ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹುಭಾಷಿಕ ಭಾರತವನ್ನು ಕೇಂದ್ರ ಪುರಸ್ಕರಿಸಲಿ’

ಕನ್ನಡ ಮಾಧ್ಯಮದಲ್ಲಿ ಓದು ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರಾಧಿಕಾರದಿಂದ ಬಹುಮಾನ
Last Updated 23 ಜೂನ್ 2019, 10:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಉತ್ಸಾಹದಿಂದ ಕಾರ್ಯೋನ್ಮುಖವಾಗಿರುವ ಕೇಂದ್ರ ಸರ್ಕಾರವು ಭಾರತದ ಬಹುಭಾಷಿಕ ಸೊಗಡನ್ನು ಗೌರವಿಸಲಿ. ಆ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಗ್ರಹಿಸಿದರು.

ನಗರದ ಎಸ್‌.ಎಂ.ಪಂಡಿತ್‌ ರಂಗಮಂದಿರದಲ್ಲಿ ಭಾನುವಾರ ಕನ್ನಡದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳಿಸಿದ ಕಲಬುರ್ಗಿ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಮಾಧ್ಯಮ ಪ್ರಶಸ್ತಿ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರವು ಏಕರೂಪದ ಶಿಕ್ಷಣದ ವರದಿಯನ್ನು ಪ್ರಕಟಿಸಿದ್ದು, ಅದಕ್ಕೆ ಜುಲೈ 31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಭಾರತ ಸರ್ಕಾರವು ಸ್ಥಳೀಯ ಭಾಷೆಯಲ್ಲಿಯೂ ಶಿಕ್ಷಣ ನೀಡುವ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ಹಾಗಾಗಿ, ಪ್ರತಿಕ್ರಿಯೆ ನೀಡಲು ನೀಡಿದ ಗಡುವನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.‌

‘ವಲಸೆ ಸ್ವಾಗತಾರ್ಗ. ಆದರೆ, ಅದು ಅತಿಕ್ರಮಣವಾಗಬಾರದು. ಕೊಡುಕೊಳ್ಳುವಿಕೆಯ ಸೌಹಾರ್ದದಂತೆ ಇದು ನಡೆಯಬೇಕು’ ಎಂದರು.

ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ಬರೆಯಲು ಕೇಂದ್ರ ಅವಕಾಶ ನೀಡುವ ಮೂಲಕ ಪ್ರಾದೇಶಿಕ ಭಾಷೆ ಮಾತನಾಡುವವರ ಬಗ್ಗೆ ಸಹಾನುಭೂತಿ ತೋರಿಸಬೇಕು. ಕನ್ನಡ ಭಾಷೆಯ ಬಗ್ಗೆ ಹಿಂದಿನ ಸರ್ಕಾರ ಬದ್ಧತೆಯನ್ನು ಉಳಿಸಿಕೊಂಡು ಬಂದಿತ್ತು ಎನ್ನುವ ಮೂಲಕ ಪ್ರಸ್ತುತ ಮೈತ್ರಿ ಸರ್ಕಾರ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಭಾಷೆಯನ್ನು ಜಾರಿಗೆ ತಂದಿರುವ ಕ್ರಮವನ್ನು ಪರೋಕ್ಷವಾಗಿ ಟೀಕಿಸಿದರು.

ಸಾಹಿತಿ ಡಾ.ವೀರಣ್ಣ ದಂಡೆ ಮಾತನಾಡಿ, ‘ಒಂದು ಕಾಲಕ್ಕೆ ಉರ್ದು ಹಾಗೂ ಹಿಂದಿ ಪ್ರಧಾನವಾಗಿದ್ದ ಕಲಬುರ್ಗಿ ಸೀಮೆಯಲ್ಲಿ ಇಂದು ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಜೇವರ್ಗಿ ಹಾಗೂ ಅಫಜಲಪುರ ಭಾಗದ ಮುಸ್ಲಿಂ ಸಮುದಾಯದವರೂ ಕನ್ನಡವನ್ನು ನಿರರ್ಗಳವಾಗಿ ಮಾತನಾಡುವುದನ್ನು ನೋಡಿದರೆ ಖುಷಿಯಾಗುತ್ತದೆ. ಆದರೆ, ನಗರದ ಬ್ರಹ್ಮಪುರದ ಕೆಲವೆಡೆ ಕನ್ನಡ ಕಲಿಯಲು ಉದ್ದೇಶಪೂರ್ವಕ ತಾತ್ಸಾರ ಮಾಡುತ್ತಿದ್ದಾರೆ‌’ ಎಂದು ವಿಷಾದಿಸಿದರು.

1830ರಲ್ಲಿ ದೊಡ್ಡಪ್ಪ ಅಪ್ಪ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಅಹರ್ನಿಶಿ ಶ್ರಮಿಸಿದರು. ತಮ್ಮ ಹಣವನ್ನೇ ಖರ್ಚು ಮಾಡಿದರು. ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಊರೂರು ತಿರುಗಾಡಿ ಮಕ್ಕಳನ್ನು ಶಿಕ್ಷಣ ಕಲಿಸಲು ಕರೆತಂದರು. ಹೊರಗಡೆ ಉರ್ದು ಫಲಕ ಹಾಕಿಕೊಂಡು ಒಳಗೆ ಕನ್ನಡ ಕಲಿಸುತ್ತಿದ್ದರು’ ಎಂದು ಸ್ಮರಿಸಿದರು.

‘ಗುಲಬರ್ಗಾ ಹೆಸರನ್ನು ಕಲಬುರ್ಗಿ ಎಂದು ಬದಲಾಯಿಸಲಾಗಿದೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯ ಮಾತ್ರ ತನ್ನ ಹೆಸರನ್ನು ಬದಲಿಸಿಕೊಂಡಿಲ್ಲ. ಇದಕ್ಕೆ ಅಗತ್ಯವಾದ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹೊರಡಿಸಬೇಕು’ ಎಂದು ವೀರಣ್ಣ ದಂಡೆ ಒತ್ತಾಯಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಲೇಖಕಿ ಡಾ.ಜಯಶ್ರೀ ದಂಡೆ, ಕನ್ನಡವೆಂದರೆ ಸಂಸ್ಕೃತಿ, ಉಸಿರು. ಇಂತಹ ಕನ್ನಡದ ಬಗ್ಗೆ ಇಲ್ಲಿಯೇ ಇದ್ದು ತಾತ್ಸಾರ ಮಾಡುವ ಕೃತಘ್ನರೂ ಇದ್ದಾರೆ. ಇಂಥವರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

‘ಕನ್ನಡ ಭಾಷೆಗೆ ಸವಾಲುಗಳು ಎದುರಾದಾಗ ಅವುಗಳನ್ನು ನಿವಾರಿಸಿ ಕನ್ನಡದ ಅಸ್ಮಿತೆಯನ್ನು ಉಳಿಸಿದವರು, ಈ ಭಾಷೆಗೆ ಕೀರ್ತಿ ತಂದವರು ವಚನಕಾರರು’ ಎಂದು ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ಓದುವ ಸಮಯದಲ್ಲೇ ಚೆನ್ನಾಗಿ ಓದಿ ಉತ್ತಮ ಅಂಕ ಗಳಿಸಿದರೆ ಉನ್ನತ ಹುದ್ದೆಗೆ ಏರಬಹುದು’ ಎಂದರು.

ಪಿಯುಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿ ರಮೇಶ್‌ ಎಸ್‌.ವಿ. ಸೇರಿದಂತೆ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT