ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ ಇಂದಿನಿಂದ

Last Updated 24 ಫೆಬ್ರುವರಿ 2023, 4:57 IST
ಅಕ್ಷರ ಗಾತ್ರ

ಕಲಬುರಗಿ: ಬಹು ಭಾಷೆಗಳ ಸಮ್ಮಿಲನ, ಹಿಂದು–ಮುಸ್ಲಿಂ–ಬೌದ್ಧ ಧರ್ಮಗಳ ಸಮನ್ವಯ, ಐತಿಹಾಸಿಕ ತಾಣಗಳ ಮೂಲಕ ರಾಜ್ಯದ ಗಮನ ಸೆಳೆದಿರುವ ಕಲ್ಯಾಣ ಕರ್ನಾಟಕ ಭಾಗ ಈಗ ‘ಕಲ್ಯಾಣ ಕರ್ನಾಟಕ ಉತ್ಸವ’ದ ಮುಖೇನ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರದಿಂದ (ಫೆ.24ರಿಂದ 26) ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಉತ್ಸವಕ್ಕೆ ಬೇಕಾದ ಅಂತಿಮ ತಯಾರಿ ಪೂರ್ಣಗೊಳಿಸಿ, ಜನರಿಗೆ ಸಾಂಸ್ಕೃತಿಕ ದಸದೌತಣ ಬಡಿಸಲು ಸನ್ನದ್ಧವಾಗಿದೆ.

ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸಂಸ್ಕೃತಿಯ ಹಿರಿಮೆ, ವೈಭವ, ಜಾನಪದ ಕಲೆಗಳು ಉತ್ಸವದಲ್ಲಿ ಅನಾವರಣಗೊಳ್ಳಲಿವೆ.

ಅಕ್ಷರ ಮತ್ತು ಪಾಂಡಿತ್ಯದ ಲೇಖಕರು ಕಲೆ, ಸಾಹಿತ್ಯ, ಸಮಾಜೋ ಸಾಂಸ್ಕೃತಿ ದರ್ಶನದ ಜತೆಗೆ ವಿಮೋಚನಾ ಚಳವಳಿ, 371(ಜೆ) ಸಮಸ್ಯೆಗಳು ಮತ್ತು ಸವಾಲುಗಳು, ನೆಲ–ಜಲದ ಇತಿಹಾಸ, ವರ್ತಮಾನ ಹಾಗೂ ಭವಿಷ್ಯದ ಮೇಲೆ ಬೆಳಕು ಚೆಲ್ಲುವರು. ಹಿರಿಯ–ಯುವ ಕವಿಗಳು ತಮ್ಮ ಕವನಗಳ ವಾಗ್ಝರಿ ಹರಿಸುವರು. ಪುಸ್ತಕ ಮಾಧ್ಯಮ ಮತ್ತು ರಂಗಭೂಮಿಗೂ ಆದ್ಯತೆ ಕೊಡಲಾಗಿದೆ. ಚಿತ್ರ ಕಲಾವಿದರ ಕೈಗಳಿಂದ ಮೂಡಿಬರುವ ಅತ್ಯುತ್ತಮ ಕಲಾ ಕೃತಿಗಳಿಂದ ಈ ನೆಲದ ಕಲಾ ಶ್ರೀಮಂತಿಕೆ ಇಡೀ ನಾಡಿಗೆ ಪರಿಚಯವಾಗಲಿದೆ.

ಸುಗಮ ಸಂಗೀತ, ಹಲಗೆ ವಾದನ, ಡೊಳ್ಳು ಕುಣಿತ ಸೇರಿದಂತೆ ಚಂದನವನ, ಬಾಲಿವುಡ್‌ ಕಲಾವಿದರು ದೇಶದ ಶ್ರೀಮಂತ ಸಂಸ್ಕೃತಿಯನ್ನು ಪರಿಚಯಿಸುವರು. ಯುವಕ, ಯುವತಿಯರು ಸಾಹಸ ಪ್ರದರ್ಶನ, ಗಾಳಿಪಟ ಉತ್ಸವ, ಪ್ಯಾರಾಪ್ಲೇನ್ ಮತ್ತು ಪ್ಯಾರಾ ಸೇಲಿಂಗ್, ಜಸ ಸಾಹಸ ಕ್ರೀಡೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಸಾವಯವ ಮತ್ತು ಸಿರಿಧಾನ್ಯ ಮೇಳ, ಸಮಗ್ರ ಕೃಷಿ ಪದ್ಧತಿಯ ಪ್ರಾತ್ಯಕ್ಷಿಕೆ, ಫಲಪುಷ್ಪ ಪ್ರದರ್ಶನ, ಗೋವು ತಳಿಗಳ ಪ್ರದರ್ಶನ, ಶ್ವಾನಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಮತ್ಸ್ಯ ಪ್ರದರ್ಶನ ಬೇರೊಂದು ಲೋಕಕ್ಕೆ ಕರೆದೊಯ್ಯಲಿದೆ.

ರಾಷ್ಟ್ರಕೂಟರ 3ಡಿ ವೇದಿಕೆ: ಫೈಬರ್‌ನಿಂದ ನಿರ್ಮಿಸಲಾದ 3ಡಿ ವೇದಿಕೆಯು ರಾಷ್ಟ್ರಕೂಟ ರಾಜಧಾನಿಯಾಗಿದ್ದ ಮಳಖೇಡ(ಮಾನ್ಯಖೇಟ) ಕೋಟೆಯ ಮಾದರಿಯಾಗಿದೆ. 88X60 ಅಳತೆಯ ಮುಖ್ಯ ವೇದಿಕೆಯ ಮೇಲೆ 30 ಗಣ್ಯರು ಆಸೀನರಾಗಬಹುದು. ಉತ್ಸವದ ಚಾಲನೆ, ಸಾಂಸ್ಕೃತಿಕ ಹಾಗೂ ಸಮಾರೋಪ ಸಮಾರಂಭ ಇದೇ ವೇದಿಕೆ ಮೇಲೆ ನಡೆಯಲಿವೆ. ಮುಂಭಾಗದಲ್ಲಿ 25 ವಿವಿಐಪಿ ಸೋಫಾ, 100 ವಿಶೇಷ ಅತಿಥಿಗಳ ಖುರ್ಚಿಗಳು, 10 ಸಾವಿರ ಪ್ಲಾಸ್ಟಿಕ್‌ ಖುರ್ಚಿಗಳನ್ನು ಹಾಕಲಾಗಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣ, ಮಹಾತ್ಮಾ ಗಾಂಧಿ ಸಭಾಂಗಣ ಮತ್ತು ಡಾ. ಮಹಾದೇವಪ್ಪ ರಾಂಪುರೆ ಬಯಲು ರಂಗ ಮಂದಿರಗಳು ಸಾಂಸ್ಕೃತಿಕ ಕಲರವಕ್ಕೆ ಸಾಕ್ಷಿ ಆಗಲಿವೆ.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಾರ್ಯದರ್ಶಿ ಅನಿರುದ್ಧ ಶ್ರವಣ್, ಎಸ್.ಪಿ ಇಶಾ ಪಂತ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚುವರಿ ಆಯುಕ್ತೆ ಗರಿಮಾ ಪಂವಾರ್, ಜಿ.ಪಂ ಸಿಇಒ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಅಂತಿಮ ಸಿದ್ಧತೆ ಪರಿಶೀಲಿಸಿದರು.

ಕಲಬುರಗಿಗೆ ಸೀಮಿತವಾದ ಉತ್ಸವ

ಕಲ್ಯಾಣ ಕರ್ನಾಟಕ ಉತ್ಸವ ಏಳು ಜಿಲ್ಲೆಗಳನ್ನು ಪ್ರತಿನಿಧಿಸುವ ಬದಲು ಕಲಬುರಗಿಗೆ ಸೀಮಿತವಾಗಿದೆ ಎಂದು ಕಲಬುರಗಿಯೇತರ ಸಾಹಿತಿಗಳು, ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.

‘ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಯಚೂರು ಜಿಲ್ಲೆಯೂ ಇದೆ ಎಂಬುದನ್ನು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮರೆತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಮಗೆ ಬೇಕಾದ ಕೆಲವೇ ಕಲಾವಿದರಿಗೆ ಮನ್ನಣೆ ನೀಡಿದ್ದಾರೆ’ ಎನ್ನುತ್ತಾರೆ ರಾಯಚೂರು ರಂಗಕರ್ಮಿ ಅಲ್ತಾಫ್‌.

‘ವಿಮೋಚನಾ ಹೋರಾಟದ ಅಮೃತ ಸಂಭ್ರಮವಾಗಿದ್ದ ಕಾರಣ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿಯೂ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಮಾಡಬೇಕಿತ್ತು. ಈಗಿನ ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ಹೋರಾಟದ ಹೆಜ್ಜೆಗಳನ್ನು ತೋರಿಸಿಕೊಡಬೇಕಿತ್ತು. ಮುಂದಿನ ದಿನಗಳಲ್ಲಾದರೂ ಜಿಲ್ಲಾವಾರು ಕಾರ್ಯಕ್ರಮಗಳನ್ನು ನಡೆಸಲಿ’ ಎಂದು ಕೊಪ್ಪಳದ ಹಿರಿಯ ಸಾಹಿತಿ ಎಚ್‌.ಎಸ್‌. ಪಾಟೀಲ ಸಲಹೆ ನೀಡಿದರು.

‘ಉತ್ಸವದ ಬಗ್ಗೆ ಯಾದಗಿರಿ ಜಿಲ್ಲೆಯ ಜನರಿಗೆ ಗೊತ್ತೇ ಇಲ್ಲ. ರಾಜಕೀಯ ಕಾರಣಕ್ಕಾಗಿ ಉತ್ಸವ ಮಾಡುತ್ತಿದ್ದಾರೆ. ಸಾರ್ವಜನಿಕರ ದುಡ್ಡು ವ್ಯರ್ಥವಾಗುತ್ತಿದೆ. ಕಲ್ಯಾಣ ಕರ್ನಾಟಕ ಅಧ್ಯಕ್ಷರು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಈ ಭಾಗದಲ್ಲಿ ತೊಗರಿ, ಹತ್ತಿ ಬೆಳೆ ಹಾಳಾಗಿದೆ. ಯಾರಿಗೂ ಉತ್ಸುಕತೆ ಇಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿರುವ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಉತ್ಸವ ಆಯೋಜಿಸಿರುವುದು ಹಾಸ್ಯಾಸ್ಪದ’ ಎಂದು ಯಾದಗಿರಿಯ ರೈತ ಮುಖಂಡ ಭಾಸ್ಕರರಾವ ಮುಡಬೂಳ ಟೀಕಿಸಿದರು.

‘ಪ್ರತಿ ಜಿಲ್ಲೆಗೂ ಆದ್ಯತೆ’

‘ಕಲಬುರಗಿ ಕೇಂದ್ರ ಸ್ಥಾನ ಆಗಿದ್ದರಿಂದ ಸ್ವಲ್ಪ ಹೆಚ್ಚಿನ ಕಲಾವಿದರಿಗೆ ಅವಕಾಶ ಸಿಕ್ಕಿದೆ. ಎಲ್ಲ ಜಿಲ್ಲೆಗಳ ಕಲಾವಿದರಿಗೆ ಆದ್ಯತೆ ನೀಡಿದ್ದು, ಅಂತಿಮ ಪಟ್ಟಿ ನೋಡಿದರೆ ಗೊತ್ತಾಗುತ್ತದೆ’ ಎಂದು ಕೆಕೆಆರ್‌ಡಿಬಿ ಕಾರ್ಯದರ್ಶಿ ಪಿ. ಅನಿರುದ್ಧ ಶ್ರವಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸರಣಿ ಸಭೆ ನಡೆಸಿ, ಆಯಾ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಾಗಿದೆ. ಕಲಾವಿದರನ್ನು ಆಡಿಷನ್‌, ಸ್ಕ್ರೀನಿಂಗ್ ಮೂಲಕ ಆಯ್ದುಕೊಳ್ಳಲಾಗಿದೆ. ವೇದಿಕೆಗಳ ಸಂಖ್ಯೆ ಸಹ ಹೆಚ್ಚಿಸಿದ್ದೇವೆ. ನಮ್ಮಲ್ಲಿರುವ ಸಂಪನ್ಮೂಲ, ಸಮಯ, ಇತಿಮಿತಿಗಳ ಒಳಗೆ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಕೇಂದ್ರ ಸ್ಥಾನ ಮಾತ್ರವಲ್ಲದೆ ಬೇರೆ ಜಿಲ್ಲೆಗಳಲ್ಲಿ ಮಾಡಬೇಕು ಎಂಬ ಚಿಂತನೆ ಸಹ ಇದೆ’ ಎಂದರು.

‘ಬಿಗಿ ಪೊಲೀಸ್‌ ಬಂದೋಬಸ್ತ್‌’

‘ಉತ್ಸವಕ್ಕೆ ಬರುವ ಜನಪ್ರತಿನಿಧಿಗಳ, ಗಣ್ಯರ, ಕಲಾವಿದರ, ಸಾರ್ವಜನಿಕರ ಭದ್ರತೆಗೆ ಬಿದಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ತಿಳಿಸಿದರು.

‘ಹೊರ ಜಿಲ್ಲೆಗಳು ಹಾಗೂ ತಾಲ್ಲೂಕುಗಳಿಂದ ಬರುವ ವಾಹನಗಳನ್ನು ಆರ್‌ಟಿಒ ಕ್ರಾಸ್ ಮುಖಾಂತರ ಕುಸನೂರ ರಸ್ತೆ ಮಾರ್ಗದಲ್ಲಿ ಸಾಗಿ ಸುರಕ್ಷಾ ಆಸ್ಪತ್ರೆ ಸಮೀಪದಲ್ಲಿ ನಿಲ್ಲಿಸಬೇಕು. ವಿ.ವಿ.ಯ ಚಾಲುಕ್ಯ ಮತ್ತು ರಾಷ್ಟ್ರಕೂಟರ ದ್ವಾರಗಳಲ್ಲಿ ಏಕಮುಖ ಮಾರ್ಗದಲ್ಲಿ ಸಂಚರಿಸಬೇಕು. ಸಂಜೆ 5ರಿಂದ ಕಾರ್ಯಕ್ರಮ ಮುಗಿಯುವವರೆಗೆ ನ್ಯೂ ಆರ್‌ಟಿಒ-ಕುಸನೂರವರೆಗೆ ಏಕಮುಖವಾಗಿ ಸಾಗಬೇಕು’ ಎಂದರು.

‘ಕಾರ್ಯಕ್ರಮ ವ್ಯಾಪ್ತಿಯಲ್ಲಿ 50 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 700 ಪೊಲೀಸ್ ಸಿಬ್ಬಂದಿ, 550 ಹೋಮ್‌ ಗಾರ್ಡ್ ಇರಲಿದ್ದಾರೆ. ಜೇಬು ಕಳವು, ಮೊಬೈಲ್ ಕಳತನ ತಡೆಗೆ ಪೊಲೀಸರನ್ನು ಮಫ್ತಿಯಲ್ಲಿ ನಿಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘4000 ಮಂದಿಗೆ ಊಟದ ವ್ಯವಸ್ಥೆ’

‘ಉತ್ಸವದಲ್ಲಿ ತೊಡಗುವ ಆಯೋಜಕರು, ಭದ್ರತಾ ಸಿಬ್ಬಂದಿ, ಕಲಾವಿದರು ಸೇರಿ ಇತರರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಊಟ ನೀಡುವ ಬಗ್ಗೆ ಸ್ಪಷ್ಟವಾಗಿ ಹೇಳಿಲ್ಲ’ ಎಂದು ಅಡುಗೆ ತಯಾರಕರು ಹೇಳಿದರು. ‘ಮೊದಲ ದಿನದ ಉಪಾಹಾರ ಮತ್ತು ಮಧ್ಯಾಹ್ನ ಊಟವನ್ನು 2 ಸಾವಿರ ಮಂದಿಗೆ ನೀಡಲಾಗುವುದು. ರಾತ್ರಿಗೆ 4 ಸಾವಿರ ಜನರಿಗಾಗಿ ಊಟ ತಯಾರಿಸುವಂತೆ ಸೂಚಿಸಿದ್ದಾರೆ. ಮುಂದಿನ ಎರಡು ದಿನಗಳ ಅಡುಗೆ ತಯಾರಿಕೆ ಬಗ್ಗೆ ಏನೂ ಹೇಳಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT