ಗುರುವಾರ , ನವೆಂಬರ್ 21, 2019
26 °C
ಕಲಬುರ್ಗಿಯ ಅಂಬೇಡ್ಕರ್‌ ಕಾಲೇಜಿನ ಕಿಕ್ಕಿರಿದ ಮೈದಾನದಲ್ಲಿ ಕನ್ಹಯ್ಯಕುಮಾರ್‌ ಉಪನ್ಯಾಸ

ಅರ್ಥಶಾಸ್ತ್ರದ ನೊಬೆಲ್ ಪಡೆದವರಿಗೆ ‘ದೇಶದ್ರೋಹಿ’ ಪಟ್ಟ!

Published:
Updated:
Prajavani

ಕಲಬುರ್ಗಿ: ಪ್ರಧಾನಿ ಹಾಗೂ ಅವರ ಹಿಂಬಾಲಕರ ದೃಷ್ಟಿಯಲ್ಲಿ ’ದೇಶದ್ರೋಹಿ‘ ಎನಿಸಿಕೊಂಡಿರುವ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಬರುತ್ತದೆ. ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರಾಗಿರುವ ಬ್ಯಾನರ್ಜಿ ಅವರು ಸರ್ಕಾರವೇ ನಡೆಸುತ್ತಿರುವ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಹೆಮ್ಮೆಯ ಪ್ರತಿಭೆ ಎಂದು ಸಿಪಿಐ ಮುಖಂಡ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಅಭಿಪ್ರಾಯಪಟ್ಟರು.

ನಗರದ ಶ್ರೀನಿವಾಸ ಗುಡಿ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಉಪನ್ಯಾಸದಲ್ಲಿ ‘ಸಂವಿಧಾನ ರಕ್ಷಣೆಯಲ್ಲಿ ಯುವಕರ ಪಾತ್ರ’ ಕುರಿತು ಉಪನ್ಯಾಸ ನೀಡಿದ ಅವರು, ‘ಮೋದಿ ಅವರ ಟೀಕಾಕಾರರನ್ನು ದೇಶದ್ರೋಹಿಗಳು ಎಂದು ಕರೆಯುವ ಪರಿಪಾಠವನ್ನು ಅವರ ಅನುಯಾಯಿಗಳು ರೂಢಿಸಿಕೊಂಡಿದ್ದಾರೆ. ಸರ್ಕಾರದ ವಾಸ್ತವಾಂಶಗಳನ್ನು ಬಿಚ್ಚಿಡುವ ಪತ್ರಕರ್ತ ರವೀಶ್‌ಕುಮಾರ್‌ ಅವರಿಗೆ ಮ್ಯಾಗ್ಸೆಸ್ ಪ್ರಶಸ್ತಿ ಬಂತು. ಆದರೆ, ಅವರನ್ನೂ ಮೋದಿ ಅನುಯಾಯಿಗಳು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಬಹುತೇಕ ಇಂತಹ ಉತ್ತಮ ಪ್ರತಿಮೆಗಳು ಬೆಳೆದಿದ್ದು ಸರ್ಕಾರ ತೆರೆದ ವಿಶ್ವವಿದ್ಯಾಲಯಗಳಿಂದ. ಆದರೆ, ಈಗ ಏನಿದ್ದರೂ ವಾಟ್ಸ್ಆ್ಯಪ್‌ ಯೂನಿವರ್ಸಿಟಿಯದ್ದೇ ಕಾರುಬಾರು. ಆಳುವ ಪಕ್ಷದ ಪರ ಅಭಿಪ್ರಾಯ ರೂಪಿಸುವ ಈ ಐಟಿ ಸೆಲ್‌ಗಳು ಜನರ ಕಣ್ಣಿನಲ್ಲಿ ಮಣ್ಣೆರಚುತ್ತವೆ. ಹೀಗಾಗಿ, ಸರ್ಕಾರ ಸ್ಥಾಪಿಸಿದ ಗುಲಬರ್ಗಾ ವಿಶ್ವವಿದ್ಯಾಲಯ, ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯಗಳಂತಹ ವಿ.ವಿ.ಗಳನ್ನು ಉಳಿಸಿಕೊಳ್ಳಬೇಕಿದೆ’ ಎಂದರು.

‘ಅಂಬಾನಿ ಮಕ್ಕಳು ಹಾಗೂ ಬಡವರ ಮಕ್ಕಳು ಒಂದೇ ಶಾಲೆಯಲ್ಲಿ ಏಕೆ ಓದುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಒಂದೇ ಶಾಲೆಯಲ್ಲಿ ಓದುವ ವಾತಾವರಣ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ಭಾರತದ ಸಂವಿಧಾನ ನೀಡಿದ ಅವಕಾಶವನ್ನು ಬಳಸಿಕೊಂಡು ಹೆಚ್ಚು ಹೆಚ್ಚು ವಿಶ್ವವಿದ್ಯಾಲಯಗಳನ್ನು ಸರ್ಕಾರ ಸ್ಥಾಪಿಸಬೇಕು ಎಂದು ಒಟ್ಟಾಗಿ ಒತ್ತಡ ಹೇರಬೇಕು’ ಎಂದು ಸಲಹೆ ನೀಡಿದರು.

ಮೋದಿ ಬಡವ ಎಂದು ಬಿಂಬಿಸಲು ಕೋಟ್ಯಂತರ ವೆಚ್ಚ: ನರೇಂದ್ರ ಮೋದಿ ಅವರನ್ನು ಬಡವ ಎಂದು ಬಿಂಬಿಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಪ್ರಧಾನಿಯ ಪ್ರಚಾರಕ್ಕೆ ನಮ್ಮ ತೆರಿಗೆ ಹಣ ಬಳಕೆಯಾಗುತ್ತಿದೆ ಎಂದು ಟೀಕಿಸಿದರು.

ಮೋದಿ ಅನಿವಾರ್ಯ ಹೇಗೆ?

2014ರಲ್ಲಿ ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದಿದ್ದ ಮೋದಿ ಅವರು ವಿದೇಶದಲ್ಲಿನ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ತರುವುದಾಗಿ ಭರವಸೆ ನೀಡಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿಯೂ ಹೇಳಿದ್ದರು. 2019ರ ಚುನಾವಣೆಯಲ್ಲಿ ಹಳೆಯ ಭರವಸೆ ಈಡೇರಿಸಲಿಲ್ಲ ಎಂದು ಮತದಾರರು ಪ್ರಶ್ನಿಸತೊಡಗಿದರು. ಈ ವೈಫಲ್ಯವನ್ನು ಒಪ್ಪಿಕೊಂಡ ಬಿಜೆಪಿ ಕಾರ್ಯಕರ್ತರು ಹಾಗಿದ್ದರೆ ಮೋದಿ ಬಿಟ್ಟು ಪರ್ಯಾಯ ಯಾರಿದ್ದಾರೆ ಎಂದು ಪ್ರಶ್ನಿಸಿದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ, 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ ಮೋದಿ ಅವರ ಪರ್ಯಾಯ ಹಲವು ಜನರಿದ್ದಾರೆ’ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಆರ್‌.ಕೆ.ಹುಡಗಿ, ‘ಅನ್ನ, ಆಹಾರ, ನೀರಿಗೆ ಬರ ಬಂದಿದ್ದರೆ ಏನಾದರೂ ಪರಿಹಾರ ನೀಡಬಹುದು. ಆದರೆ ಇದೀಗ ಮನುಷ್ಯತ್ವಕ್ಕೆ ಬರ ಬಂದಿದೆ. ಸಂವಿಧಾನದ ರಕ್ಷಣೆಯಿಂದ ಭಾರತದ ಬದುಕು ಬದಲಾಗಬಹುದು. ಸಂವಿಧಾನದ ಮೂಲಕ ಚುನಾಯಿತರಾದ ಜನರು ಸಂವಿಧಾನದ ಕೊಲೆ ನಡೆಸಿದ್ದಾರೆ. ಕಲಬುರ್ಗಿಯಿಂದ ಶಾಂತಿ, ಸೌಹಾರ್ದತೆಯ ಸಂದೇಶ ನೀಡಬೇಕು’ ಎಂದರು.

ಸಹಸ್ರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹತ್ತಿಕ್ಕಿದಷ್ಟೂ ಪುಟಿಯುತ್ತದೆ!

ಗುಲಬರ್ಗಾ ವಿಶ್ವವಿದ್ಯಾಲಯವು ತಮ್ಮ ಉಪನ್ಯಾಸವನ್ನು ರದ್ದುಗೊಳಿಸಿದ್ದರ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕನ್ಹಯ್ಯಕುಮಾರ್‌, ‘ಕುಲಪತಿಯವರಿಗೆ ಭೌತವಿಜ್ಞಾನದ ಮೂಲ ತತ್ವ ಗೊತ್ತಿಲ್ಲ ಎನಿಸುತ್ತದೆ. ಯಾವುದನ್ನೇ ಆದರೂ ಹತ್ತಿಕ್ಕಲು ಯತ್ನಿಸಿದಷ್ಟೂ ಪುಟಿಯುತ್ತದೆ. ವಿ.ವಿ.ಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುವುದನ್ನು ತಡೆಯಬಹುದು. ಆದರೆ, ನನ್ನ ಭಾಷಣ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರವಾಗುತ್ತಿದೆ. ಯೂಟ್ಯೂಬ್‌ ಮೂಲಕ ಇಡೀ ಹಿಂದುಸ್ತಾನವನ್ನು ತಲುಪುತ್ತದೆ. ಇದಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆಯೇ ಎಂದು ಕುಟುಕಿದರು.

ಪ್ರತಿಕ್ರಿಯಿಸಿ (+)