ಸೋಮವಾರ, ಮೇ 16, 2022
22 °C
ಕಾಳಗಿ ತಾಲ್ಲೂಕಿನ 4 ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

3 ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಮಹಿಳೆಯರ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಳಗಿ: ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ಆರಂಭಗೊಂಡಿತು. ಮೊದಲ ಹಂತದಲ್ಲಿ ನಾಲ್ಕು ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು.

ಈ ಪೈಕಿ ಕಂದಗೂಳ ಗ್ರಾಮ ಪಂಚಾಯಿತಿ ಹೊರತುಪಡಿಸಿ ಮೂರು ಕಡೆ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿತ್ತು. ಕೋರವಾರ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವ್ಯಕ್ತಿಯೊಬ್ಬ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ ಎಲ್ಲ ಸ್ಥಾನಗಳಿಗೆ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದೆ.

ಕಂದಗೂಳ ಗ್ರಾಮ ಪಂಚಾಯಿತಿ: ಇಲ್ಲಿ ಒಟ್ಟು 12ಜನ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಂದಗೂಳ ಗ್ರಾಮದ ವೀರೇಶ ನಾಗಶೆಟ್ಟಿ ಮಾನಕರ್, ವಟವಟಿ ಗ್ರಾಮದ ಮಲ್ಲಿನಾಥ ರೇವಣಸಿದ್ದಪ್ಪ ನಾಗೂರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹುಳಗೇರಾದ ಲಲಿತಾಬಾಯಿ ಉಮೇಶ ಸುಗಶೆಟ್ಟಿ ಹಾಗೂ ಕಂದಗೂಳದ ಮಂಜುಳಾ ಚಂದ್ರಕಾಂತ ಸಿಂಗೆ ನಾಮಪತ್ರ ಸಲ್ಲಿಸಿದರು.

ತಾರಾಬಾಯಿ ಬಂಡಪ್ಪ ಮಾಂಗ್ ಎಂಬ ಸದಸ್ಯೆ ಕೋರ್ಟ್ ತಡೆ ಆಜ್ಞೆಯಿಂದಾಗಿ ಮತದಾನದ ಹಕ್ಕು ಕಳೆದುಕೊಂಡರು. ವೀರೇಶ ನಾಗಶೆಟ್ಟಿ ಮಾನಕರ್ ಮತ್ತು ಲಲಿತಾಬಾಯಿ ಉಮೇಶ ಸುಗಶೆಟ್ಟಿ ತಲಾ 7 ಮತಗಳು ಪಡೆದು ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಂದು ಮತ ತಿರಸ್ಕೃತಗೊಂಡಿತು.

ರಾಜಾಪುರ: ಇಲ್ಲಿ ಒಟ್ಟು 15ಜನ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ-ಅ ಮಹಿಳೆಗೆ ಮೀಸಲಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸಾಲಹಳ್ಳಿ ಗ್ರಾಮದ ಸವಿತಾ ಶಾಂತಕುಮಾರ ಮದನಕರ್, ಭರತನೂರ ಗ್ರಾಮದ ಶಾಮಲಾಬಾಯಿ ಮಲ್ಕಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜಾಪುರ ಗ್ರಾಮದ ಬದರಬೇಗಂ ಲಾಡ್ಲೆ ಪಟೇಲ್, ಮಳಗಾ ಗ್ರಾಮದ ಬಬಿಫಾತಿಮಾ ಜಾಹೇರ ನಾಮಪತ್ರ ಸಲ್ಲಿಸಿದರು. ಸವಿತಾ ಶಾಂತಕುಮಾರ ಮದನಕರ್ 11ಮತಗಳು ಪಡೆದು ಅಧ್ಯಕ್ಷೆಯಾಗಿ, ಬದರಬೇಗಂ ಲಾಡ್ಲೆ ಪಟೇಲ್ 9ಮತಗಳು ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಕೊಡದೂರ: ಇಲ್ಲಿ ಒಟ್ಟು 18 ಜನ ಸದಸ್ಯರ ಬಲ ಇತ್ತು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೆ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಮಂಗಲಗಿ ಗ್ರಾಮದ ನಿರ್ಮಲಾ ಸಾಬಣ್ಣಾ ಕೋಟನೂರ, ಅಶ್ವಿನಿ ಶಂಕ್ರಪ್ಪ ನಿಡಗುಂದಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂತೋಷಕುಮಾರ ಮಾಣಿಕರಾವ ಚವಾಣ, ಬಸವರಾಜ ಚಂದ್ರಶೆಟ್ಟಿ ಅರಣಕಲ್ ನಾಮಪತ್ರ ಸಲ್ಲಿಸಿದರು.

ಮತದಾನದ ವೇಳೆ ನಿರ್ಮಲಾ ಸಾಬಣ್ಣಾ ಕೋಟನೂರ ಮತ್ತು ಸಂತೋಷಕುಮಾರ ಮಾಣಿಕರಾವ ಚವಾಣ ತಲಾ 10ಮತಗಳು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕೋರವಾರ: ಇಲ್ಲಿ ಒಟ್ಟು 16ಜನ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಲಗುರ್ತಿ ಗ್ರಾಮದ ಯಲ್ಲಮ್ಮಾ ಮಲ್ಲಪ್ಪ ತಳವಾರ, ಕೋರವಾರ ಗ್ರಾಮದ ಮೀರಾಬಾಯಿ ಹಣಮಂತ ಮೇಲಕೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೋರವಾರದ ಬಸವರಾಜ ಮಲ್ಕಜಪ್ಪ ಕಂಠಿ ನಾಮಪತ್ರ ಸಲ್ಲಿಸಿದರು. ಯಲ್ಲಮ್ಮಾ ಮಲ್ಲಪ್ಪ ತಳವಾರ 11ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು. ಪ್ರತಿಸ್ಪರ್ಧಿ ಇಲ್ಲದೆ ಬಸವರಾಜ ಮಲ್ಕಜಪ್ಪ ಕಂಠಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಕಂದಗೂಳದಲ್ಲಿ ಪಂಚಾಯತ್ ರಾಜ್ ಇಲಾಖೆ ಎಇಇ ವೀರೇಂದ್ರ ಕುಮಾರ, ರಾಜಾಪುರ, ಕೊಡದೂರ ದಲ್ಲಿ ತಹಶೀಲ್ದಾರ್ ನೀಲಪ್ರಭಾ, ಕೋರವಾರದಲ್ಲಿ ಲೋಕೋಪಯೋಗಿ ಇಲಾಖೆ ಎಇಇ ಸಿದ್ರಾಮ ದಂಡಗುಲಕರ್ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಕಾಳಗಿ ಸಿಪಿಐ ವಿನಾಯಕ, ಪಿಎಸ್ಐ ದಿವ್ಯಾ ಅಂಬಾಟಿ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ್ ಪೊಲೀಸ್ ಬಂದೋಬಸ್ತ್ ಮಾಡಿದರು.

ಫಲಿತಾಂಶ ಹೊರಬಿದ್ದಂತೆ ವಿಜೇತರ ಬೆಂಬಲಿಗರು ಕುಣಿದು ಕುಪ್ಪಳಿಸಿ ಪರಸ್ಪರ ಗುಲಾಲ್ ಎರಚಿಕೊಂಡು, ಸಿಹಿ ತಿಂದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು