ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಕಲಬುರ್ಗಿ ಜಿಲ್ಲೆ ಪೂರ್ಣ ಸ್ತಬ್ದ

Last Updated 22 ಮಾರ್ಚ್ 2020, 13:05 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಗರದ ರಸ್ತೆಗಳು ಭಣಗುಟ್ಟಿದವು.

ರೈಲುಗಳು, ಬಸ್ಸುಗಳು, ಆಟೊಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ, ‘ಜನತಾ ಕರ್ಫ್ಯೂ’ ಮಾಹಿತಿ ಇರದೇ ನಗರಕ್ಕೆ ಬಂದಿದ್ದ ಕೆಲ ಸಾರ್ವಜನಿಕರು ಬಸ್‌ ಇಲ್ಲದೇ ಪರದಾಡಬೇಕಾಯಿತು. ಇಡೀ ನಗರ ಸ್ತಬ್ದಗೊಂಡಿದ್ದರಿಂದಾಗಿ ರಸ್ತೆ ಬದಿಯಲ್ಲಿದ್ದ ಭಿಕ್ಷುಕರಿಗೂ ಹನಿ ನೀರು ಸಹ ಸಿಗದಂತಾಯಿತು.

ಕಳೆದ ಒಂದು ವಾರದಿಂದ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತಾದರೂ ದಿನಸಿ ಅಂಗಡಿ, ಪೆಟ್ರೋಲ್‌ ಪಂಪ್‌, ಔಷಧಿ ಅಂಗಡಿ ಹಾಗೂ ಹಣ್ಣಿನ ಮಾರಾಟ ಮಳಿಗೆಗಳು ತೆರೆದಿದ್ದವು. ಆದರೆ, ಭಾನುವಾರ ಇವೆಲ್ಲವೂ ಮುಚ್ಚಿದ್ದವು. ಹೀಗಾಗಿ ರೂಮ್‌ ಮಾಡಿಕೊಂಡಿರುವ ಯುವಕ–ಯುವತಿಯರು, ಊಟಕ್ಕಾಗಿ ಹೋಟೆಲ್‌, ಖಾನಾವಳಿಗಳನ್ನೇ ನೆಚ್ಚಿಕೊಂಡಿದ್ದವರು ಊಟಕ್ಕಾಗಿ ಪರದಾಡಬೇಕಾಯಿತು.

ನಗರದ ಜನನಿಬಿಡ ಸೂಪರ್‌ ಮಾರ್ಕೆಟ್, ಜಗತ್ ಸರ್ಕಲ್, ಎಸ್‌ವಿಪಿ ಸರ್ಕಲ್, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸೇಡಂ ರಸ್ತೆಯಲ್ಲಿರುವ ಖರ್ಗೆ ಪೆಟ್ರೋಲ್‌ ಪಂಪ್‌ ಬಳಿ ಜನರು ಸುಳಿಯಲಿಲ್ಲ. ಕುತೂಹಲದಿಂದ ನಗರ ಸುತ್ತುವ ಯುವಕರನ್ನು ಅಲ್ಲಲ್ಲಿ ನಿಂತಿದ್ದ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಮನೆಗೆ ನಡೆಯುವಂತೆ ತಾಕೀತು ಮಾಡಿ ಕಳಿಸಿದರು.

ಮತ್ತೆ ಮೂರು ದಿನ ನಿಷೇಧಾಜ್ಞೆ: ಜಿಲ್ಲೆಯಾದ್ಯಂತ ಮತ್ತೆ ಮೂರು ದಿನ ನಿಷೇಧಾಜ್ಞೆ ವಿಸ್ತರಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ. ಮಾರ್ಚ್‌ 19ರಿಂದ ಮೂರು ದಿನ ನಿಷೇಧಾಜ್ಞೆ ವಿಧಿಸಲಾಗಿತ್ತು. ಕೊರೊನಾ ಸೋಂಕು ಹರಡಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೆ ಮಾ 25ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ.

ದೇಶದಲ್ಲಿ ಮೊದಲ ಬಾರಿಗೆ ಕೋವಿಡ್‌ 19 ಸೋಂಕಿನಿಂದ ಮೃತಪಟ್ಟ ನಗರದ ಮೊಹ್ಮದ್ ಹುಸೇನ್‌ ಸಿದ್ದಿಕಿ (76) ಹಾಗೂ ಇದೀಗ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ಮೃತ ಸಿದ್ದಿಕಿ ಅವರ ಕುಟುಂಬ ವೈದ್ಯನ ಮನೆ ಇರುವ ಬಡಾವಣೆಯ ರಸ್ತೆಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್‌ ಮಾಡಿದ್ದರು.

ನಗರದ ವಿವಿಧ ಮಸೀದಿ, ದರ್ಗಾಗಳಲ್ಲಿ ನಮಾಜ್‌ ನಡೆಯಿತಾದರೂ ಭಾಗವಹಿಸಿದವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು.

ಜಿಲ್ಲೆಯ ಸೇಡಂ, ಚಿಂಚೋಳಿ, ಕಮಲಾಪುರ, ಆಳಂದ, ಅಫಜಲಪುರ, ಜೇವರ್ಗಿ, ಕಾಳಗಿ, ಶಹಾಬಾದ್‌, ಚಿತ್ತಾಪುರ ತಾಲ್ಲೂಕಿನಲ್ಲಿಯೂ ಜನತಾ ಕರ್ಫ್ಯೂಗೆ ವ್ಯಾಪಕ ಸ್ಪಂದನೆ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT