ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕೋವಿಡ್–19 ಭೀತಿ, ಕಿರು ಮೃಗಾಲಯ ಬಂದ್‌

ನಿಯಮಿತವಾಗಿ ಪ್ರಾಣಿ, ಪಕ್ಷಿಗಳ ಆರೋಗ್ಯ ತಪಾಸಣೆ, ಗುಣಮಟ್ಟದ ಆಹಾರ ಪೂರೈಕೆ
Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ನ್ಯೂಯಾರ್ಕ್‌ನಲ್ಲಿ ಹುಲಿಗೆ ಕೋವಿಡ್–19 ದೃಢಪಟ್ಟಿರುವುದರಿಂದ ನಗರದಲ್ಲಿರುವ ಕಿರುಮೃಗಾಲಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಾರ್ಚ್ 14ರಿಂದ ಕಿರು ಮೃಗಾಲಯ ಬಂದ್ ಮಾಡಲಾಗಿದೆ. ಅಲ್ಲದೆ, ಎಲ್ಲ ಪ್ರಾಣಿ ಹಾಗೂ ಪಕ್ಷಿಗಳ ಮೇಲೆ ನಿಗಾ ಇಡಲಾಗಿದೆ. ಸ್ವಚ್ಛತಾ ಸಿಬ್ಬಂದಿ, ಪ್ರಾಣಿ ಪಾಲಕರು ಸೇರಿ ಸದ್ಯ ಒಂಬತ್ತು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸೇರಿ ಅಗತ್ಯ ಸುರಕ್ಷತಾ ಸಾಧನ ನೀಡಲಾಗಿದೆ.

‘ಪಶು ವೈದ್ಯರು ಎರಡು ದಿನಗಳಿಗೊಮ್ಮೆ ಮೃಗಾಲಯಕ್ಕೆ ಭೇಟಿ ನೀಡಿ, ಪ್ರಾಣಿ ಹಾಗೂ ಪಕ್ಷಿಗಳ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಲಸಿಕೆ, ಚುಚ್ಚುಮದ್ದು ನೀಡುತ್ತಿದ್ದಾರೆ. ಇಲ್ಲಿ 79 ಪ್ರಾಣಿ ಹಾಗೂ ಪಕ್ಷಿಗಳಿವೆ. ಇವುಗಳಿಗೆ ಯಾವುದೇ ತೊಂದರೆ ಆಗಂದತೆ ನೋಡಿಕೊಳ್ಳಲಾಗುತ್ತಿದೆ. ಸದ್ಯ ಎಲ್ಲ ಪ್ರಾಣಿಗಳು ಆರೋಗ್ಯವಾಗಿದ್ದು, ಲವಲವಿಕೆಯಿಂದ ಓಡಾಡಿಕೊಂಡಿವೆ’ ಎಂದು ಆರ್‌ಎಫ್‌ಒ ಭೀಮರಾಯ ಅವರು ಹೇಳಿದರು.

‘ಇಬ್ಬರು ಪ್ರಾಣಿ ಪಾಲಕರು ಎರಡು ಪಾಳಿಯಲ್ಲಿ ಬಂದು ಆಹಾರ, ನೀರು ನೀಡುತ್ತಿದ್ದಾರೆ. ಅಲ್ಲದೇ, ಐದು ಜನ ಸ್ವಚ್ಛತಾ ಸಿಬ್ಬಂದಿ ಸಹ ಇದ್ದಾರೆ. ಹದ್ದು, ನರಿ, ಮೊಸಳೆ, ಪುನುಗುಬೆಕ್ಕು, ಕೊಕ್ಕರೆ ಹೆಬ್ಬಾವಿಗೆ ಮಾಂಸಾಹಾರ, ಉಳಿದ ಪ್ರಾಣಿಗಳಿಗೆ ಹಸಿ ಮೇವು, ಧಾನ್ಯ, ಸೊಪ್ಪು ನೀಡಲಾಗುತ್ತಿದೆ. ಆಹಾರದಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸಸ್ಯಾಹಾರಿ ಪ್ರಾಣಿಗಳಿಗೆ ಪ್ರತಿದಿನ 20 ಕೆ.ಜಿ ಹಸಿಮೇವು, 3 ಕೆ.ಜಿ ಒಣಮೇವು, 4 ಕೆ.ಜಿ ಧಾನ್ಯ, 10 ಕೆ.ಜಿ ನಂದಿನಿ ಆಹಾರ ಹಾಗೂ ಮಾಂಸಾಹಾರಿ ಪ್ರಾಣಿ, ಪಕ್ಷಿಗಳಿಗೆ 12 ಕೆ.ಜಿ ಮಾಂಸ ನೀಡಲಾಗುತ್ತದೆ. ಉಳಿದಂತೆ ಹೆಬ್ಬಾವಿಗೆ 15 ದಿನದಲ್ಲಿ ಮೂರು ನಾಟಿ ಕೋಳಿಗಳನ್ನು ಆಹಾರವಾಗಿ ಕೊಡಲಾಗುತ್ತದೆ. ಪ್ರಾಣಿ, ಪಕ್ಷಿಗಳಿಗೆ ಆಹಾರದ ಕೊರತೆ ಇಲ್ಲ. ಆಹಾರ ಪೂರೈಸಲು ಟೆಂಡರ್ ನೀಡಲಾಗಿದ್ದು, ಹಸಿ ಮೇವು, ಒಣ ಮೇವು, ಧಾನ್ಯ ಹಾಗೂ ಮಾಂಸ ಪೂರೈಸುತ್ತಿದ್ದಾರೆ’ ಎಂದು ತಿಳಿಸಿದರು.

ನೀರಿನ ಕೊರತೆ: ಮೃಗಾಲಯದಲ್ಲಿ ಎರಡು ಕೊಳವೆಬಾವಿಗಳಿವೆ. ಅದರಲ್ಲಿ ಒಂದು ಹಾಳಾಗಿದ್ದು, ಒಂದರಲ್ಲಿ ಮಾತ್ರ ನೀರು ಬರುತ್ತಿದ್ದು, ಅದು ಸಾಕಾಗುತ್ತಿಲ್ಲ. ಅರ್ಧಗಂಟೆಗೊಮ್ಮೆ ನೀರು ಬಿಟ್ಟು ಬಿಟ್ಟು ನೀರು ಬರುತ್ತಿದ್ದು, ಅದನ್ನೇ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಪ್ರಾಣಿಗಳಿಗೆ ನೀಡಲಾಗುತ್ತಿದೆ ಎಂದು ಸಿಬ್ಬಂದಿ ಹೇಳಿದರು.

ಬೇಸಿಗೆ ಆಗಿರುವುದರಿಂದ ಹೆಚ್ಚು ನೀರು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕಿದ್ದು, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರು.

ಮಾಡಬೂಳಕ್ಕೆ ಮೃಗಾಲಯ ಸ್ಥಳಾಂತರ
ನಗರದ ಸಾರ್ವಜನಿಕ ಉದ್ಯಾನದ ಹಿಂಭಾಗದಲ್ಲಿರುವ ಕಿರು ಮೃಗಾಲಯವನ್ನು ಚಿತ್ತಾಪುರ ತಾಲ್ಲೂಕಿನ ಮಾಡಬೂಳ ಗ್ರಾಮದ ಬಳಿ ನಿರ್ಮಿಸಲಾಗುತ್ತಿರುವ ಮೃಗಾಲಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಡಿಎಫ್‌ಒ ಎಂ.ಎಂ.ವಾನತಿ ಅವರು ತಿಳಿಸಿದರು.

ಮಾಡಬೂಳ ಬಳಿ ಮೃಗಾಲಯಕ್ಕಾಗಿ 42 ಎಕರೆ ಜಾಗ ಮಂಜೂರಾಗಿದೆ. ಸದ್ಯ ಕಾಂಪೌಂಡ್ ನಿರ್ಮಿಸಲಾಗುತ್ತಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೋಷಣೆ ಆಗಿರುವುದರಿಂದ ಕಾಮಗಾರಿ ಸ್ಥಗಿತವಾಗಿದೆ ಎಂದರು.

ಕಿರು ಮೃಗಾಲಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಾಣಿ ಹಾಗೂ ಪಕ್ಷಿಗಳಿವೆ. ಹೀಗಾಗಿ ಹುಲಿ, ಚಿರತೆ, ಆನೆ ಸೇರಿ ಇತರ ಪ್ರಾಣಿಗಳನ್ನು ನೂತನ ಮೃಗಾಲಯಕ್ಕೆ ನೀಡುವಂತೆ ಭಾರತೀಯ ಮೃಗಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಯಾವ ಯಾವ ಪ್ರಾಣಿ, ಪಕ್ಷಿಗಳಿವೆ
ನವಿಲು 8, ಕೊಕ್ಕರೆ 2, ಹದ್ದು 10, ಮೊಸಳೆ 11, ನರಿ 3, ಏಮು 4, ಹೆಬ್ಬಾವು 3, ಕಾಡುಕೋಳಿ 6, ಸಿಲ್ವರ್ ಫೆಸೆಂಟ್ 2, ಗೋಲ್ಡನ್ ಫೆಸೆಂಟ್ ಮತ್ತು ಚೈನೀಸ್ ರಿಂಗ್ ನೆಕ್ಡ್‌ ಫೆಸೆಂಟ್ 7, ಗಿಳಿ 4, ಪುನುಗುಬೆಕ್ಕು 3, ಚುಕ್ಕೆಜಿಂಕೆ 3, ಕೃಷ್ಣಮೃಗ 6, ಕಡವೆ 1, ಆಮೆ 6, ಕರಿ ಮಂಗ 3.

*
ಇಲ್ಲಿನ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಆದರೂ ಮೃಗಾಲಯ ಪ್ರಾಧಿಕಾರದ ಸೂಚನೆಯಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ
-ಎಂ.ಎಂ.ವಾನತಿ, ಡಿಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT