ಸೋಮವಾರ, ನವೆಂಬರ್ 18, 2019
20 °C
ಕಲಬುರ್ಗಿ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ವಾಗ್ವಾದ

ಗೈರಾದ ಅಧಿಕಾರಿಗಳ ಬಿಡುಗಡೆಗೆ ಒತ್ತಾಯ

Published:
Updated:
Prajavani

ಕಲಬುರ್ಗಿ: ಹಲವು ದಿನಗಳ ಮುಂಚೆಯೇ ಮಾಹಿತಿ ನೀಡಿದರೂ ಕೆಡಿಪಿ ಸಭೆಗೆ ಬಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬರೀ ನೋಟಿಸ್‌ ನೀಡುವ ಬದಲು ಸಭೆಯಲ್ಲಿ ಠರಾವು ಪಾಸು ಮಾಡಿ ಜಿಲ್ಲೆಯಿಂದ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳು ಒತ್ತಾಯಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ನೂತನ ಸಭಾಂಗಣದಲ್ಲಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಗೆ ನಾಲ್ಕೈದು ಪ್ರಮುಖ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು.

ಸಭೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿದ ಉಪಾಧ್ಯಕ್ಷೆ ಶೋಭಾ ಸಿರಸಗಿ, ಅಧಿಕಾರಿಗಳ ಹಾಜರಾತಿ ತೆಗೆದುಕೊಳ್ಳುವಂತೆ ಸೂಚಿಸಿದರು. ಅದರಂತೆ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್‌ ಅವರು ಹಾಜರಾತಿ ತೆಗೆದುಕೊಂಡಾಗ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಸೇರಿದಂತೆ ಕೆಲ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು.

ಆಗ ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಶಿವರಾಜ ಪಾಟೀಲ ಹಾಗೂ ಶಾಂತಪ್ಪ ಕೂಡಲಗಿ, ‘ಕಳೆದ ಬಾರಿ ಕೆಲ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆವು. ಆ ಬಗ್ಗೆ ಮತ್ತೆ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂಬ ಭಯದಿಂದ ಬಂದಿಲ್ಲ. ಬೇಕೆಂತಲೇ ಸಭೆಯಿಂದ ದೂರ ಉಳಿದವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.

ಯಾರು ಅನುಮತಿ ಪಡೆದು ಸಭೆಗೆ ಗೈರಾಗಿದ್ದಾರೊ ಅವರನ್ನು ಹೊರತುಪಡಿಸಿ ಅನುಮತಿ ಪಡೆಯದೇ ಗೈರಾದವರನ್ನು ಕರೆಸುವಂತೆ ಸಿಇಒ ಡಾ.ಪಿ.ರಾಜಾ ಅವರು ಅಧಿಕಾರಿಗಳ ಪರವಾಗಿ ಬಂದಿದ್ದವರಿಗೆ ಸೂಚಿಸಿದರು.

ಪದೇ ಪದೇ ಗೈರಾಗುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಶಿಫಾರಸು ಮಾಡುತ್ತೇವೆ. ಈ ಬಗ್ಗೆ ನಡಾವಳಿಯಲ್ಲಿಯೂ ದಾಖಲಿಸಲಾಗುವುದು ಎಂದು ಸಿಇಒ ಸ್ಪಷ್ಟಪಡಿಸಿದರು.

ಕೆಲ ಹೊತ್ತಿನ ಬಳಿಕ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಅಮೀನ್‌ ಮುಖ್ತಾರ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಬಂದರು.

ಅಮೀನ್‌ ಮುಖ್ತಾರ್‌ ಅವರನ್ನು ಉದ್ದೇಶಿಸಿ ಮಾತನಾಡಿದ ಶಾಂತಪ್ಪ ಕೂಡಲಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಎಷ್ಟು ಗುತ್ತಿಗೆಗಳನ್ನು ನೀಡಿದ್ದೀರಿ ಎಂಬ ಮಾಹಿತಿಯನ್ನು ಕಳೆದ ಸಭೆಯಲ್ಲೂ ಕೇಳಿದ್ದೆ. ಈಗಲೂ ಕೊಟ್ಟಿಲ್ಲ. ನಿಮ್ಮ ನಡೆ ನೋಡಿದರೆ ಪರಿಶಿಷ್ಟರಿಗೆ ಗುತ್ತಿಗೆ ಕೆಲಸಗಳನ್ನು ನೀಡುವಂತೆ ಕಾಣಿಸುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಮೂರ್ನಾಲ್ಕು ಕಾಮಗಾರಿಗಳನ್ನು ಒಂದೇ ಎಂದು ಪರಿಗಣಿಸಿ ಗುತ್ತಿಗೆ ನೀಡುವ ಕ್ರಮವೂ ಸರಿಯಲ್ಲ ಎಂದು ಟೀಕಿಸಿದರು.

ಅಮೀನ್‌ ಮುಖ್ತಾರ್‌ ಅವರು ಈ ಬಗ್ಗೆ ಸಮಜಾಯಿಷಿ ನೀಡಲು ಮುಂದಾದರಾದರೂ ಶಾಂತಪ್ಪ ಅದನ್ನು ಒಪ್ಪಲಿಲ್ಲ. ಅಲ್ಲದೇ, ದಲಿತ ಗುತ್ತಿಗೆದಾರರಿಗೆ ಅನ್ಯಾಯ ಮಾಡುತ್ತಿರುವ ಮುಖ್ತಾರ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಇಒ ಅವರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಇಒ ಡಾ.ಪಿ.ರಾಜಾ, ‘ಎಷ್ಟೋ ತೀರ್ಮಾನಗಳನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ ಅವರೊಬ್ಬರೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರ ಮೇಲೆ ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಮುಖ್ಯ ಎಂಜಿನಿಯರ್‌ ಇರುತ್ತಾರೆ. ಅವರಿಗೆ ವಿವರಣೆಯನ್ನೂ ನೀಡಬೇಕಾಗುತ್ತದೆ. ನಿಯಮ ಮೀರಿ ತಪ್ಪು ಮಾಡಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ. ಆದರೆ, ಇಇ ಅವರು ತಪ್ಪು ಮಾಡಿದ್ದಾರೆ ಎಂದು ಇಲ್ಲಿಯೇ ನಿರ್ಣಯಿಸಿ ತೀರ್ಪು ಕೊಡಲು ಇದು ನ್ಯಾಯಾಲಯವಲ್ಲ. ಅಲ್ಲದೇ, ಆ ಅಧಿಕಾರಿ ನನ್ನ ಅಧೀನದಲ್ಲಿ ಬರುವುದಿಲ್ಲ. ಜಿಲ್ಲಾಧಿಕಾರಿ ಅವರು ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ನನ್ನ ಕೆಲಸ ಏನಿದ್ದರೂ ಕೆಡಿಪಿ ಸಭೆ ನಡೆಸಿ ಸಮನ್ವಯ ಸಭೆ ನಡೆಸುವುದಷ್ಟೇ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಕೆರೆಗಳ ವಿವರ ಕೊಡಿ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿ ಬರುವ ಕೆರೆಗಳು ಯಾವವು, ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವ ಕೆರೆಗಳು ಯಾವವು ಎಂಬ ಬಗ್ಗೆ ಗೊಂದಲವಿದೆ. ಅವುಗಳ ಪಟ್ಟಿಯನ್ನು ನೀಡಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಹೊಸ ಟೆಂಡರ್‌ ಕೊಡಲು ವಿಳಂಬ: ತಮಗೆ ಬೇಕಾದವರಿಗೆ ಟೆಂಡರ್ ನೀಡುವ ಉದ್ದೇಶದಿಂದ ಆಗಿರುವ ಟೆಂಡರ್ ರದ್ದು ಪಡಿಸಿದ್ದಲ್ಲದೇ ಹೊಸ ಟೆಂಡರ್ ಮಾಡಲು ವಿನಾಕಾರಣ ಕಾಲಹರಣ ಮಾಡಲಾಗುತ್ತಿದೆ ಎಂದು ಶಿವರಾಜ ಪಾಟೀಲ ಟೀಕಿಸಿದರು.

ಕಟ್ಟಿ ಸಂಗಾವಿ ಸೇತುವೆಯಿಂದ ಜೇವರ್ಗಿ ಪಟ್ಟಣಕ್ಕೆ ಕುಡಿಯುವ ನೀರಿನ ಕಾಮಗಾರಿಗೆ ಒಂದುವರೆ ವರ್ಷದ ಹಿಂದೆಯೇ ಕಾಮಗಾರಿಯಾಗಿತ್ತು. ಆದರೆ ಗುತ್ತಿಗೆದಾರರ ಮೇಲೆ ಒತ್ತಡ ತಂದು ಗುತ್ತಿಗೆ ರದ್ದುಪಡಿಸಲಾಗಿದೆ. ಆದರೆ ತದನಂತರ ಟೆಂಡರ್ ಕರೆಯಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ತಮಗೆ ಬೇಕಾದವರಿಗೆ ಟೆಂಡರ್ ನೀಡಲು ಕಾಮಗಾರಿಗೆ ಪೆಟ್ಟು ಬೀಳುತ್ತಿದೆಯಲ್ಲದೇ ಜೇವರ್ಗಿ ನೀರಿನ ಸಮಸ್ಯೆ ನೀಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ.

ಪ್ರತಿಕ್ರಿಯಿಸಿ (+)