10 ಅಂಚೆ ಕಚೇರಿಗಳಲ್ಲಿ ‘ಪೇಮೆಂಟ್‌ ಬ್ಯಾಂಕ್‌’ ಸೇವೆ

7
ಕಲಬುರ್ಗಿ–ಯಾದಗಿರಿ ಜಿಲ್ಲೆ; ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆಗೆ ಸಿದ್ಧತೆ

10 ಅಂಚೆ ಕಚೇರಿಗಳಲ್ಲಿ ‘ಪೇಮೆಂಟ್‌ ಬ್ಯಾಂಕ್‌’ ಸೇವೆ

Published:
Updated:

ಕಲಬುರ್ಗಿ: ಬಹುನಿರೀಕ್ಷಿತ ಅಂಚೆ ಪೇಮೆಂಟ್‌ ಬ್ಯಾಂಕ್‌ ಸೇವೆ ಆರಂಭಕ್ಕೆ ಆಗಸ್ಟ್‌ 21 ಮುಹೂರ್ತ ನಿಗದಿಯಾಗಿದೆ. ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ 10 ಅಂಚೆ ಕಚೇರಿಗಳಲ್ಲಿ ಈ ಸೇವೆ ಲಭ್ಯವಾಗಲಿದ್ದು, ಅದಕ್ಕಾಗಿ ಭರದ ಸಿದ್ಧತೆ ನಡೆದಿವೆ.

ಅಂಚೆ ಇಲಾಖೆ ಸಹ ಬ್ಯಾಂಕ್‌ಗಳ ಮಾದರಿಯಲ್ಲಿ ಉಳಿತಾಯ ಖಾತೆ, ಠೇವಣಿ ಸ್ವೀಕಾರ, ಎಟಿಎಂ ಸೇವೆಯಂತಹ ಹಣಕಾಸಿನ ವಹಿವಾಟು ನಡೆಸುತ್ತಿದೆ. ಇದಕ್ಕೆ ಡಿಜಿಟಲ್‌ ರೂಪ ನೀಡಿ, ಈ ಸೇವೆಯನ್ನು ಇನ್ನಷ್ಟು ವಿಸ್ತರಿಸುವುದು ಹಾಗೂ ಗ್ರಾಮೀಣ ಪ್ರದೇಶದ ಜನರಿಗೂ ಇದರ ಸೌಲಭ್ಯ ದೊರಕಿಸಿಕೊಡುವುದು ‘ಅಂಚೆ ಪೇಮೆಂಟ್‌ ಬ್ಯಾಂಕ್‌’ ಯೋಜನೆ ಪ್ರಮುಖ ಧ್ಯೇಯ.

‘ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರ್ಗಿ ಅಂಚೆ ವಲಯದಲ್ಲಿ ಸದ್ಯ ಹತ್ತು ಅಂಚೆ ಕಚೇರಿಗಳಲ್ಲಿ ಈ ಸೇವೆ ಆರಂಭಿಸಲಾಗುತ್ತಿದೆ. ಮುಂದಿನ ತಿಂಗಳು ಕಲಬುರ್ಗಿ ಜಿಲ್ಲೆಯ 30 ಹಾಗೂ ಯಾದಗಿರಿ ಜಿಲ್ಲೆಯ 27 ಶಾಖೆಗಳಲ್ಲಿ ಈ ಸೇವೆ ದೊರೆಯಲಿದೆ. ಆ ನಂತರ ಪ್ರತಿ ತಿಂಗಳು ಪ್ರತಿ ಜಿಲ್ಲೆಯ 20 ಶಾಖೆಗಳಿಗೆ ಈ ಸೇವೆ ವಿಸ್ತರಿಸಲಾಗುವುದು. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗಾಗಿ ಎಲ್ಲ ಅಂಚೆ ಕಚೇರಿಗಳು ಈ ಸೇವೆಯ ವ್ಯಾಪ್ತಿಗೆ ಒಳಪಡಸಲಿವೆ’ ಎನ್ನುವುದು ಇಂಡಿಯಾ ಪೋಸ್ಟಲ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ)ನ ಕಲಬುರ್ಗಿ ವಲಯದ ವ್ಯವಸ್ಥಾಪಕ ನಾಗಾರ್ಜುನ ಅವರ ವಿವರಣೆ.

ಏನೆಲ್ಲ ಸೇವೆ ಲಭ್ಯ: ಅಂಚೆ ಇಲಾಖೆಯಲ್ಲಿ ಈಗ ಗ್ರಾಹಕರು ಹೊಂದಿರುವ ಉಳಿತಾಯ ಖಾತೆಗಳನ್ನು ಈ ಐಪಿಪಿಬಿಗೆ ಜೋಡಿಸಿಕೊಳ್ಳಬಹುದು. ಇಲ್ಲವೆ ಐಪಿಪಿಬಿ ಹೊಸ ಖಾತೆ ತೆರೆಯಬಹುದು. ಇದಕ್ಕೆ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ತರಬೇಕಿಲ್ಲ. ಬಯೊಮೆಟ್ರಿಕ್‌ ಪಡೆದು ಖಾತೆ ತೆರೆಯಲಾಗುವುದು. ಇದು ಕಾಗದ ರಹಿತ ಡಿಜಿಟಲ್‌ ಸೇವೆ. ಹೀಗಾಗಿ ಈ ಗ್ರಾಹಕರಿಗೆ ಪಾಸ್‌ಬುಕ್‌ ನೀಡುವುದಿಲ್ಲ. ಗ್ರಾಹಕರು ಬಯಸಿದರೆ ಪ್ರತಿ ತಿಂಗಳೂ ಅವರ ಮನೆಗೆ ವಹಿವಾಟಿನ ಮಾಹಿತಿ (ಸ್ಟೇಟ್‌ಮೆಂಟ್‌) ಕಳಿಸಲಾಗುವುದು.

ಒಂದು ಖಾತೆಯಲ್ಲಿ ₹1 ಲಕ್ಷ ವರೆಗೆ ಠೇವಣಿ ಇಡಬಹುದು. ತಮಗೆ ಹಣ ಅವಶ್ಯವಿದ್ದರೆ ಅಂಚೆ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅವರು 48 ಗಂಟೆಗಳ ಅವಧಿಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಹಣ ಕೊಟ್ಟು ಬರುತ್ತಾರೆ. ಗ್ರಾಹಕರು ಉಳಿತಾಯ ಖಾತೆಗೆ ಹಣ ಜಮೆ ಮಾಡಲೂ ಇದೇ ಕ್ರಮ ಅನುಸರಿಸಬಹುದು.

‘ಹೀಗೆ ಮನೆ ಮನೆಗೆ ಹೋಗಿ ನೀಡುವ ಸೇವೆಗೆ ಹಣ ಪಡೆಯುವ/ಹಣ ಜಮೆ ಮಾಡುವ ಒಂದು ವಹಿವಾಟಿಗೆ ₹25 ದರ ನಿಗದಿಪಡಿಸಲಾಗಿದೆ. ಈ ಖಾತೆಯಿಂದ ಇತರೆ ಬಿಲ್ಲು ಸಂದಾಯ ಮಾಡಬಹುದು. ರೀಚಾರ್ಜ್‌ ಮಾಡಿಸಬಹುದು. ಹಣ ವರ್ಗಾವಣೆಗೂ ಅವಕಾಶ ಇದೆ. ಇಂತಹ ನಗದು ರಹಿತ ವಹಿವಾಟು ನಡೆಸಿದರೆ ಒದು ವಹಿವಾಟಿಗೆ ₹15 ದರ ವಿಧಿಸಲಾಗುತ್ತದೆ. ಉಳಿತಾಯ ಮತ್ತು ಚಾಲ್ತಿ ಎರಡೂ ಖಾತೆಗಳಿಗೆ ಇದು ಅನ್ವಯ’ ಎನ್ನುವುದು ಇಲಾಖೆಯ ಮಾಹಿತಿ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ನೇರ ಹಣ ವರ್ಗಾವಣೆ, ನರೇಗಾ ಕೂಲಿ ಹಣ ಪಾವತಿ, ವಿದ್ಯಾರ್ಥಿ ವೇತನ ಇತ್ಯಾದಿಗಳಿಗೆ ಈ ಖಾತೆ ಅನುಕೂಲ. ಬ್ಯಾಂಕ್‌ಗಳು ವಿಧಿಸುತ್ತಿರುವಷ್ಟು ಕಠಿಣ ನಿಯಮ ಮತ್ತು ಹೆಚ್ಚಿನ ಶುಲ್ಕ ಇಲ್ಲ ಎನ್ನುವುದು ಇಲಾಖೆಯ ಹೇಳಿಕೆ.

ಎಲ್ಲೆಲ್ಲಿ ಆರಂಭ

ಕಲಬುರ್ಗಿಯ ಮುಖ್ಯ ಅಂಚೆ ಕಚೇರಿ
ಕಲಬುರ್ಗಿ ರೈಲು ನಿಲ್ದಾಣ ಬಳಿಯ ಅಂಚೆ ಕಚೇರಿ
ಸೇಡಂ ಮುಖ್ಯ ಅಂಚೆ ಕಚೇರಿ
ಯಾದಗಿರಿ ಮುಖ್ಯ ಅಂಚೆ ಕಚೇರಿ
ನಾಗನಹಳ್ಳಿ ಪಿಟಿಸಿ ಅಂಚೆ ಕಚೇರಿ
ನಂದಿಕೂರ 
ಹಾಗರಗಾ
ಸಿಂದನಮಡು
ಕೋಡ್ಲಾ
ಭೀಮನಹಳ್ಳಿ

624 ಕಲಬುರ್ಗಿ–ಯಾದಗಿರಿ ಜಿಲ್ಲೆಯಲ್ಲಿಯ ಅಂಚೆ ಕಚೇರಿ
425 ಅಂಚೆ ಸಹಾಯಕ ಸಿಬ್ಬಂದಿ
8.60 ಲಕ್ಷ ಉಳಿತಾಯ ಖಾತೆಗಳ ಸಂಖ್ಯೆ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !