ಭಾನುವಾರ, ನವೆಂಬರ್ 17, 2019
28 °C
ಇಂದು ಸಿಂಡಿಕೇಟ್‌ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿರುವ ಗುಲಬರ್ಗಾ ವಿ.ವಿ.

ಕನ್ಹಯ್ಯ ಉಪನ್ಯಾಸಕ್ಕೆ ಅನುಮತಿ ನೀಡದಂತೆ ಒತ್ತಡ

Published:
Updated:

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್‌ ಅಧ್ಯಯನ ಸಂಸ್ಥೆಯಲ್ಲಿ ಅ.15ರಂದು ಸಿಪಿಐ ಮುಖಂಡ, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಅವರು ಉಪನ್ಯಾಸ ನೀಡುವ ಕಾರ್ಯಕ್ರಮಕ್ಕೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯುವಂತೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮೇಲೆ ಬಿಜೆಪಿ ಹಾಗೂ ಶ್ರೀರಾಮ ಸೇನೆಯವರು ಒತ್ತಡ ಹೇರುತ್ತಿದ್ದಾರೆ.

ಇದರಿಂದ ಪೇಚಿಗೆ ಸಿಲುಕಿರುವ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಅವರು ಅ.14ರಂದು ಬೆಳಿಗ್ಗೆ ಸಿಂಡಿಕೇಟ್‌ ಸಭೆ ಕರೆದಿದ್ದಾರೆ.

‘ಕನ್ಹಯ್ಯಕುಮಾರ್‌ ಅವರಿಗೆ ವಿಶ್ವವಿದ್ಯಾಲಯದ ಅಂಬೇಡ್ಕರ್‌ ಅಧ್ಯಯನ ವಿಭಾಗವೇ ಆಹ್ವಾನಿಸಿದೆ. ಈ ಸಂಬಂಧ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಂತದಲ್ಲಿ ಪ್ರಭಾವಿ ಮುಖಂಡರ ಮಾತು ಕೇಳಿ ಕಾರ್ಯಕ್ರಮಕ್ಕೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ’ ಎಂದು ವಿ.ವಿ. ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಪ್ರಭಾವಿ ಸಂಸದರೊಬ್ಬರು ವಿ.ವಿ.ಯ ಪ್ರಾಧ್ಯಾಪಕ ಪ್ರೊ.ಎಸ್‌.ಕೆ.ಮೇಲಕೇರಿ ಅವರಿಗೆ ಕರೆ ಮಾಡಿ ಕಾರ್ಯಕ್ರಮ ರದ್ದುಗೊಳಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕನ್ಹಯ್ಯ ಅವರಿಗೆ ಆಹ್ವಾನ ನೀಡಿದ್ದನ್ನು ವಾಪಸ್‌ ಪಡೆಯಬೇಕು ಎಂದು ಶ್ರೀರಾಮಸೇನೆಯೂ ಒತ್ತಾಯಿಸಿದೆ.

ಕಾರ್ಯಕ್ರಮ ಸಂಘಟಿಸಿದ ಮೇಲೆ ಅದನ್ನು ನಡೆಸಲೇಬೇಕು ಎಂದು ಪಟ್ಟು ಹಿಡಿದಿರುವ ವಿ.ವಿ. ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದವರು ಪರಿಮಳಾ ಅಂಬೇಕರ್‌ ಅವರನ್ನು ಭಾನುವಾರ ಭೇಟಿ ಮಾಡಿ ಕಾರ್ಯಕ್ರಮ ನಡೆಸುವಂತೆ ಒತ್ತಾಯಿಸಿದರು.

‘ಕನ್ಹಯ್ಯ ಕುಮಾರ್‌ ಉಪನ್ಯಾಸವನ್ನು ನಡೆಸಬೇಕೋ ಬೇಡವೋ ಎಂಬ ನಿರ್ಣಯವನ್ನು ಸೋಮವಾರ (ಅ 14) ಸಿಂಡಿಕೇಟ್‌ ಸಭೆಯ ಬಳಿಕ ತಿಳಿಸುತ್ತೇವೆ’ ಎಂದು ಪ್ರೊ.ಅಂಬೇಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)