ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಮಿಷನರೇಟ್‌: ಕನಸು ಶೀಘ್ರ ನನಸು

ಹಳೆ ಐಜಿ ಕಚೇರಿ ಇಲ್ಲವೆ ಪೊಲೀಸ್‌ ಭವನದಲ್ಲಿ ಕಾರ್ಯಾರಂಭ ಸಾಧ್ಯತೆ
Last Updated 11 ಜನವರಿ 2019, 15:02 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ನಗರದಲ್ಲಿ ಪೊಲೀಸ್ ಕಮಿಷನರೇಟ್‌ ಶೀಘ್ರ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದ್ದು, ಅಧಿಕಾರಿಗಳು ಸರ್ಕಾರದ ಸೂಚನೆಯನ್ನು ಎದುರು ನೋಡುತ್ತಿದ್ದಾರೆ.

ಕಮಿಷನರೇಟ್‌ ಕಚೇರಿಯನ್ನು ನಗರದಲ್ಲಿರುವ ಐಜಿಪಿಯ ಹಳೆ ಕಚೇರಿ (ಸದ್ಯ ಜಾರಿ ನಿರ್ದೇಶನಾಲಯ ಮತ್ತು ಗುಪ್ತಚರ ಎಸ್‌ಪಿ ಕಚೇರಿ)ಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲು ನಿರ್ಧರಿಸಲಾಗಿದೆ. ಈ ಕಟ್ಟಡ ನವೀಕರಣಕ್ಕೆ ₹14 ಲಕ್ಷವನ್ನು ಕರ್ನಾಟಕ ಪೊಲೀಸ್‌ ಗೃಹ ನಿರ್ಮಾಣ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆ ಮಾಡಿದ್ದು, ನವೀಕರಣ ಆರಂಭಗೊಂಡಿದೆ.

ಸೂಪರ್‌ ಮಾರ್ಕೆಟ್‌ನಲ್ಲಿರುವ 9,288 ಚದುರ ಮೀಟರ್‌ ಪ್ರದೇಶದಲ್ಲಿ ಪೊಲೀಸ್‌ ಕಮಿಷನರೇಟ್‌ ಕಚೇರಿ ನಿರ್ಮಿಸಲು ಉದ್ದೇಶಿಸಲಾಗಿದ್ದು,ಕಚೇರಿ ಹಾಗೂ ಅಧಿಕಾರಿ–ಸಿಬ್ಬಂದಿ ವಸತಿಗೃಹಗಳ ನಿರ್ಮಾಣಕ್ಕೆ ₹170 ಕೋಟಿ ವೆಚ್ಚ ತಗಲುವ ಅಂದಾಜಿದೆ.

ಕಲಬುರ್ಗಿ ಜಿಲ್ಲೆಯು 10,954 ಚದುರ ಕಿಲೊಮೀಟರ್‌ ಭೌಗೋಳಿಕ ಪ್ರದೇಶ ಹೊಂದಿದೆ. 2011ರ ಜನಗಣತಿಯ ಅನ್ವಯ ಜಿಲ್ಲೆಯ ಜನಸಂಖ್ಯೆ 25.65 ಲಕ್ಷ. ಕಲಬುರ್ಗಿ ನಗರದ ಜನಸಂಖ್ಯೆ 7.32 ಲಕ್ಷ. 5ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಪೊಲೀಸ್‌ ಕಮಿಷನರೇಟ್‌ ಸ್ಥಾಪಿಸಬೇಕು ಎಂಬುದು 3ನೇ ರಾಷ್ಟ್ರೀಯ ಪೊಲೀಸ್‌ ಆಯೋಗದ ಶಿಫಾರಸು. ಈ ಎಲ್ಲ ಮಾನದಂಡ ಹಾಗೂ ಬೇಡಿಕೆ ಅನ್ವಯ ನಗರದಲ್ಲಿ ಪೊಲೀಸ್‌ ಕಮಿಷನರೇಟ್‌ ಸ್ಥಾಪಿಸಲು ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿದೆ.

39 ಪೊಲೀಸ್‌ ಠಾಣೆ: ಸದ್ಯ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಜಿಲ್ಲೆಯ ಆರು ಉಪ ವಿಭಾಗ (ಡಿವೈಎಸ್‌ಪಿ ಕಚೇರಿ), 10 ವೃತ್ತ ಕಚೇರಿ, 39 ಪೊಲೀಸ್‌ ಠಾಣೆ, 9 ಹೊರಠಾಣೆ ಮತ್ತು ವಿಶೇಷ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ಡಿಐಜಿ 1, ಎಸ್‌ಪಿ ದರ್ಜೆಯ 3 ಹುದ್ದೆ

ಹೊಸ ಪೊಲೀಸ್‌ ಕಮಿಷನರೇಟ್‌ಗೆ ಡಿಐಜಿ ದರ್ಜೆಯ ಅಧಿಕಾರಿ ಕಮಿಷನರ್‌ ಆಗಲಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ಮತ್ತು ಸಂಚಾರ ನಿಯಂತ್ರಣ, ನಗರ ಸಶಸ್ತ್ರ ಮೀಸಲು ಪಡೆ ಹೀಗೆ ಮೂರು ವಿಭಾಗಗಳಿಗೆ ಎಸ್‌ಪಿ ದರ್ಜೆಯ ಮೂವರು ಅಧಿಕಾರಿಗಳು (ಡಿಸಿಪಿ) ಇರಲಿದ್ದಾರೆ.

ಕಲಬುರ್ಗಿ ನಗರದಲ್ಲಿ ಸದ್ಯ ಎರಡು ಉಪ ವಿಭಾಗ (ಡಿಎಸ್‌ಪಿ ಕಚೇರಿ–ಇನ್ನು ಎಸಿಪಿ )ಗಳಿವೆ. ಇನ್ನೂ ಮೂರು ಉಪ ವಿಭಾಗ ಸೃಜಿಸಲಾಗುವುದು. ‘ಎ’ ಉಪ ವಿಭಾಗದಲ್ಲಿ ಸ್ಟೇಷನ್‌ ಬಜಾರ್‌, ಬ್ರಹ್ಮಪುರ, ರಾಘವೇಂದ್ರ ನಗರ, ಅಶೋಕ ನಗರ ಠಾಣೆಗಳು. ‘ಬಿ’ ಉಪ ವಿಭಾಗದಲ್ಲಿ ಚೌಕ್‌, ರೋಜಾ, ಮಹಿಳಾ, ಎಂ.ಬಿ. ನಗರ, ಸೈಬರ್‌, ಆರ್ಥಿಕ ಅಪರಾಧ ತನಿಖಾ ಠಾಣೆ (ಪ್ರಸ್ತಾವಿತ) ಇರಲಿವೆ.

‘ಸಿ’ ಉಪ ವಿಭಾಗದಲ್ಲಿ ಗ್ರಾಮೀಣ, ವಿಶ್ವವಿದ್ಯಾಲಯ ಹಾಗೂ ಫರಹತಾಬಾದ್‌ ಠಾಣೆಗಳು ಇರಲಿವೆ. ಸಂಚಾರ 1 ಮತ್ತು 2 ಠಾಣೆಗಳು ಸಂಚಾರ ಉಪ ವಿಭಾಗದವ್ಯಾಪ್ತಿಗೊಳಪಡಲಿವೆ.

ಬಹುತೇಕ ಠಾಣೆಗಳು ಮೇಲ್ದರ್ಜೆಗೇರಲಿದ್ದು, ಇವುಗಳಿಗೆ ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿ ಮುಖ್ಯಸ್ಥರಾಗಲಿದ್ದಾರೆ.

ಕಲಬುರ್ಗಿ ಪೊಲೀಸ್‌ ಕಮಿಷನರೇಟ್‌ ಸಿಬ್ಬಂದಿ ಲೆಕ್ಕ

1,613 ಅವಶ್ಯವಿರುವ ಸಿಬ್ಬಂದಿ
887 ಸದ್ಯ ಲಭ್ಯವಿರುವ ಸಿಬ್ಬಂದಿ
726 ಹೊಸದಾಗಿ ಸೃಜಿಸಿರುವ ಹುದ್ದೆ

ಅಧಿಕಾರಿಗಳ ಮಾಹಿತಿ

1 ಪೊಲೀಸ್‌ ಕಮಿಷನರ್‌ (ಡಿಐಜಿ ಶ್ರೇಣಿ)
3 ಉಪ ಪೊಲೀಸ್‌ ಕಮಿಷನರ್‌ (ಎಸ್‌ಪಿ ಶ್ರೇಣಿ)
5 ಸಹಾಯಕ ಪೊಲೀಸ್‌ ಕಮಿಷನರ್‌ (ಡಿವೈಎಸ್‌ಪಿ ಶ್ರೇಣಿ)

ಸಿಬ್ಬಂದಿ ವಿಭಜನೆ ಸದ್ಯಕ್ಕಿಲ್ಲ

‘ಜೇಷ್ಠತೆ ಮತ್ತು ಬಡ್ತಿ ವಿವಾದ ಕುರಿತು ಬಿ.ಕೆ. ಪವಿತ್ರಾ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಈಗ ಬಡ್ತಿ ನೀಡಿದರೆ ಅದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಸಿಬ್ಬಂದಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಸಿಬ್ಬಂದಿ ವಿಭಜನೆ ಪ್ರಕ್ರಿಯೆಯನ್ನು ಸದ್ಯ ನಡೆಸದಿರಲು ನಿರ್ಧರಿಸಲಾಗಿದೆ’ ಎನ್ನುತ್ತಾರೆ ಕಲಬುರ್ಗಿ ವಲಯದ ಐಜಿಪಿ ಮನೀಷ್‌ ಕರ್ಬೀಕರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT