ಕಲಬುರಗಿ: ‘ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮಂಡಿಸಲಿರುವ ಪೂರಕ ಬಜೆಟ್‌ನಲ್ಲಿ 371(ಜೆ) ಕಲಂ ವಿಶೇಷ ಸ್ಥಾನಮಾನ ಅನುಗುಣವಾಗಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,‘ನಂಜುಂಡಪ್ಪ ವರದಿ ಮಾನದಂಡ ಆಧಾರವಾಗಿಟ್ಟುಕೊಂಡು ಸರ್ಕಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಹಿಂದುಳಿಯುವಿಕೆಯ ಬಗ್ಗೆ ವರದಿ ರಚಿಸಲು ಕ್ರಮ ಕೈಗೊಳ್ಳಬೇಕು. ಹಿಂದುಳಿಕೆಗೆ ಒಂದು ಗ್ರಾಮ ಪಂಚಾಯಿತಿ ಸೂಚ್ಯಂಕವನ್ನಾಗಿ ಮಾಡಿಕೊಂಡು ರಚಿಸಬೇಕು ಎಂದರು.
ಬಜೆಟ್ ಮತ್ತು ವಿಶೇಷ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು 10 ವರ್ಷದ ವೈಜ್ಞಾನಿಕ ಕ್ರಿಯಾ ಯೋಜನೆಯನ್ನು ರೂಪಿಸಿ, ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ, ಕ್ರೀಡೆ, ಕೃಷಿ ಮುಂತಾಗಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೃಷಿ ನೀತಿ, ಜಲ ನೀತಿ, ಕೈಗಾರಿಕಾ ನೀತಿ ಜಾರಿಗೆ ತರುವ ಮೂಲಕ ಜನರಿಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಪ್ರತ್ಯೇಕ ಸಚಿವಾಲಯ ಮಾಡಬೇಕು. ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ಕಲ್ಯಾಣದ ಎಂಟು ಸಚಿವರು ಕಲ್ಯಾಣದ ಜನರಿಗೆ ಆಶ್ಚರ್ಯ ಉಂಟು ಮಾಡುವ ರೀತಿಯಲ್ಲಿ ಬಜೆಟ್‌ನಲ್ಲಿ ನಮ್ಮ ನಿರೀಕ್ಷೆಗಳಿಗೆ ಸ್ಪಂದಿಸಲು ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.