ಗುರುವಾರ , ಅಕ್ಟೋಬರ್ 17, 2019
28 °C
ಮಹಾರಾಷ್ಟ್ರ, ಆಂಧ್ರದಿಂದ ಆಮದು ಕುಸಿತ, ಜಿಲ್ಲೆಯಲ್ಲೂ ಕಡಿಮೆಯಾದ ಈರುಳ್ಳಿ ಬೆಳೆಯುವ ಪ್ರದೇಶ

ಕಲಬುರ್ಗಿ: ತಗ್ಗದ ಈರುಳ್ಳಿ ದರ, ಗ್ರಾಹಕರಿಗೆ ತಪ್ಪದ ಬರೆ

Published:
Updated:
Prajavani

ಕಲಬುರ್ಗಿ: ಕೇಂದ್ರ ಸರ್ಕಾರ ಈರುಳ್ಳಿ ರಪ್ತು ಮಾಡುವುದನ್ನು ನಿಲ್ಲಿಸಿ ವಾರ ಕಳೆದರೂ ದರದಲ್ಲಿ ಮಾತ್ರ ಇನ್ನೂ ನಿರೀಕ್ಷಿತ ಇಳಿಕೆಯಾಗಿಲ್ಲ. ಅದರಲ್ಲೂ ಈರುಳ್ಳಿ ಕಡಿಮೆ ಬೆಳೆಯುವ ಜಿಲ್ಲೆಯ ಜನರಲ್ಲೂ ಇದು ‘ಕಣ್ಣೀರು’ ಬರಿಸುತ್ತಿದೆ.

ಆಗಸ್ಟ್‌ ಆರಂಭದಲ್ಲಿ ಕೆಜಿಗೆ ₹ 30ರಷ್ಟಿದ್ದ ಈರುಳ್ಳಿ ದರ ಕೊನೆಯ ವಾರದಲ್ಲಿ ಏಕಾಏಕಿ ₹ 60ಕ್ಕೆ ಏರಿತು. ಕೊಳ್ಳುವವರ ಸಂಖ್ಯೆ ಏಕಾಏಕಿ ಕಡಿಮೆಯಾಯಿತು. ಆಗ ರೈತರು ಸಂಗ್ರಹಿಸಿದ್ದ ಕಳೆದ ವರ್ಷದ ಈರುಳ್ಳಿಯನ್ನು ಮಾರುಕಟ್ಟೆಗೆ ತಂದರು. ಇದರಿಂದ ಬೆಲೆ ₹ 50ಕ್ಕೆ ಇಳಿಯಿತು. ಕಳೆದೊಂದು ತಿಂಗಳಿನಿಂದ ಈವರೆಗೂ ಚಿಲ್ಲರೆ ಮಾರುಕಟ್ಟೆಯಲ್ಲಿ ಇದೇ ದರ ಮುಂದುವರಿದಿದೆ. ತಳ್ಳುವ ಗಾಡಿಗಳಲ್ಲಿ ಮಾರುವವರಂತೂ ₹ 60ಕ್ಕೆ ಕೆಜಿ ಮಾರುತ್ತಿದ್ದಾರೆ.

‘ದೇಶದೆಲ್ಲೆಡೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದನ್ನು ಗಮನಿಸಿದ ಕೇಂದ್ರ ಸರ್ಕಾರ ವಾರದ ಹಿಂದೆ ಈರುಳ್ಳಿ ರಪ್ತು ಮಾಡುವುದನ್ನು ನಿಷೇಧಿಸಿದೆ. ಇದರ ಪರಿಣಾಮ ಈ ಹೊತ್ತಿಗೆ ಅದರ ದರ ಸಹಜ ಸ್ಥಿತಿಗೆ ಬರಬೇಕಿತ್ತು. ಆದರೂ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ತಪ್ಪಿಲ್ಲ’ ಎನ್ನುತ್ತಾರೆ ಗೃಹಿಣಿ ಉಜ್ವಲಾ ಕರಾಡೆ.

ದರ ಏರಿಕೆಗೆ ಕಾರಣಗಳೇನು?: ವರ್ಷಕ್ಕೆ ಈರುಳ್ಳಿ ಮೂರು ಬಾರಿ ಬೆಳೆಯುವ ಪದ್ಧತಿ ಇದೆ. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಯಾಗಿಯೂ ಇದನ್ನು ಬಿತ್ತುತ್ತಾರೆ. ಆದರೆ, ಈ ಬಾರಿಯ  ಆರಂಭದಿಂದಲೇ ಸುರಿದ ಭಾರಿ ಕುಂಭದ್ರೋಣ ಮಳೆಯಿಂದ ಮುಂಗಾರು ಈರುಳ್ಳಿ ಸಂಪೂರ್ಣ ನಾಶವಾಗಿದೆ.

ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ಕಡಿಮೆ. ಅಷ್ಟೇ ಅಲ್ಲ, ಅದಕ್ಕೆ ಪೂರಕ ವಾತಾವರಣವೂ ಇಲ್ಲ. ಹೀಗಾಗಿ, ಬಹುಪಾಲು ಮಹಾರಾಷ್ಟ್ರದಿಂದ ಆಮದು ಆಗುವ ಈರುಳ್ಳಿಯನ್ನೇ ಇಲ್ಲಿನ ಮಾರುಕಟ್ಟೆಗಳು ಅವಲಂಬಿಸಿವೆ. ನಗರಕ್ಕೆ ಶೇ 80ರಷ್ಟು ಈರುಳ್ಳಿ ಹೊರರಾಜ್ಯಗಳಿಂದಲೇ ಬರುತ್ತದೆ. ಅದರಲ್ಲಿ ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣದಿಂದ ತರಿಸಿಕೊಳ್ಳುವುದು ಹೆಚ್ಚು.

ಪ್ರವಾಹದಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಹೀಗಾಗಿ, ಆಮದು ಈರುಳ್ಳಿ ಏಕಾಏಕಿ ನಿಂತಿದ್ದರಿಂದ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲೂ ಇದರ ಬಿಸಿ ಹೆಚ್ಚಾಗಿ ತಟ್ಟಿದೆ.

ಮಹಾರಾಷ್ಟ್ರದ ನಾಸಿಕ್‌ ಹಾಗೂ ಪುಣೆಯಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿಯ ದರ ಸದ್ಯ ₹ 4,800 ಇದೆ. ಎರಡು ತಿಂಗಳ ಹಿಂದೆ ಇದು ₹ 2,500 ರಿಂದ ₹ 3,000 ಆಸುಪಾಸು ಇತ್ತು. ಸ್ಥಳೀಯ ಸೂಪರ್‌ ಮಾರ್ಕೆಟ್‌ ಹಾಗೂ ಖನ್ನಿ ಮಾರುಕಟ್ಟೆಗೆ ಬರುವ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹ 5000 ದರದಲ್ಲಿ ಸಿಗುತ್ತಿದೆ. ಅಂದರೆ ಪ್ರತಿ ಕೆಜಿಗೆ ₹ 50. ಆದರೆ, ಚಿಲ್ಲರೆ ವ್ಯಾಪಾರಿಗಳು ಇದಕ್ಕೆ ಮತ್ತೆ ₹ 10 ಸೇರಿಸಿ ಮಾರುತ್ತಿದ್ದಾರೆ. 

ಜಿಲ್ಲೆಯಲ್ಲಿವೆ 108 ಶೇಖರಣಾ ಘಟಕ
ಕಳೆದ ಬಾರಿ ಈರುಳ್ಳಿ ಇಳುವರಿ ಕಡಿಮೆಯಾಗಿದ್ದು, ಶೇ 20ರಷ್ಟು ಶೇಖರಣೆ ಮಾತ್ರ ಜಿಲ್ಲೆಯಲ್ಲಿ ಇತ್ತು. ದರ ಹೆಚ್ಚಾಗುತ್ತಿದ್ದಂತೆ ಎಲ್ಲವೂ ಖಾಲಿ ಆಗಿದೆ. ಹಾಗಾಗಿ, ಎರಡು ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ ಎಲ್ಲೂ ಈರುಳ್ಳಿ ಸಂಗ್ರಹ ಇಲ್ಲ. ಚಿಲ್ಲರೆ ಮಾರುಕಟ್ಟೆಗೆ ರೈತರು ಈರುಳ್ಳಿ ತರುವುದು ನಿಂತಿದ್ದರಿಂದ ಸಗಟು ದರಕ್ಕಿಂತ ₹ 10ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯುವ ರೈತರು, ಉತ್ತಮ ದರ ಬಂದಾಗ ಮಾರಲು ಈರುಳ್ಳಿ ಶೇಖರಣಾ ಘಟಕ ಮಾಡಿಕೊಂಡಿದ್ದಾರೆ. ಇಂಥ 108 ಘಟಕಗಳು ಜಿಲ್ಲೆಯಲ್ಲಿವೆ. ದರ ಹೆಚ್ಚಾಗುತ್ತಿದ್ದಂತೆ ಎಲ್ಲ ರೈತರು ಅದನ್ನೂ ಮಾರಿದ್ದಾರೆ. ಹಾಗಾಗಿ, ಸದ್ಯ ಎಲ್ಲ ಘಟಕಗಳೂ ಖಾಲಿ ಆಗಿವೆ.

ಆಳಂದ ಮತ್ತು ಅಫಜಲಪುರ ತಾಲ್ಲೂಕುಗಳಲ್ಲಿ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

*
ಎರಡು ತಿಂಗಳಿಂದ ಈರುಳ್ಳಿ ದರ ಹೆಚ್ಚಾಗಿತ್ತು. ಬೆಳಿಗ್ಗೆ ₹ 50ಕ್ಕೆ ಮತ್ತು ಸಂಜೆ ₹ 40ಕ್ಕೆ ಮಾರಲಾಗುತ್ತಿದೆ. ದರ ಸ್ಥಿರವಾಗಿ ಇರುವುದಿಲ್ಲ.
-ದಾಕ್ಷಾಯಿಣಿ, ಗ್ರಾಹಕರು

*
ಮಹಾರಾಷ್ಟ್ರದ ಈರುಳ್ಳಿಯನ್ನೇ ಇಲ್ಲಿನ ಮಾರುಕಟ್ಟೆಗಳು ಅವಲಂಬಿಸಿವೆ. ನಗರದ ಮಾರುಕಟ್ಟೆಗೆ ವಾರಕ್ಕೆ ಎರಡು ಬಾರಿ 12 ಲಾರಿಯಷ್ಟು ಈರುಳ್ಳಿ ಹೊರರಾಜ್ಯಗಳಿಂದಲೇ ಬರುತ್ತದೆ.
-ತಬ್ರೇಝ, ಈರುಳ್ಳಿ ವ್ಯಾಪಾರಿ

Post Comments (+)