ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಈಗೇನು ಮಾಡುತ್ತಿದ್ದಾರೆ ಮಹಿಳಾ ಮಾಜಿ ಮೇಯರ್‌ಗಳು?

ಒಬ್ಬ ಮಾಜಿ ಮೇಯರ್‌ಗೆ ಮಾತ್ರ ಕಾಂಗ್ರೆಸ್‌ ಟಿಕೆಟ್‌, ಇನ್ನೊಬ್ಬರು ಸ್ವತಂತ್ರ ಅಭ್ಯರ್ಥಿ
Last Updated 25 ಆಗಸ್ಟ್ 2021, 9:59 IST
ಅಕ್ಷರ ಗಾತ್ರ

ಕಲಬುರ್ಗಿ: 1984ನೇ ಸಾಲಿನಲ್ಲಿ ಕಲಬುರ್ಗಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಈವರೆಗೆ 32 ಮೇಯರ್‌ಗಳು ಆಡಳಿತ ನಡೆಸಿದ್ದಾರೆ. ಇದರಲ್ಲಿ ಮಹಿಳಾ ಮೇಯರ್‌ಗಳ ಸಂಖ್ಯೆ ಕೇವಲ ಆರು.

ಈ ಆರು ವನಿತೆಯರ ಪೈಕಿ ಸದ್ಯಕ್ಕೆ ಒಬ್ಬರು ಮಾತ್ರ ಪಾಲಿಕೆ ಚುನಾವಣೆಯ ಕಣದಲ್ಲಿದ್ದಾರೆ. ಉಳಿದಂತೆ ಇಬ್ಬರು ಆಯಾ ಪಕ್ಷಗಳ ಮಹಿಳಾ ಘಟಕದಲ್ಲಿ ಸಕ್ರಿಯರಾಗಿದ್ದರೆ, ಮತ್ತೆ ಮೂವರು ಸಾಮಾನ್ಯ ಗೃಹಿಣಿಯರಾಗಿ, ರಾಜಕೀಯದಿಂದಲೇ ದೂರ ಉಳಿದಿದ್ದಾರೆ.

ಯಾರು ನಮ್ಮ ಮಹಿಳಾ ಮೇಯರ್‌ಗಳು: ಗಂಗೂಬಾಯಿ ವಳಕೇರಿ (ಜೆಡಿಎಸ್‌–1998–99), ಚಂದ್ರಿಕಾ ಪರಮೇಶ್ವರ (ಕಾಂಗ್ರೆಸ್– 2005–06), ಸಯೀದಾ ಬೇಗಂ (ಕಾಂಗ್ರೆಸ್– 2007–08), ಸುನಂದಾ ರಾಜಾರಾಂ (ಬಿಜೆಪಿ–2010-11), ಆಲಿಯಾ ಶಿರೀನ್‌ (ಕಾಂಗ್ರೆಸ್‌– 2014–15), ಮಲ್ಲಮ್ಮ ವಳಕೇರಿ (ಕಾಂಗ್ರೆಸ್‌–2018–19).

ಗಂಗೂಬಾಯಿ ಭವಾನಿಕುಮಾರ ವಳಕೇರಿ ಅವರು 1996ರಲ್ಲಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. ಅದೇ ಅವಧಿಯಲ್ಲಿ 1998–99ರಲ್ಲಿ ಮೇಯರ್‌ ಆದರು. ಆದರೆ, ಅವರು ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿದ್ದು ಗಮನಾರ್ಹ. ಸದ್ಯ ಅವರು ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ. ಅವರ ಪತಿ ಭವಾನಿಕುಮಾರ್‌ ಇನ್ನೂ ಜೆಡಿಎಸ್‌ನಲ್ಲೇ ಕಾರ್ಯಕರ್ತರಾಗಿದ್ದಾರೆ.

ವಿಧಾನಸಭೆಯತ್ತ ಚಿತ್ತ: ಚಂದ್ರಿಕಾ ಪರಮೇಶ್ವರ ಒಂದು ಅವಧಿಗೆ ಮೇಯರ್‌, ಮತ್ತೊಂದು ಅವಧಿಗೆ ಉಪಮೇಯರ್‌ ಆಗಿದ್ದವರು. ಪಾಲಿಕೆ ಚುನಾವಣೆಯಿಂದ ಹೊರಬಂದಿರುವ ಅವರು, ಕಾಂಗ್ರೆಸ್‌ನ ಜಿಲ್ಲಾ ಮಹಿಳಾ ಘಟಕದಲ್ಲಿ ಸಕ್ರಿಯರಾಗಿದ್ದಾರೆ. ‘ಪಕ್ಷದಿಂದ ಒಮ್ಮೆ ಟಿಕೆಟ್‌ ತೆಗೆದುಕೊಂಡು ಸ್ವಲ್ಪದರಲ್ಲೇ ಸೋತಿದ್ದೇನೆ. ಮುಂದೆಯೂ ವಿಧಾನಸಭಾ ಕ್ಷೇತ್ರದಲ್ಲೇ ಇರಲಿದ್ದೇನೆ’ ಎನ್ನುವುದು ಅವರು ಸ್ಪಷ್ಟ ಮಾತು.

ಈ ಬಾರಿಯೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದ ಸಯೀದಾ ಬೇಗಂ, ಟಿಕೆಟ್‌ ಸಿಗದ ಕಾರಣ ಪಕ್ಷದಿಂದ ದೂರ ಉಳಿದು ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಈಗ ನಾನಾಯಿತು, ನಮ್ಮ ಮನೆಯಾಯಿತು: ಕಾಂಗ್ರೆಸ್‌ನಲ್ಲಿ ಉಂಟಾದ ಬಂಡಾಯದ ಬಿಸಿಯಿಂದಲೇ ಮೇಯರ್‌ ಪಟ್ಟಕ್ಕೇರಿದ ಸುನಂದಾ ರಾಜಾರಾಂ ಐಹೊಳೆ ಅವರದು ಪಾಲಿಕೆಯಲ್ಲಿ ಅಳಿಸಲಾಗದ ಇತಿಹಾಸ. 2007–08ರಲ್ಲಿ ಖಮರುಲ್‌ ಇಸ್ಲಾಂ ಅವರ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್‌ನ 13 ಸದಸ್ಯರು ‘ಶರಣಬಸವೇಶ್ವರ– ಖಾಜಾ ಬಂದಾ ನವಾಜ್‌ ತಂಡ (ಎಸ್‌–ಕೆ ಟೀಂ)’ ಮಾಡಿಕೊಂಡಿದ್ದರು. ಬಿಜೆಪಿಗೆ ಬಹುಮತವಿಲ್ಲದಿದ್ದರೂ ಬಿಜೆಪಿ ಸದಸ್ಯೆ ಸುನಂದಾ ಅವರನ್ನೇ ಮೇಯರ್‌ ಆಗಿ ಆಯ್ಕೆ ಮಾಡಿದ್ದರು. ಶರಣಬಸವೇಶ್ವರ ಹಾಗೂ ಖಾಜಾ ಬಂದಾ ನವಾಜ್‌ ಅವರ ಹೆಸರು ಹಿಡಿದು ಪ್ರತಿಜ್ಞೆ ಮಾಡಿದ್ದ ಅವರೆಲ್ಲ, ಮಾತು ಮುರಿಯಲಿಲ್ಲ.

ಒಂದೇ ಅವಧಿಗೆ ಸದಸ್ಯರಾದ ಸುನಂದಾ ಅದೇ ಅವಧಿಯಲ್ಲಿ ಮೇಯರ್‌ ಕೂಡ ಆದರು. ಬಳಿಕ ರಾಜಕೀಯದಿಂದ ದೂರ ಉಳಿದರು. ‘ಚಂದ್ರಶೇಖರ ಪಾಟೀಲ ರೇವೂರ ಗೌಡ್ರು ತೀರಿಕೊಂಡ ಮೇಲೆ ನಮಗೆ ರಾಜಕೀಯದಲ್ಲಿ ಬಲ ಉಳಿಯಲಿಲ್ಲ. ಈಗ ನಾನಾಯಿತು, ನನ್ನ ಮನೆಯಾಯಿತು...’ ಎನ್ನುವುದು ಅವರ ಮನದಾಳ.

ಆಲಿಯಾಗೆ ಮತ್ತೆ ಟಿಕೆಟ್‌: ಮೇಯರ್‌, ಉಪ ಮೇಯರ್‌ ಆಗಿದ್ದ ಅನುಭವಿಸಿದ್ದ ಆಲಿಯಾ ಶಿರೀನ್‌ ಅವರಿಗೆ ಈಗ ಮತ್ತೆ ಕಾಂಗ್ರೆಸ್‌ನಿಂದಲೇ ಟಿಕೆಟ್‌ ನೀಡಲಾಗಿದೆ.

2018–19ರ ಅವಧಿಗೆ ಮೇಯರ್‌ ಆಗಿದ್ದ ಮಲ್ಲಮ್ಮ ವಳಕೇರಿ ಕೂಡ ಈ ಬಾರಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಅವರ ಪುತ್ರ ಗಣೇಶ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT