ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಊರಿಗೆ ಆರು ಶೌಚಾಲಯ: ಇನ್ನರ್ಧ ಅಯೋಮಯ

ಕಾಳಗಿ: ಒಂದೂ ಶೌಚಾಲಯಕ್ಕಿಲ್ಲ ನೀರು, ಮರ್ಯಾದೆ ಕಾಪಾಡೋರು ಯಾರು?
Last Updated 9 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಾಳಗಿ: ಈ ಪಟ್ಟಣ ತಾಲ್ಲೂಕು ಕೇಂದ್ರವೆಂದು ಕರೆಸಿಕೊಳ್ಳುತ್ತಿದೆ. ಆರು ತಾಂಡಾಗಳನ್ನು ಸೇರಿಸಿ ರಚನೆಯಾಗಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಅದರಲ್ಲೂ ಮೂಲಸ್ಥಾನ ‘ಕಾಳಗಿ’ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಇದರಲ್ಲೇ ಅರ್ಧ ಹಳೆ ಊರು, ಇನ್ನರ್ಧ ಹೊಸ ಊರು ಒಳಗೊಂಡು ಬಸ್ ನಿಲ್ದಾಣ ಕೇಂದ್ರ ಬಿಂದುವಾಗಿದೆ.

ಈ ರೀತಿಯ ಊರಲ್ಲಿ ಶೇಕಡಾ 60ರಷ್ಟು ಮನೆಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಇನ್ನುಳಿದ ಶೇಕಡಾ 40ರಷ್ಟು ನಿವಾಸಿಗಳಿಗೆ ಸಾರ್ವಜನಿಕ ಶೌಚಾಲಯಗಳು ಇದ್ದರೂ ಅವು ಬಳಕೆಗೆ ಯೋಗ್ಯವಾಗಿ ಇಲ್ಲದಿರುವುದರಿಂದ ಬಯಲು ಬಹಿರ್ದೆಸೆಯೇ ಗತಿಯಾಗಿದೆ.

ಪಟ್ಟಣದಲ್ಲಿ ಮಹಿಳೆಯರಿಗಾಗಿ ಒಟ್ಟು ಆರು ಸಾರ್ವಜನಿಕ ಶೌಚಾಲಯಗಳು ಇವೆ. ಆಶ್ಚರ್ಯ ಎಂದರೆ ಈ ಎಲ್ಲಾ ಶೌಚಾಲಯಗಳು ಹಳೆ ಊರಿನಲ್ಲೇ ಇವೆ. ಹೊಸ ಊರಿನಲ್ಲಿ (ಬಸ್ ನಿಲ್ದಾಣದಿಂದ ರಾಮನಗರ ಪ್ರದೇಶ) ಒಂದಾದರೂ ಸಾರ್ವಜನಿಕ ಶೌಚಾಲಯ ನಿರ್ಮಿಸಿಲ್ಲ.

ಪಂಚಾಯತ್ ರಾಜ್ ಇಲಾಖೆ, ಭೂ ಸೇನಾ ನಿಗಮ, ಗ್ರಾಮ ನೈರ್ಮಲ್ಯ (ಆರ್.ಡಬ್ಯ್ಲೂ.ಎಸ್), ಈಶಾನ್ಯ ಸಾರಿಗೆ ಸಂಸ್ಥೆ ಮೊದಲಾದ ಇಲಾಖೆಗಳು ಕಟ್ಟಿಸಿರುವ ಶೌಚಾಲಯಗಳು ಒಂದೂ ಬಳಕೆಯಲ್ಲಿ ಇಲ್ಲದಿರುವುದು ನೋವಿನ ಸಂಗತಿಯಾಗಿದೆ.

ಒಂದನೇ ವಾರ್ಡಿನಲ್ಲಿ ಕಟ್ಟಿರುವ ಹನುಮಾನ ಗುಡಿ (ಗೋಟೂರ ಅಗಸಿ ಸಮೀಪ) ಶೌಚಾಲಯಕ್ಕೆ ನೀರು ಸರಬರಾಜು ಇಲ್ಲದಿರುವುದು ಒಂದೆಡೆಯಾದರೆ ಈ ಶೌಚಾಲಯಕ್ಕೆ ಹೋಗಿ ಬರಲು ದಾರಿಯೇ ಇಲ್ಲ. ಅಂಥಹ ಮುಳ್ಳುಕಂಟಿ ಪ್ರದೇಶದಲ್ಲಿ ಶೌಚಾಲಯ ಕಟ್ಟಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಈ ಪರಿಣಾಮ, ಬನಶಂಕರಿ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ ಮತ್ತು ಹನುಮಾನ ಗುಡಿ ಅಕ್ಕಪಕ್ಕದ ಮನೆಯ ಮಹಿಳೆಯರು ಬಹಿರ್ದೆಸೆಗೆ ಇದೇ ಕಾಟಾಚಾರದ ಶೌಚಾಲಯದ ಸುತ್ತಮುತ್ತಲಿನ ಜಾಲಿಮುಳ್ಳಿನ ಗಿಡಗಂಟಿಗಳನ್ನೇ ಆಶ್ರಯಿಸಿಕೊಂಡಿದ್ದಾರೆ.

ಇನ್ನು ಇದೇ ಒಂದನೇ ವಾರ್ಡಿನ ಕಟುಕರ ಗಲ್ಲಿ (ಲಾಲಾಹ್ಮದ ದರ್ಗಾ ಸಮೀಪ) ಪ್ರದೇಶದ ಬೃಹತ್ ಶೌಚಾಲಯ ನೋಡಲು ಭವ್ಯವಾಗಿ ಕಾಣುತ್ತದೆ. ಆದರೆ ಇದರ ಸಿಂಟೆಕ್ಸ್ ಟ್ಯಾಂಕಿಗೆ ಬಂದು ಬೀಳುವ ನೀರಿನ ಪೈಪ್ ಬ್ಲಾಕ್ ಆಗಿ ನೀರು ಬರುತ್ತಿಲ್ಲ. ಅಷ್ಟೇ ಅಲ್ಲದೆ ಇದರ ಸುತ್ತ ಖಾಸಗಿಯವರ ಕಸದ ತಿಪ್ಪೆಗುಂಡಿ ಮತ್ತು ನಿವೇಶನಗಳು ಇವೆ. ಕಸದ ರಾಶಿ, ಜಾಲಿಮುಳ್ಳಿನ ಗಿಡಗಂಟಿ, ಹಂದಿ, ನಾಯಿ, ಕೋಳಿಗಳ ಓಡಾಟ ಇಲ್ಲಿ ಹೆಚ್ಚಿದೆ. ಹೀಗಾಗಿ ಈ ಶೌಚಾಲಯವೂ ಬಳಕೆಯಿಂದ ದೂರ ಉಳಿದು ಮುಸ್ಲಿಂ, ಮರಾಠ, ದೇವಾಂಗ, ಕಬ್ಬಲಿಗ ಜನಾಂಗದ ಮಹಿಳೆಯರ ಕಷ್ಟ ಹೇಳತೀರದಾಗಿದೆ.

ಅದರಂತೆ ನಾಲ್ಕನೇ ವಾರ್ಡಿನ ಪ್ಯಾಟಿಮಠ ಸಮೀಪ, ಭರತನೂರ ರಸ್ತೆ ಮಾರ್ಗ ಸಮೀಪ ಹಾಗೂ ಶಿವಶರಣಪ್ಪ ದಿವಟಗಿ ಮನೆ ಹಿಂಭಾಗದ ಮಹಿಳಾ ಶೌಚಾಲಯಗಳಲ್ಲಿ ಕಿಟಕಿ, ಬಾಗಿಲು ಮುರಿದುಹೋಗುವ ಸ್ಥಿತಿ ಇದೆ. ಈ ಮೂರು ಕಡೆಗಳಲ್ಲಿ ‘ನೀರು’ ಎಂಬ ಮಾತೇ ಇಲ್ಲ. ಕರೆಂಟ್ ಅಂತೂ ಮೊದಲೇ ಇಲ್ಲ. ಹೀಗಾಗಿ ಈಡಿಗ, ಭೋವಿ, ಡೋಹರ, ಸಮಗಾರ, ಲಿಂಗಾಯತ, ಹೂಗಾರ ಮತ್ತಿತರ ಜಾತಿ ಮಹಿಳೆಯರು ಈ ಶೌಚಾಲಯಗಳ ಅಕ್ಕಪಕ್ಕದ ಜಾಗವನ್ನೇ ಆಸರೆ ಮಾಡಿಕೊಂಡಿದ್ದಾರೆ.

ಹಾಗೆಯೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಹಿಂಭಾಗದ ಶೌಚಾಲಯಕ್ಕೆ ಕೀಲಿ ಬಿದ್ದಿದೆ. ಕಲಬುರ್ಗಿ-ಚಿಂಚೋಳಿ ನಡುವೆ ಮತ್ತು ಚಿತ್ತಾಪುರ, ಸೇಡಂ, ಹುಮನಾಬಾದ ಇತರೆ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಳಗಿ ಬಸ್ ನಿಲ್ದಾಣ ಬಂದುದೇ ತಡ ‘ಬಹಿರ್ದೆಸೆ’ಗೆ ಹೋಗುವ ಜಾಗ ಎಲ್ಲಿ ಎಂದು ಸ್ಥಳ ಹುಡುಕಲು ಶುರು ಮಾಡುತ್ತಾರೆ. ಅಷ್ಟೇ ಅಲ್ಲದೆ, ಸಾರಿಗೆ ಸಂಸ್ಥೆಯ ಸಿಬ್ಬಂದಿಯೂ ಪರದಾಡುತ್ತಿರುತ್ತಾರೆ. ಆದರೂ ಈ ಬಗ್ಗೆ ಸಂಬಂಧಿತರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಟ್ಟಾರೆ, ಕಾಳಗಿ ಪಟ್ಟಣದ ಸಾರ್ವಜನಿಕ ಶೌಚಾಲಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT