ಸೋಮವಾರ, ಏಪ್ರಿಲ್ 6, 2020
19 °C
ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ವಾಹನ ಸಂಚಾರಕ್ಕೂ ನಿರ್ಬಂಧ

ಕಲಬುರ್ಗಿ ಜಿಲ್ಲೆಯಾದ್ಯಂತ 3 ದಿನ ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಮುಂದಾಗಿರುವ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಮೂರು ದಿನಗಳವರೆಗೆ 144ನೇ ಸೆಕ್ಷನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದೆ. ಗುರುವಾರ ರಾತ್ರಿ 8ರಿಂದಲೇ ನಿಷೇಧಾಜ್ಞೆ ಜಾರಿಗೆ ಬಂದಿದೆ.

ಹೆಚ್ಚು ಜನರು ಅನವಶ್ಯಕವಾಗಿ ಹೊರಗೆ ಬರಬೇಡಿ ಎಂದು ಮನವಿ ಮಾಡಿರುವ ಜಿಲ್ಲಾಧಿಕಾರಿ ಶರತ್ ಬಿ., ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗೂ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

‘ಔಷಧಿ ಅಂಗಡಿ, ಆಸ್ಪತ್ರೆಗಳು, ಹಾಲು, ದಿನಸಿ ವಸ್ತುಗಳನ್ನು ಖರೀದಿಸಲು ಯಾವುದೇ ನಿರ್ಬಂಧವಿಲ್ಲ. ಇದನ್ನು ಹೊರತುಪಡಿಸಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮಹಾರಾಷ್ಟ್ರಕ್ಕೆ ತೆರಳುವ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ಬಸ್‌ಗಳ ಸಂಚಾರಕ್ಕೂ ತಡೆ ನೀಡಲಾಗಿದೆ. ಕೆಲ ದಿನಗಳ ಮಟ್ಟಿಗೆ ಸಾರಿಗೆ ಸಂಸ್ಥೆಯ ಇತರ ರೂಟ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುವುದು’ ಎಂದರು.

ಶನಿವಾರದಿಂದ ಪ್ರಯೋಗಾಲಯ ಆರಂಭ: ಕೊರೊನಾ ವೈರಸ್‌ ಪತ್ತೆಹಚ್ಚಲು ಅಗತ್ಯವಾದ ಪ್ರಯೋಗಾಲಯವನ್ನು ಮಾ 21ರಂದು ಆರಂಭಿಸಲಾಗುವುದು. ಪ್ರಯೋಗಾಲಯಕ್ಕೆ ಅಗತ್ಯವಾದ ಪರಿಕರಗಳು ಈಗಾಗಲೇ ಬೆಂಗಳೂರಿನಿಂದ ಕಲಬುರ್ಗಿ ತಲುಪಿವೆ. ಪ್ರಯೋಗಾಲಯದಲ್ಲಿ ನಿರಂತರ ಒಂದೇ ಪ್ರಮಾಣದ ವಿದ್ಯುತ್‌ ಪ್ರವಹಿಸುವುದು ಅಗತ್ಯವಿರುವುದರಿಂದ ಜೆಸ್ಕಾಂಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಿಂದ ತಜ್ಞರೊಬ್ಬರು ಬಂದು ತರಬೇತಿ ನೀಡಲಿದ್ದಾರೆ’ ಎಂದು ತಿಳಿಸಿದರು.

250 ಜನ ವಿದೇಶದಿಂದ ಜಿಲ್ಲೆಗೆ: ಇಲ್ಲಿಯವರೆಗೆ 250 ಜನ ವಿದೇಶಗಳಿಂದ ಬಂದಿದ್ದು, ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಿ ಮನೆಯಲ್ಲೇ ನಿಗಾ ವಹಿಸಲಾಗಿದೆ. ಕೋವಿಡ್–19ನಿಂದ ಮೃತಪಟ್ಟ ಮೊಹ್ಮದ್‌ ಹುಸೇನ್‌ ಸಿದ್ದಿಕಿ ಅವರೊಂದಿಗೆ ನೇರ ಸಂಪರ್ಕ ಹೊಂದಿದ 98 ಜನರು  ಹಾಗೂ ಇವರೊಂದಿಗೆ ಒಡನಾಟ ಹೊಂದಿದ 333 ಜನರನ್ನು ಪತ್ತೆ ಹಚ್ಚಲಾಗಿದೆ. ಒಟ್ಟಾರೆ 641 ಜನರನ್ನು ಮನೆಯಲ್ಲೇ ನಿಗಾ ಇರಿಸಲಾಗಿದೆ. 11 ಜನರನ್ನು ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾದ ಕೊರೊನಾ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 22 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಎಂಟು ಜನರಿಗೆ ನೆಗೆಟಿವ್‌ ಹಾಗೂ ಮೂವರಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರ ಮಾದರಿಗಳ ವರದಿ ತಾಂತ್ರಿಕ ಕಾರಣಗಳಿಂದಾಗಿ ಬಂದಿಲ್ಲ. ಹೀಗಾಗಿ, ಮತ್ತೆ ಕಳಿಸಲಾಗುವುದು. 9 ಜನರ ವರದಿಗಳು ಇನ್ನಷ್ಟೇ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಶರತ್ ಮಾಹಿತಿ ನೀಡಿದರು.

ಹುಸಿ ಕರೆ ಮಾಡಿದ ಇಬ್ಬರ ಬಂಧನ

ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿ ಕೊರೊನಾ ಸೋಂಕಿತರು ಇದ್ದಾರೆ ಎಂದು ತಪ್ಪು ಮಾಹಿತಿ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಸುಳ್ಳು ಸುದ್ದಿಗಳನ್ನು ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅತ್ಯಗತ್ಯ ವಸ್ತುಗಳ ಖರೀದಿಗೆ ಯಾವುದೇ ತೊಂದರೆ ಇಲ್ಲ. ದಿನಸಿ ಅಂಗಡಿ, ಹಾಲು, ವೈದ್ಯಕೀಯ ಸೇವೆಗಳು  ದೊರೆಯುತ್ತವೆ ಎಂದು ಜಿಲ್ಲಾಧಿಕಾರಿ ಶರತ್ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು