ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಕಾಯ್ದೆಗಳ ಮಾಹಿತಿ, ಅನುಷ್ಠಾನ ಕೌಶಲ ಬೆಳೆಸಿಕೊಳ್ಳಿ’

ವಕೀಲರ ದಿನಾಚರಣೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ವೈ. ಅರುಣ್‌ ಸಲಹೆ
Last Updated 4 ಡಿಸೆಂಬರ್ 2021, 2:56 IST
ಅಕ್ಷರ ಗಾತ್ರ

ಕಲಬುರಗಿ: ‘ಹೊಸ ಕಾಯ್ದೆ, ಕಾನೂನುಗಳ ಸೂಕ್ತ ಮಾಹಿತಿ ಹಾಗೂ ಅನುಷ್ಠಾನದ ಕೌಶಲವನ್ನು ವಕೀಲರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಕಕ್ಷಿದಾರರಿಗೆ ಪ‍ರಿಪೂರ್ಣ ನ್ಯಾಯ ದೊರಕಿಸುವುದು ಸುಲಭವಾಗುತ್ತದೆ’ ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ವೈ. ಅರುಣ್‌ ಅವರು ಸಲಹೆ ನೀಡಿದರು.

ಭಾರತದ ಪ್ರಥಮ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್‌ ಅವರ ಜನ್ಮದಿನದ ಸ್ಮರಣಾರ್ಥ ಗುಲಬರ್ಗಾ ಬಾರ್‌ ಅಸೋಸಿಯೇಷನ್‌ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಕೀಲರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಸಾಮಾಜಿಕ ವ್ಯಾಜ್ಯಗಳು ಸಂಕೀರ್ಣವಾಗುತ್ತ ಹೋಗುವ ಇಂದಿನ ದಿನಗಳಲ್ಲಿ ವಕೀಲರು ತಮ್ಮ ಜವಾಬ್ದಾರಿ ಅರಿಯಬೇಕಿದೆ. ಪ್ರಕರಣದ ಸೂಕ್ಷ್ಮತೆ ಅರಿತು ಕೆಲಸ ನಿರ್ವಹಿಸಿದರೆ ನೊಂದವರಿಗೆ ನ್ಯಾಯ ದೊರಕಿಸುವುದು ಸಾಧ್ಯವಾಗುತ್ತದೆ’ ಎಂದೂ ಅವರು ಕಿವಿಮಾತು ಹೇಳಿದರು.

‘ವಕೀಲಿ ವೃತ್ತಿ ಆಯ್ದುಕೊಂಡ ಮೇಲೆ ಸಮಾಜದಲ್ಲಿ ವಿಶ್ವಾಸ ಬೆಳೆಸಿಕೊಳ್ಳುವುದು ಮುಖ್ಯ. ಕೇವಲ ಕಕ್ಷಿದಾರರು ಮಾತ್ರವಲ್ಲ; ಇಡೀ ಸಮಾಜದಲ್ಲಿ ನಿಮ್ಮ ಬಗೆಗಿನ ವಿಶ್ವಾಸಕ್ಕೆ ಕುಂದು ಬಾರದಂತೆ ನಡೆದುಕೊಳ್ಳಿ. ಜನಸಾಮಾನ್ಯರ ಧ್ವನಿಯಾಗಿ ಕೆಲಸ ನಿರ್ವಹಿಸಿ. ನಿಮ್ಮಲ್ಲಿನ ಪ್ರಾಮಾಣಿಕ ಹೋರಾಟವೇ ನ್ಯಾಯಾಂಗ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ’‌ ಎಂದರು.‌

‘ಕಲಬುರಗಿ ಜಿಲ್ಲೆಯ ವಕೀಲರು ಕೂಡ ಬೆಂಗಳೂರಿನಂಥ ದೊಡ್ಡ ನಗರದ ವಕೀಲರಷ್ಟೇ ಬುದ್ಧಿಶಾಲಿ, ಕೌಶಲ ಉಳ್ಳವರು ಆಗಿದ್ದಾರೆ. ವಕೀಲರಾದ ಮೇಲೆ ಇದೇ ವೃತ್ತಿ ನಂಬಿ ಹೊಟ್ಟೆ ತುಂಬಿಸಿಕೊಳ್ಳಬೇಕೆಂದೇನಿಲ್ಲ. ಕೋರ್ಟಿನ ಆಚೆಗೂ ಸಮಾಜದಲ್ಲಿ ನಿಮಗಾಗಿ ಸಾಕಷ್ಟು ಹುದ್ದೆಗಳು, ಜವಾಬ್ದಾರಿಗಳು ಕಾದು ಕುಳಿತಿವೆ. ಯಾವುದರಲ್ಲಿ ನಿಮ್ಮ ಪ್ರಜ್ಞೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಮುಂದಡಿ ಇಡಿ’‌ ಎಂದೂ ಸಲಹೆ ನೀಡಿದರು.

ಕರ್ನಾಟಕ ಹೈಕೋರ್ಟ್‌ನ ಇನ್ನೊಬ್ಬ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರು ಮಾತನಾಡಿ, ‘ವಕೀಲರು ಪ್ರತಿಯೊಂದು ವಿಷಯದಲ್ಲಿ ಪಾಂಡಿತ್ಯ ಸಾಧಿಸುವ ಜತೆಗೆ ಸಾಮಾಜಿಕ ಬದ್ಧತೆ, ದೇಶಾಭಿಮಾನ, ಕಾನೂನಿಗೆ ಗೌರವ, ಸಂವಿಧಾನಕ್ಕಿರುವ ಮಹತ್ವ ಹಾಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸವನ್ನೂ ಮಾಡಬೇಕು’ ಎಂದು ಕರೆ ನೀಡಿದರು.

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದರಾಜೇಂದ್ರ ಬಾದಾಮಿಕರ್, ಆರ್.ದೇವದಾಸ, ಎಚ್.ಪಿ. ಸಂದೇಶ ಅವರೂ ಮಾತನಾಡಿ ವಕೀಲರಿಗೆ ಸಲಹೆ– ಸೂಚನೆ ನೀಡಿದರು. ಗುಲಬರ್ಗಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಎಸ್. ಕಡಗಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಸುಬ್ರಮಣ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ ವೇದಿಕೆ
ಮೇಲಿದ್ದರು.‌

ಸಂಘದ ಉಪಾಧ್ಯಕ್ಷೆ ಫತ್ರುಬಿ ಕಾಶಿಮಿಯಾ ಸ್ವಾಗತಿಸಿದರು. ವಿದ್ಯಾರಾಣಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ದೇವನಾಥ ಮಳಗಿ, ಖಜಾಂಚಿ ವಿಶ್ವಾರಾಧ್ಯ ಇಜೇರಿ, ಅರುಂಧತಿ, ಪ್ರೇಮಾ, ರೇಣುಕಾ ಹಾಗೂ ಹಲವು ವಕೀಲರು ಹಾಜರಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT