ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತ: ತೇಗಲತಿಪ್ಪಿ ಹೆಗಲಿಗೆ ‘ಪರಿಷತ್’ ನೊಗ

ಉತ್ತಮ ಪೈಪೋಟಿ ನೀಡಿಯೂ ಸೋಲೊಪ್ಪಿಕೊಂಡ ವೀರಭದ್ರ ಸಿಂಪಿ, ಬಿ.ಎಚ್‌. ನಿರಗುಡಿ
Last Updated 22 ನವೆಂಬರ್ 2021, 4:36 IST
ಅಕ್ಷರ ಗಾತ್ರ

ಕಲಬುರಗಿ: ತೀವ್ರ ತುರುಸಿನಿಂದ ಕೂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಚುನಾವಣೆಯಲ್ಲಿ ವಿಜಯಕುಮಾರ ತೇಗಲತಿಪ್ಪಿ ಅವರು 557 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರಿಗೆ ಒಟ್ಟು 2,898 ಮತಗಳು ಬಂದಿವೆ.

ಜಿಲ್ಲೆಯ ಒಟ್ಟು 23 ಮತಗಟ್ಟೆಗಳಲ್ಲಿ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೂ ಮತದಾನ ನಡೆಯಿತು. ಜಿಲ್ಲೆಯಲ್ಲಿರುವ ಒಟ್ಟು 16,621 ಮತದಾರರಲ್ಲಿ 7,787 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಒಟ್ಟು 55 ಮತಗಳು ತಿರಸ್ಕೃತಗೊಂಡಿವೆ. ಕ್ರಮಬದ್ಧವಾದ ಮತಗಳ ಸಂಖ್ಯೆ 7732.

ಕೊನೆಯವರೆಗೂ ತೀವ್ರ ಸ್ಪರ್ಧೆ ಒಡ್ಡಿದ್ದ ಪ‍ರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ 2,234 ಮತಗಳು ಬಂದಿವೆ. ನಂತರದ ಸ್ಥಾನದಲ್ಲಿ ಬಿ.ಎಚ್. ನಿರಗುಡಿ 2117, ವಿಶ್ವನಾಥ ಭಕರೆ 368 ಮತಗಳನ್ನು ಪಡೆದಿದ್ದಾರೆ. ಈ ಎಲ್ಲರೂ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಅವರ ಪರಸ್ಪರ ಸ್ಪರ್ಧೆಯಿಂದ ಮತಗಳು ವಿಭಜನೆಗೊಳ್ಳುತ್ತವೆ. ತಮಗೆ ಜಯ ಸುಲಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದ ಮುಖಂಡ ಎ.ಬಿ. ಹೊಸಮನಿ ಅವರು ಕೇವಲ 115 ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.

ನಗರದ ಎಲ್ಲ 10 ಮತಗಟ್ಟೆಗಳಲ್ಲೂ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಭರದ ಮತದಾನ ಆರಂಭವಾಯಿತು. ಮಧ್ಯಾಹ್ನ 12ರಿಂದ 3 ಗಂಟೆಯವರೆಗೂ ತುಸು ಕಡಿಮೆಯಾಯಿತು. 3ರ ನಂತರ ಸುರಿಯುವ ಮಳೆಯಲ್ಲೇ ಹಲವು ಸದಸ್ಯರು, ಸಾಹಿತಿಗಳು, ಬರಹಗಾರರು, ಶಿಕ್ಷಕರು, ಮಹಿಳೆಯರ ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕು ಚಲಾಯಿಸಿದರು.‌

ಕಲಬರಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 3925 (‌ಒಟ್ಟು ಮತ 9876) ಮತಗಳು ಚಲಾವಣೆಯಾಗಿವೆ. ಕಮಲಾಪುರ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ 92 (ಒಟ್ಟು 210) ಮತಗಳು ಚಲಾವಣೆಯಾಗಿವೆ.

ವಿಜಯೋತ್ಸವ: ಚುನಾವಣೆ ಘೋಷಣೆಯಾದ ಮೊದಲ ದಿನದಿಂದಲೂ ತೀವ್ರ ಪ್ರಚಾರದಲ್ಲಿ ತೊಡಗಿದ್ದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಅವರು, ಕೊನೆಗೂ ತಮ್ಮ ಕನಸು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ರಾತ್ರಿ 9ರ ಸುಮಾರಿಗೆ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ವಿಜಯಕುಮಾರ ಅವರ ಬೆಂಬಲಿಗರು, ಸ್ನೇಹಿತರು ಹಾಗೂ ಸಾಹಿತ್ಯಾಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಗುಲಾಲು ಎರಚು, ದೊಡ್ಡ ಹೂಮಾಲೆ ಹಾಕಿ ಅಭಿನಂದಿಸಿದರು. ವಿಜಯಕುಮಾರ ಅವರಿಗೆ ಜಯವಾಗಲಿ ಎಂದು ಘೋಷಣೆಯನ್ನೂ ಕೂಗಿದರು.

‘ಹಳ್ಳಿಗಳಿಗೂ ಪರಿಷತ್‌ ಕೊಂಡೊಯ್ಯುವೆ‌’

‘ಸದ್ಯ ಕನ್ನಡ ಸಾಹಿತ್ಯ ಪರಿಷತ್‌ ಕೇವಲ ಸಾಹಿತಿಗಳಿಗೆ ಸಂಬಂಧಿಸಿದ್ದು ಎಂಬ ಭಾವನೆ ಇದೆ. ಆದರೆ, ಇದು ಪ್ರತಿಯೊಬ್ಬ ಕನ್ನಡಿಗನ ಆಸ್ತಿ ಆಗಬೇಕು. ಹಾಗಾಗಿ ಪ್ರತಿಯೊಂದು ಹಳ್ಳಿ ಹಾಗೂ ಹೋಬಳಿ ಮಟ್ಟದಲ್ಲೂ ಸದಸ್ಯತ್ವ ಹಾಗೂ ಕನ್ನಡ ಚಟುವಟಿಕೆ ಆರಂಭಿಸುವುದು ನನ್ನ ಕನಸು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

ಗೆಲುವಿನ ಬಳಿಕ ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘20 ವರ್ಷಗಳಿಂದ ನಾನು ಮಾಡಿದ ಸಾಂಸ್ಕೃತಿಕ ಕೆಲಸಗಳನ್ನು ನೋಡಿ ಮತದಾರರು ಆಶೀರ್ವದಿಸಿದ್ದಾರೆ. ಇಷ್ಟು ವರ್ಷ ನನ್ನೊಂದಿಗೆ ಇದ್ದು ಕೆಲಸ ಮಾಡಿದ ಎಲ್ಲ ಸ್ನೇಹಿತರಿಗೆ ಈ ಜಯವನ್ನು ಸಮರ್ಪಿಸುತ್ತೇನೆ. ನಮ್ಮೆಲ್ಲರ ನಿಸ್ವಾರ್ಥ ದುಡಿಮೆಯೇ ಈ ಫಲಿತಾಂಶ ತಂದಿದೆ’ ಎಂದರು.

‘ಪರಿಷತ್ತಿನ ಘನತೆ ಹೆಚ್ಚುವಂಥ ಕೆಲಸ ಮಾಡುತ್ತೇನೆ. ಎಲ್ಲರನ್ನೂ ಜೊತೆಗೆ ಕೊಂಡೊಯ್ಯುತ್ತೇನೆ. ಎಲ್ಲ ತಾಲ್ಲೂಕು ಘಟಕಗಳನ್ನೂ ಚುರುಕು ಮಾಡುವುದು ನನ್ನ ಮೊದಲ ಆದ್ಯತೆ. ಯುವಕರನ್ನು ಜತೆಗೂಡಿಸಿಕೊಂಡು, ಹಿರಿಯರ ಮಾರ್ಗದರ್ಶನ ಪಡೆದು ವರ್ಷದ 365 ದಿನವೂ ಪರಿಷತ್ತಿನಲ್ಲಿ ಒಂದಲ್ಲ ಒಂದು ಚಟುವಟಿಕೆ ನಡೆಯಬೇಕು ಎಂಬುದು ನನ್ನ ಉದ್ದೇಶ’ ಎಂದರು.

‘ಅಮೋಘ ವರ್ಷ ನೃಪತುಂಗನ ಆಡಳಿತದ ಮಳಖೇಡ (ಮಾನ್ಯಖೇಟ)ದ ಕೋಟೆಯನ್ನು ಕಾಪಾಡುವುದು, ಅಭಿವೃದ್ಧಿ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಆಗಬೇಕು. ಈ ನೆಲಕ್ಕೆ ಇರುವ ದೊಡ್ಡ ಪರಂಪರೆ ಏನೆಂದು ನಾವು ಇಡೀ ರಾಜ್ಯಕ್ಕೆ ತಿಳಿಸಬೇಕಿದೆ. ಅದನ್ನು ಮಳಖೇಡದಿಂದಲೇ ಆರಂಭಿಸುತ್ತೇನೆ. ನಾನು ಇದೇ ಹುಮ್ಮಸ್ಸಿನಿಂದಾಗಿ ಮಳಖೇಡದಿಂದ ಪ್ರಚಾರ ಆರಂಭಿಸಿದ್ದೇನೆ. ಗ್ರಾಮದ ಅಭಿವೃದ್ಧಿಗೆ ನಿರಂತರ ಹೋರಾಡುವೆ’ ಎಂದೂ ಅವರು ಪ್ರತಿಕ್ರಿಯಿಸಿದರು.

‘ವೈಚಾರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುವೆ. ಮಹಾತ್ಮರನ್ನು ಹೊಗಳುವ ಕೆಲಸ ಬಿಟ್ಟು, ಅನುಕರಣೆ ಹಾಗೂ ಆಚರಣೆಯನ್ನು ನನ್ನ ಬದುಕಲ್ಲಿ ಹೆಚ್ಚು ಅಳವಡಿಸಿಕೊಳ್ಳುತ್ತೇನೆ. ನನ್ನ ಬೆನ್ನಿಗೆ ಇದ್ದ ದಿವಂಗತರಾದ ಎಂ.ಬಿ. ಅಂಬಲಗಿ ಹಾಗೂ ಈಶ್ವರಯ್ಯ ಮಠ ಅವರನ್ನು ನಾನು ಈ ದಿನ ಸ್ಮರಿಸುತ್ತೇನೆ. ನನಗೆ ಹೊರಿಸಿದ ಜವಾಬ್ದಾರಿ ನಿಭಾಯಿಸುತ್ತೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT