ಕಲಬುರ್ಗಿ: ಪ್ರಚಾರ ‘ಕಾವಿಗೆ’ ಬಿಸಿಲಿನ ಪೈಪೋಟಿ!

ಶನಿವಾರ, ಏಪ್ರಿಲ್ 20, 2019
29 °C
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತುತ್ತಿರುವ ಅಭ್ಯರ್ಥಿಗಳು

ಕಲಬುರ್ಗಿ: ಪ್ರಚಾರ ‘ಕಾವಿಗೆ’ ಬಿಸಿಲಿನ ಪೈಪೋಟಿ!

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯುತ್ತಿರುವುದರಿಂದ ಉಭಯ ಪಕ್ಷಗಳು ಬಿರುಸಿನ ಪ್ರಚಾರದ ಮೂಲಕ ಮತದಾರರ ಓಲೈಕೆಗೆ ಕಸರತ್ತು ನಡೆಸುತ್ತಿವೆ.

ಕಾಂಗ್ರೆಸ್ ಅಭ್ಯರ್ಥಿ, ಸಂಸದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಇಬ್ಬರೂ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತುತ್ತಿದ್ದಾರೆ. ಆದರೆ, ಉರಿ ಬಿಸಿಲು ಪ್ರಮುಖ ಎದುರಾಳಿಯಂತೆ ಇವರಿಬ್ಬರನ್ನೂ ‘ಕಾಡುತ್ತಿದೆ’.

ಈ ತಿಂಗಳ ಆರಂಭದಲ್ಲೇ 43 ಡಿಗ್ರಿ ಸೆಲ್ಸಿಯಸ್‌ ನಷ್ಟು ಗರಿಷ್ಠ ಮಟ್ಟ ದಾಖಲಾಗಿದ್ದ ಉಷ್ಣಾಂಶ, ಈಗಲೂ ಅದೇ ಪ್ರಮಾಣ ಕಾಯ್ದುಕೊಂಡಿದೆ. ಇದು ಇನ್ನೂ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಿಸಿಲಿನ ಕಾರಣದಿಂದ ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹೆಚ್ಚಿನ ಜನರು ಹೊರಗೆ ಬರಲು ಹಿಂಜರಿಯುತ್ತಾರೆ. ಈ ಅವಧಿಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿಯೂ ಜನಸಂದಣಿ ಕಡಿಮೆ ಇರುತ್ತದೆ. ಜನರು ಬಿಸಿಲಲ್ಲಿ ಬರಲು ಹಿಂದೇಟು ಹಾಕುತ್ತಿರುವ ಕಾರಣ ಮಧ್ಯಾಹ್ನದ ವೇಳೆ ಪ್ರಚಾರ ಸಭೆಗಳನ್ನು ನಡೆಸಲು ರಾಜಕೀಯ ಪಕ್ಷದವರು ಹಿಂದೇಟು ಹಾಕುತ್ತಿದ್ದಾರೆ.

‘ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಲಬರ್ಗಾ ಲೋಕಸಭಾ ಕ್ಷೇತ್ರ ವಿಶಾಲವಾಗಿದೆ. ಸೀಮಿತ ಅವಧಿಯಲ್ಲಿ ಇಡೀ ಕ್ಷೇತ್ರ ಸುತ್ತುವುದು ಕಷ್ಟಸಾಧ್ಯ. ಕಷ್ಟಪಟ್ಟು ಪ್ರಚಾರ ಮಾಡೋಣ ಎಂದರೆ ಉರಿಬಿಸಿಲು ನಮ್ಮನ್ನು ಮತ್ತಷ್ಟು ಬಳಲಿಸುತ್ತಿದೆ’ ಎನ್ನುತ್ತಾರೆ ರಾಜಕೀಯ ಮುಖಂಡರು.

ಕಾರು ಬೇಕು, ಏಸಿ ಇರಲೇಬೇಕು!

‘ಪ್ರಚಾರ ಸಭೆಗೆ ಬನ್ನಿ ಎಂದರೆ ‘ಕಾರ್ಯಕರ್ತರು’ ಕಾರು ಕಳಿಸಿ ಎನ್ನುತ್ತಾರೆ. ಅದರಲ್ಲಿ ಏಸಿ ಇರಲೇಬೇಕು ಎಂಬ ಷರತ್ತು ಹಾಕುತ್ತಾರೆ. ಮನವಿ ಮಾಡಿಕೊಂಡ ನಂತರ ಕ್ರೂಸರ್‌ ಜೀಪ್‌ಗೆ ಒಪ್ಪುತ್ತಾರೆ. ಮೊದಲಾಗಿದ್ದರೆ ಹೇಳಿಕಳಿಸಿದರೆ ಸಾಕು ಲಾರಿ, ಟ್ರ್ಯಾಕ್ಟರ್‌ ಮತ್ತು ಬೈಕ್‌ಗಳಲ್ಲಿ ತಾವೇ ಬರುತ್ತಿದ್ದರು. ಅಂತಹ ಉಮೇದು ಈಗ ಉಳಿದಿಲ್ಲ. ಅದಕ್ಕೆ ಉರಿಬಿಸಿಲೂ ಕಾರಣ’ ಎಂದು ಬಿಸಿಲನ್ನೇ ಹಳಿಯುತ್ತಾರೆ ರಾಜಕೀಯ ನಾಯಕರು.

ಪ್ರಚಾರ ತಂತ್ರವೂ ಬದಲು

ಬಿಸಿಲಿನ ಕಾರಣ ರಾಜಕೀಯ ಪಕ್ಷಗಳ ಪ್ರಚಾರ ತಂತ್ರವೂ ಬದಲಾಗಿದೆ. ಪ್ರಮುಖ ನಾಯಕರ ಸಮಾವೇಶ ಹೊರತುಪಡಿಸಿ ಮಧ್ಯಾಹ್ನದ ಅವಧಿಯಲ್ಲಿ ಬಹಿರಂಗ ಸಮಾವೇಶ ನಡೆಸುತ್ತಿಲ್ಲ.

ಬಿಸಿಲು ಇದೆ ಎಂದು ಮಧ್ಯಾಹ್ನದ ವೇಳೆ ಪ್ರಚಾರಕ್ಕೆ ಬಿಡುವು ಇರುವುದಿಲ್ಲ. ಬದಲಾಗಿ ಮನೆ, ಸಭಾಂಗಣಗಳಲ್ಲಿ ಪ್ರಚಾರ ಸಭೆ, ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಮುಂದಿನ ಕಾರ್ಯತಂತ್ರದ ಕುರಿತು ಅಭ್ಯರ್ಥಿಗಳು ಚರ್ಚಿಸುತ್ತಾರೆ. ಬಿಸಿಲಿ ಕಡಿಮೆಯಾದ ತಕ್ಷಣ ಪ್ರಚಾರಕ್ಕೆ ತೆರಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !