಹಿಂದೆ ಸಚಿವರಾಗಿದ್ದು, ಕೆಲತಿಂಗಳ ಹಿಂದಷ್ಟೇ ಪಕ್ಷ ಬದಲಿಸಿರುವ ಆ ಸಮುದಾಯದ ಪ್ರಭಾವಿ ಮುಖಂಡರೊಬ್ಬರು ಚಿಂಚೋಳಿಯ ಕಾಂಗ್ರೆಸ್‌ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ’ ಎನ್ನುತ್ತಾರೆ ಆ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT