ಗುರುವಾರ , ನವೆಂಬರ್ 14, 2019
19 °C

ಕೆಎಟಿ ಕಲಬುರ್ಗಿ ಪೀಠ: ಈಡೇರುತ್ತಿದೆ ನೌಕರರ ಬೇಡಿಕೆ

Published:
Updated:
Prajavani

ಕಲಬುರ್ಗಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ)ಯ ಕಲಬುರ್ಗಿ ಪೀಠ ಕಾರ್ಯಾರಂಭಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಮೂರು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಐದು ಜಿಲ್ಲೆಗಳ ಸರ್ಕಾರಿ ನೌಕರರ ಬೇಡಿಕೆ ಈಡೇರುತ್ತಿದೆ.

ಸರ್ಕಾರಿ ನೌಕರರು ಸಣ್ಣಪುಟ್ಟ ವ್ಯಾಜ್ಯಗಳಿಗೂ ಬೆಂಗಳೂರಿನಲ್ಲಿರುವ ಕೆಎಟಿ ಕೇಂದ್ರ ಕಚೇರಿಗೆ ಅಲೆಯಬೇಕಾಗಿತ್ತು. ಇದನ್ನು ತಪ್ಪಿಸಲು ಉತ್ತರ ಕರ್ನಾಟಕ ಭಾಗದ ನೌಕರರಿಗಾಗಿ ಬೆಳಗಾವಿಯಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದವರಿಗಾಗಿ ಕಲಬುರ್ಗಿಯಲ್ಲಿ ತಲಾ ಒಂದು ಸಂಚಾರಿ ಪೀಠವನ್ನು ಮಂಜೂರು ಮಾಡಲಾಯಿತು. ಬೆಂಗಳೂರಿನಲ್ಲಿ ಕೇಂದ್ರ ಪೀಠ ಹಾಗೂ ಎರಡು ಬ್ರ್ಯಾಂಚ್‌ಗಳು ಇವೆ. ಈಗ ಕಲಬುರ್ಗಿ ಪೀಠ ಕಾರ್ಯಾರಂಭ ಮಾಡುವ ಮೂಲಕ ಒಟ್ಟು ಐದು ಪೀಠಗಳು ಸಕ್ರಿಯವಾದಂತಾಗುತ್ತದೆ.

ಹೋರಾಟಕ್ಕೆ ಸಿಕ್ಕ ಫಲ:  ಕೆಎಟಿ ಆರಂಭಕ್ಕಾಗಿ ಜಿಲ್ಲಾ ವಕೀಲರ ಸಂಘ, ರಾಜ್ಯ ಸರ್ಕಾರಿ ನೌಲರರ ಸಂಘ ಹಾಗೂ ವಿವಿಧ ಸಂಘಟನೆಗಳು ನಿರಂತರ ಹೋರಾಟ ಮಾಡಿಕೊಂಡೇ ಬಂದಿವೆ. 2015ರ ಜುಲೈ 3ರಂದು ‘ಕಲಬುರ್ಗಿ ಬಂದ್‌’ ನಡೆಸಲಾಯಿತು. ಇದಕ್ಕೆ ಮಣಿದ ರಾಜ್ಯ ಸರ್ಕಾರ ಅದೇ  ತಿಂಗಳು 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪೀಠ ಸ್ಥಾಪನೆಗೆ ಅನುಮೋದನೆ ನೀಡಿತು. 

ಕೆಎಟಿ ಬೆಳವಣಿಗೆಗಳು 2016ರಲ್ಲೇ ಅಂತಿಮ ಹಂತಕ್ಕೆ ತಲುಪಿದ್ದವು. ಆದರೆ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ ಹುಡುಕಾಟ ನಡೆದಿದ್ದರಿಂದ ವಿಳಂಬವಾಯಿತು. ಈಗಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಹಿಂಭಾಗದಲ್ಲೇ ಒಂದು ಖಾಸಗಿ ಕಟ್ಟಡ ಬಾಡಿಗೆ ಪಡೆದು ಅಲ್ಲಿ ಪೀಠ ಸ್ಥಾಪ‍ನೆಗೆ ಕೆಲಸಗಳು ಆರಂಭವಾದವು.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದು ಆರಂಭವಾಗಿ ಎರಡು ವರ್ಷವಾಗಬೇಕಿತ್ತು. ಆದರೆ, ಮೂಲಸೌಕರ್ಯಗಳ ಕೊರತೆ, ನ್ಯಾಯಮೂರ್ತಿಗಳ ವಸತಿಗೃಹ, ಸಿಬ್ಬಂದಿ ವಸತಿಗೃಹ ಮುಂತಾದ ವಿಚಾರಗಳು ಮುನ್ನೆಲೆಗೆ ಬಂದು ಮತ್ತಷ್ಟು ವಿಳಂಬವಾಯಿತು. ಪೀಠ ಕಾರ್ಯಾರಂಭ ಮಾಡದಿದ್ದರೂ ಕಟ್ಟಡ ಬಾಡಿಗೆ ಕಟ್ಟುತ್ತಲೇ ನಡೆದಿತ್ತು. ಈಗ ಕೆಲವು ಕೊರತೆಗಳ ನಡುವೆಯೂ ಪೀಠಕ್ಕೆ ಚಾಲನೆ ದೊರೆಯುತ್ತಿದೆ.

30 ಸಿಬ್ಬಂದಿ ಮಾತ್ರ ನೇಮಕ

ಕೆಎಟಿ ಕಲಬುರ್ಗಿ ಪೀಠಕ್ಕೆ ಆಗ್ರಹಿಸಿ ವಕೀಲರ ಸಂಘದವರು ಹಾಗೂ ಸಂಘ ಸಂಸ್ಥೆಗಳವರು ನಿರಂತರ ಹೋರಾಟ ನಡೆಸಿದ್ದರು. 2015ರ ಜುಲೈ 3ರಂದು ‘ಕಲಬುರ್ಗಿ ಬಂದ್‌’ ನಡೆಸಿದ್ದರು. ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಅದೇ ತಿಂಗಳು 22ರಂದು ಸಚಿವ ಸಂಪುಟ ಸಭೆಯಲ್ಲಿ ಕಲಬುರ್ಗಿ ಕೆಎಟಿ ಪೀಠ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಆ ನಂತರ ಮೂಲ ಸೌಲಭ್ಯ ಕಲ್ಪಿಸಲು ಹಣವನ್ನೂ ಬಿಡುಗಡೆ ಮಾಡಿತ್ತು.

ಇಷ್ಟೆಲ್ಲ ಆದರೂ ಸಿಬ್ಬಂದಿ ನೇಮಕ ವಿಳಂಬವಾಗಿತ್ತು. ಅಲ್ಲಿ 60 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಆದರೆ, ಈಗ 30 ಸಿಬ್ಬಂದಿ ಮಾತ್ರ ನೇಮಕವಾಗಿದ್ದಾರೆ. ಇನ್ನೂ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ.

ಕೆಎಟಿ ಕಾರ್ಯನಿರ್ವಹಣೆ ಹೇಗೆ?

ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠ ಅನುಸರಿಸುತ್ತಿರುವ ಮಾದರಿಯನ್ನೇ ಕೆಎಟಿ ಪೀಠವೂ ಅನುಸರಿಸಲಿದೆ.

ಉಳಿದೆಲ್ಲ ಪೀಠಗಳ ಮಾದರಿಯಲ್ಲೇ ಇಲ್ಲಿಯೂ ಇಬ್ಬರು ಸದಸ್ಯರು ಇರಲಿದ್ದಾರೆ. ಇದರಲ್ಲಿ ನ್ಯಾಯಾಂಗ ಇಲಾಖೆಯಿಂದ ಇಬ್ಬರು ನಿವೃತ್ತ ನ್ಯಾಯಾಧೀಶರು ಹಾಗೂ ಆಡಳಿತ ಇಲಾಖೆಯಿಂದ ಒಬ್ಬ ನಿವೃತ್ತ ಅಧಿಕಾರಿ ಇರುತ್ತಾರೆ.

ಹೊಸ ಕಟ್ಟಡದಲ್ಲಿ ತೆರೆದಿರುವ ನ್ಯಾಯಾಲಯದಲ್ಲಿ ಮೂರು ಪೀಠಗಳನ್ನು ಇಡಲಾಗಿದೆ. ವ್ಯಾಜ್ಯ ವಿಚಾರಣೆ ವೇಳೆ ಇಬ್ಬರು ಸದಸ್ಯರು ಹಾಜರಿರುತ್ತಾರೆ. ವಿಶೇಷ ಪ್ರಕರಣ ಸಂದರ್ಭ ಹಾಗೂ ಅಗತ್ಯವಿದ್ದ ಪಕ್ಷದಲ್ಲಿ ಚೇರ್ಮನ್‌ ಅವರೂ ಭಾಗವಹಿಸುವುದರಿಂದ ಮೂರು ಪೀಠಗಳನ್ನು ಇಲ್ಲಿ ಹಾಕಲಾಗಿದೆ.

ಅರ್ಜಿ ಸಲ್ಲಿಸುವುದು ಯಾರು? ಹೇಗೆ? ಎಲ್ಲಿ?

ಈ ಪೀಠದ ವ್ಯಾಪ್ತಿಯಲ್ಲಿ ಕಲಬುರ್ಗಿ, ಯಾದಗಿರಿ, ಬೀದರ್‌, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಬರುತ್ತವೆ. ಸರ್ಕಾರಿ ನೌಕರರ ಕುಂದು– ಕೊರತೆ, ಬಡ್ತಿ, ವರ್ಗಾವಣೆ, ಜ್ಯೇಷ್ಠತೆ ಮುಂತಾದ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿಚಾರಣೆ ಇಲ್ಲೇ ನಡೆಯಲಿದೆ. ಆದರೆ, ರಸ್ತೆ ಸಾರಿಗೆ ಸಂಸ್ಥೆ, ನಿಗಮ– ಮಂಡಳಿ ಮುಂತಾದ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಕಲಬುರ್ಗಿ ಹೈಕೋರ್ಟ್‌ ಪೀಠದಲ್ಲಿ ಮೂವರು ನ್ಯಾಯಮೂರ್ತಿಗಳು ಸರದಿಯಂತೆ ಎಂಟು ವಾರಗಳ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕೆಎಟಿ ಪೀಠದಲ್ಲೂ ನ್ಯಾಯಾಂಗ ಇಲಾಖೆಯಿಂದ ಇಬ್ಬರು, ಆಡಳಿತ ಇಲಾಖೆಯಿಂದ ಒಬ್ಬರು ಪ್ರತಿ ನಾಲ್ಕು ವಾರಗಳ ಅವಧಿಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಹಿರಿಯ ವಕೀಲರ ವಿವರಣೆ.

ಅಂಕಿ ಅಂಶ

1002 ಕೆಎಟಿ ಕಲಬುರ್ಗಿ ಪೀಠದಲ್ಲಿ ಬಾಕಿ ಇರುವ ವ್ಯಾಜ್ಯಗಳು

600 ಕೆಎಟಿಗೆ ಮಂಜೂರಾದ ಹುದ್ದೆಗಳು

30 ಸದ್ಯ ತುರ್ತಾಗಿ ನೇಮಕ ಮಾಡಿದ ಹುದ್ದೆಗಳು

ಪ್ರತಿಕ್ರಿಯಿಸಿ (+)