ಶುಕ್ರವಾರ, ಜನವರಿ 27, 2023
25 °C

ಜೆಡಿಎಸ್‌ ದುಡ್ಡಿನ ರಾಜಕೀಯ ಮಾಡುತ್ತಿಲ್ಲ, ಜನರಿಗೆ ಹಣ ಕೊಟ್ಟಿಲ್ಲ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಜಾತ್ಯತೀತ ಜನತಾದಳ ಪಕ್ಷವು ದುಡ್ಡನ್ನು ಆಧಾರವಾಗಿಸಿಕೊಂಡು ರಾಜಕೀಯ ಮಾಡುತ್ತಿಲ್ಲ. ಒಂದು ವರ್ಷದಿಂದ ಎಚ್‌.ಡಿ.ಕುಮಾರಸ್ವಾಮಿ ಅವರು ಜಲಧಾರೆ, ಪಂಚರತ್ನ ಕಾರ್ಯಕ್ರಮ ಮಾಡುತ್ತಿದ್ದು, ಇವುಗಳಿಗೆ ದುಡ್ಡು ಕೊಟ್ಟು ಜನರನ್ನು ಕರೆತರುತ್ತಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ದುಡ್ಡಿನ ರಾಜಕೀಯ ಮಾಡುತ್ತಿದ್ದರೆ ಪಂಚರತ್ನ ಯಾತ್ರೆ ಮಾಡುತ್ತಿರಲಿಲ್ಲ. ಕಳೆದ ಬಾರಿ ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ದುಡ್ಡಿದೆ ಎಂದು ಹಾಗೆ ಹೇಳಿರಲಿಲ್ಲ. ಬದಲಾಗಿ, ರೈತರ ನೆರವಿಗೆ ಬರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದರು’ ಎಂದರು.

ಬಿಜೆಪಿ ರೌಡಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಕುರಿತು ಹಾಗೂ ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ಟಿಕೆಟ್ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ವಕ್ಫ್‌ ಮಂಡಳಿಯಿಂದ ಕಾಲೇಜು ಆರಂಭ ಮಾಡಬಾರದು ಅಂತೇನಿಲ್ಲ. ಐದು ತಿಂಗಳಲ್ಲಿ ಈ ಸರ್ಕಾರ ಹೋಗುತ್ತದೆ. ನಾವು ಅಧಿಕಾರಕ್ಕೆ ಬರುತ್ತೇವೆ. ಆಗ ಹೊಸ ಕಾಲೇಜು ಆರಂಭ ಮಾಡುತ್ತೇವೆ. ಮಂಡಳಿಯಿಂದ ಕೇವಲ ಮುಸ್ಲಿಮರಿಗೆ ಕಾಲೇಜು ಮಾಡುವುದು ತಪ್ಪು. ವಿದ್ಯಾದಾನ ಶ್ರೇಷ್ಠಧಾನ, ಅಲ್ಲಿ ಹಿಂದು –ಮುಸ್ಲಿಂ ಅಂತ ಭೇದ ಭಾವ ಮಾಡುವುದು ಸರಿಯಲ್ಲ. ಕಾಂಗ್ರೆಸ್–ಬಿಜೆಪಿಯವರು ತಮ್ಮ ಮನೆಗೆ ಯಾವ ರೌಡಿಗಳನ್ನು ಬೇಕಾದರೂ ಸೇರಿಸಿಕೊಳ್ಳಲಿ. ನಮ್ಮ ಪಕ್ಷಕ್ಕೆ ಯಾರೂ ರೌಡಿಗಳು ಬರೋದಿಲ್ಲ. ಬಿಜೆಪಿ ಸಮಾಜ ಒಡೆಯುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ’ ಎಂದರು.

‘ಡಿಸೆಂಬರ್ ತಿಂಗಳಲ್ಲಿ ಮೊದಲ ಹಂತದ ಟಿಕೆಟ್ ಘೋಷಣೆ ಮಾಡುತ್ತೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನವೇ ನಮ್ಮ ತೀರ್ಮಾನ. ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರೇ ಇದ್ದಾರೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು