ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರಕ್ಕಾಗಿಯೇ ಕಾಯ್ದೆಗಳ ತಿದ್ದುಪಡಿ: ಈಶ್ವರ ಖಂಡ್ರೆ

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಕಿಡಿ
Last Updated 13 ಜನವರಿ 2021, 10:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ಬೃಹತ್‌ ಪ್ರಮಾಣದ ಬ್ರಷ್ಟಾಚಾರಕ್ಕೆ ಸರ್ಕಾರವೇ ಕೈ ಹಾಕಿದೆ. ರೈತರನ್ನು ಹರಾಜು ಹಾಕುವ ಎಲ್ಲ ಪ್ರಯತ್ನಗಳನ್ನೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಕಿಡಿ ಕಾರಿದರು.

‘ಪ್ರಮುಖ ಕಾಯ್ದೆಗಳನ್ನು ತಿರುಚಿ ಜನವಿರೋಧಿ, ರೈತ ವಿರೋಧಿಯಾಗಿ ತಿದ್ದುಪಡಿ ಮಾಡುವ ಮೂಲಕ ದೇಶವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೂ ಬೆಲೆ ಕೊಡುತ್ತಿಲ್ಲ. ಹೋರಾಟ ನಿರತ 60 ರೈತರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಕಣ್ಣು ತೆರೆದು ನೋಡಿಲ್ಲ. ಇವರಿಗೆ ಹೃದಯವೇ ಇಲ್ಲ’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಒಂದೂ ದೊಡ್ಡ ಯೋಜನೆ ಪ್ರಕಟಿಸಿಲ್ಲ. ಒಂದೂ ನೀರಾವರಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ತೊಗರಿಗೆ ಸರಿಯಾದ ಬೆಂಬಲ ಬೆಲೆ ಅಥವಾ ಪ್ರೋತ್ಸಾಹ ಧನ ನೀಡುತ್ತಿಲ್ಲ. ಒಂದೇ ವರ್ಷದಲ್ಲಿ ಮೂರು ಬಾರಿ ಪ್ರವಾಹ ಬಂದು ರೈತರು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಬಿಡಿಗಾಸಿನ ಪರಿಹಾರ ನೀಡಿಲ್ಲ. ಒಂದು ಕೆಡಿಪಿ ಸಭೆಯನ್ನೂ ಕರೆದಿಲ್ಲ’ ಎಂದು ಕಿಡಿ ಕಾರಿದರು.

ಕೆಕೆಆರ್‌ಡಿಬಿ ನಿಷ್ಕ್ರಿಯ: ‘ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿ ಒಂದೂವರೆ ವರ್ಷ ಕಳೆದಿದೆ. ಬಿಡಿಗಾಸನ್ನೂ ಈ ಭಾಗದ ಕಲ್ಯಾಣಕ್ಕೆ ನೀಡಿಲ್ಲ. ಕೆಕೆಆರ್‌ಡಿಬಿಗೆ ಐವರು ಶಾಸಕರು, ಸಂಸದ ಹಾಗೂ ಮೇಯರ್‌ ಸೇರಿದ ಒಂದು ಸಮಿತಿ ನೇಮಿಸಬೇಕು ಎಂಬುದು ನಿಯಮ. ಸರ್ಕಾರ ಅದನ್ನೂ ಮಾಡಿಲ್ಲ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಒಟ್ಟು ₹ 7000 ಕೋಟಿ ಅನುದಾನ ನೀಡಿದ್ದಾರೆ. ಆಗಿನ ಯೋಜನೆಗಳನ್ನೇ ಈಗಿನವರು ಹೇಳಿಕೊಳ್ಳುತ್ತ ನಡೆದಿದ್ದಾರೆ. ಬರೀ ಮಾತನಾಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಈ ಭಾಗಕ್ಕೆಇವರ ಕೊಡುಗೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಅಥವಾ ಬಹಿರಂಗ ಸಭೆ ಕರೆಯಲಿ’ ಎಂದು ಸವಾಲು ಹಾಕಿದರು.

ಗಾಳಿಯಲ್ಲಿ ಗುಂಡು: ‘ಕಾಂಗ್ರೆಸ್‌ ಇನ್ನೂ ಯಾವತ್ತೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಜಗದೀಶ ಶೆಟ್ಟ ಹೇಳಿದ್ದಾರೆ. ಇವರೆಲ್ಲ ಭ್ರಮಾ ಲೋಕದಲ್ಲಿದ್ದಾರೆ. ಅದರಿಂದ ಹೊರಬರಬೇಕು. ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಶೆಟ್ಟರ ಬಿಡಬೇಕು’ ಎಂದು ಖಂಡ್ರೆ ಲೇವಡಿ ಮಾಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ 65ರಷ್ಟು ಸ್ಥಾನಗಳನ್ನು ಕಾಂಗ್ರೆಸ್‌ ಬೆಂಬಲಿತರೇ ಗೆದ್ದಿದ್ದಾರೆ. ಆದರೆ, ಬಿಜೆಪಿ ಮುಖಂಡರು ತಾವೇ ಬಲ ಸಾಧಿಸಿದ್ದಾಗಿ ಸುಳ್ಳು ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್‌ ಬೇರುಗಳು ಈಗಲೂ ಹಳ್ಳಿಗಳಲ್ಲಿ ಗಟ್ಟಿಯಾಗಿವೆ ಎಂಬುದಕ್ಕೆ ಈ ಚುನಾವಣೆಯೇ ಸಾಕ್ಷಿ’ ಎಂದರು.

18ರಂದು ವಿಭಾಗ ಮಟ್ಟದ ಸಂಕಲ್ಪ ಸಮಾವೇಶ

ಕಲಬುರ್ಗಿ: ‘ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಗಟ್ಟಿಗೊಳಿಸಲು ಕಲ್ಯಾಣ ಕರ್ನಾಟಕ ಭಾಗದ ‘ಸಂಕಲ್ಪ’ ಸಮಾವೇಶ ಜ. 18ರಂದು ನಗರದ ಜೈ ಭವಾನಿ ಸಭಾಂಗಣದಲ್ಲಿ ನಡೆಯಲಿದೆ’ ಎಂದು ಈಶ್ವರ ಖಂಡ್ರೆ ತಿಳಿಸಿದರು.

‘ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ, ಜಿ.ಪರಮೇಶ್ವರ, ಎಚ್‌.ಕೆ. ಮುನಿಯಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ದಿನೇಶ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತುಂಬಲಿದ್ದಾರೆ. ಈ ಪ್ರಯತ್ನ ಆಂದೋಲನದ ರೀತಿ ನಡೆಯಲಿದೆ’ ಎಂದರು.

‘ಬಿಜೆಪಿ ಸರ್ಕಾರಗಳ ದುರಾಡಳಿತ ಬಿಚ್ಚಿಡುವುದು, ಸ್ಥಳೀಯ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಹೋರಾಟ ರೂಪಿಸುವುದು ಇದರ ಉದ್ದೇಶ. ಸಮಾವೇಶದಲ್ಲಿ ಆರೂ ಜಿಲ್ಲಾ ಘಟಕಗಳ ಅಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರು, ಎಐಸಿಸಿ– ಕೆಪಿಸಿಸಿ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಬೆಂಗಳೂರು, ಮಂಗಳೂರು, ಬೆಳಗಾವಿ ವಿಭಾಗದ ಸಮಾವೇಶಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಖಂಡರು– ಕಾರ್ಯಕರ್ತರಲ್ಲಿನ ಹೊಸ ಉರುಪು ಕಂಡಿದ್ದೇವೆ’ ಎಂದರು.

‘ಬೂತ್‌ ಮಟ್ಟ ಹಾಗೂ ಗ್ರಾಮ ಮಟ್ಟದಿಂದಲೇ ಪಕ್ಷ ಬಲಪಡಿಸಲು ‘ಪ್ರಜಾ ಸಮಿತಿ’ಗಳನ್ನೂ ಸಂಘಟಿಸಲಾಗುತ್ತದೆ. ಪ್ರಸಕ್ತ ವರ್ಷವು ಕಾಂಗ್ರೆಸ್‌ ಪಾಲಿಕೆ ಸಂಘಟನಾ ವರ್ಷವಾಗಲಿದೆ’ ಎಂದರು.

ಮುಖ್ಯಾಂಶಗಳು

ತೊಗರಿಗೆ ₹ 1 ಸಾವಿರ ಪ್ರೋತ್ಸಾಹ ನೀಡಲು ಆಗ್ರಹ

ಪ್ರವಾಹದಿಂದ ಕ.ಕ. ಭಾಗದಲ್ಲಿ 40 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದೆ

ಸರ್ಕಾರ ಪ್ರತಿ ಜಿಲ್ಲೆಗೆ ₹ 600 ಕೋಟಿ ಪರಿಹಾರ ನೀಡಬೇಕಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT