ವಾಡಿ: ಸರ್ಕಾರಿ ಶಾಲೆಗಳಿಗೆ ಸರ್ಕಾರದ ಪ್ರೋತ್ಸಾಹದ ಕೊರತೆಯಿದೆ ಎಂಬ ಕೊರಗು ಎಲ್ಲೆಡೆ ಇದೆ. ಹೀಗಿರುವಾಗಲೇ ಅನುದಾನಿತ ಶಾಲೆ ಶಿಕ್ಷಕರೊಬ್ಬರು, ಸರ್ಕಾರಿ ಶಾಲೆಗಳು ಉಳಿಯಬೇಕು ಎಂಬ ದೃಷ್ಟಿಯಿಂದ ಸ್ವಂತ ಹಣದಲ್ಲಿ ಶಾಲೆಗೆ ಸುಣ್ಣಬಣ್ಣ ಮಾಡಿಸಿ, ಮಾದರಿಯಾಗಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಅನುದಾನಿತ ಸಚ್ಚಿದಾನಂದ ಪ್ರೌಢಶಾಲೆ ಶಿಕ್ಷಕ ಸಿದ್ದಲಿಂಗ ಬಾಳಿ ಅವರು ತಮ್ಮ ಮಕ್ಕಳ ಜನ್ಮದಿನದ ನಿಮಿತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಮಾಡಿಸಿದ್ದಾರೆ. ₹ 40 ಸಾವಿರ ವೆಚ್ಚದಲ್ಲಿ ಶಾಲೆ ಅಡುಗೆ ಕೋಣೆ ಸೇರಿದಂತೆ ಒಟ್ಟು 5 ಕೊಠಡಿಗಳು ಹಾಗೂ 1ನೇ ಅಂತಸ್ತಿನ 30X40 ಅಡಿ ಸುತ್ತಳತೆಯ ದೊಡ್ಡ ಕೊಠಡಿಗೆ ಬಣ್ಣ ಬಳಿಸಿದ್ದಾರೆ. ಬಾಗಿಲು ಕಿಟಕಿಗಳು ಹಾಗೂ ಶಾಲೆಯ ನಾಮಫಲಕವನ್ನೂ ಬರೆಸಿದ್ದಾರೆ.
ಕಳೆದ 13 ವರ್ಷಗಳಿಂದ ಬೋಧನೆಯಲ್ಲಿ ತೊಡಗಿರುವ ಅವರು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಕಲಬುರಗಿ ಜಿಲ್ಲೆ ಕಸಾಪ ಸಂಘಟನಾ ಕಾರ್ಯದರ್ಶಿ ಹುದ್ದೆ ನಿಭಾಯಿಸುತ್ತಿರುವ ಅವರು, ಸದಭಿರುಚಿ ಭಿನ್ನವಿಭಿನ್ನ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ ಕಲಿಕೆಯನ್ನು ಆಸಕ್ತಿದಾಯಕ ಆಗಿಸುವಲ್ಲಿ ನಿರತರಾಗಿದ್ದಾರೆ.
ಫೆ. 14ರಂದು ಪುತ್ರ ‘ಅನ್ವಿತ್’, 16ರಂದು ಮಗಳು ‘ಅಕ್ಷರ’ ಜನ್ಮದಿನವನ್ನು ಅರ್ಥಪೂರ್ಣ ಆಗಿಸಬೇಕು ಎಂಬ ದೃಷ್ಟಿಯಿಂದ ಮಾದರಿ ನಡೆ ತೋರಿದ್ದಾರೆ. ರಾವೂರು ಪೇಟ್ ಶಾಲೆಯಲ್ಲಿ ಪ್ರಸ್ತುತ 90 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ನಾಲ್ವರು ಶಿಕ್ಷಕರಿದ್ದಾರೆ.
ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ, ಮಕ್ಕಳ ಜನ್ಮದಿನ ಆಚರಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇನೆಸಿದ್ದಲಿಂಗ ಬಾಳಿ, ಅನುದಾನಿತ ಶಾಲೆ ಶಿಕ್ಷಕ
ಮಕ್ಕಳ ಜನ್ಮದಿನವನ್ನು ಅದ್ದೂರಿಯಾಗಿ ದುಂದು ವೆಚ್ಚ ಮಾಡುವವರ ಮಧ್ಯೆ ನಮ್ಮೂರಿನ ಅನುದಾನಿತ ಶಾಲೆ ಶಿಕ್ಷಕ ಸಿದ್ದಲಿಂಗ ಬಾಳಿ ಅವರು ಶಾಲೆಗೆ ಸುಣ್ಣ ಬಣ್ಣ ಮಾಡಿಸಿದ್ದು, ಸಂತಸದ ಸಂಗತಿಶೋಭಾ ಅಂಬಲಗಿ, ಶಾಲೆ ಮುಖ್ಯಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.