ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿದ್ಯಾರ್ಥಿ ಮೇಲೆ ಸಿಯುಕೆ ಭದ್ರತಾಧಿಕಾರಿ ಹಲ್ಲೆ

Last Updated 29 ನವೆಂಬರ್ 2022, 10:25 IST
ಅಕ್ಷರ ಗಾತ್ರ

ಕಲಬುರಗಿ: ರಾತ್ರಿ ವೇಳೆ ಹೊರ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸುತ್ತಿರುವುದನ್ನು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಇಲ್ಲಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭದ್ರತಾಧಿಕಾರಿ ಶಿವಾನಂದ ಕೋಳಿ ಹಲ್ಲೆ ನಡೆಸಿದ್ದಾರೆ.

ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಸೋಮವಾರ ರಾತ್ರಿ ಬೈಕ್‌ನಲ್ಲಿ ಹೊರಟಿದ್ದ. ಈ ಸಂದರ್ಭದಲ್ಲಿ ವಿ.ವಿ.ಯ ಮುಖ್ಯದ್ವಾರದ ಬಳಿ ಇದ್ದ ಶಿವಾನಂದ ಹೊರಗಡೆ ಹೋಗಬೇಡಿ ಎಂದು ತಿಳಿಸಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದಿದ್ದು, ರಾತ್ರಿ ಹೊರಗೆ ಹೋಗದಂತೆ ಸುತ್ತೋಲೆ ಏನಾದರೂ ಇದೆಯೇ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ. ಇದನ್ನೆಲ್ಲ ವಿ.ವಿ. ಪ್ರವಾಸೋದ್ಯಮ ಅಧ್ಯಯನ ವಿಭಾಗದ ವಿದ್ಯಾರ್ಥಿ ಕೇರಳದ ಮೊಬಾಜಿಲ್ ಚಿತ್ರೀಕರಣ ಮಾಡುತ್ತಿದ್ದುದನ್ನು ಗಮನಿಸಿದ ಶಿವಾನಂದ, ಆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರ ಮನೆಗೆ ತೆರಳಿ ದೂರು ಸಲ್ಲಿಸಿದೆ. ವಿದ್ಯಾರ್ಥಿಗಳು ಹಾಗೂ ಶಿವಾನಂದ ಕೋಳಿ ಅವರನ್ನು ಕರೆಸಿಕೊಂಡು ಸಂಧಾನ ಸಭೆ ನಡೆಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಡೋಣೂರ, ‘ಭದ್ರತಾಧಿಕಾರಿ ಶಿವಾನಂದ ಕೋಳಿಯವರೊಂದಿಗೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಜೊತೆಗೂ ಸಂಪರ್ಕದಲ್ಲಿದ್ದೇನೆ. ಭದ್ರತಾ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿಲ್ಲ. ನಿಗದಿತ ಸಮಯ ಮೀರಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಖ್ಯ ಗೇಟಿನ ಹೊರಗೆ ಹೋಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಅವರನ್ನು ತಡೆದಾಗ ವಿದ್ಯಾರ್ಥಿ ಮತ್ತು ಭದ್ರತಾಧಿಕಾರಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಏತನ್ಮಧ್ಯೆ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಮುಂದಾದಾಗ ಭದ್ರತಾಧಿಕಾರಿ ಅದನ್ನು ತಡೆಯಲು ಕೈ ಮುಂದೆ ಮಾಡಿದ್ದಾರೆ. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇಡೀ ಪ್ರಕರಣ ಕೂಲಂಕಷವಾಗಿ ಪರಿಶೀಲಿಸಲಾಗುವುದು. ಸಿ.ಸಿ. ಟಿವಿ ಫೂಟೇಜ್ ಕೂಡ ಪರಿಶೀಲಿಸಲಾಗುವುದು. ವಿದ್ಯಾರ್ಥಿಗಳ ರಕ್ಷಣೆ ವಿಶ್ವವಿದ್ಯಾಲಯದ ಕಾಳಜಿಯಾಗಿದೆ. ಆದರೆ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಇದು ಆಂತರಿಕ ವಿಷಯ. ಆಡಳಿತ ಇದನ್ನು ಇತ್ಯರ್ಥಪಡಿಸಿದೆ’ ಎಂದರು.

ಶಿವಾನಂದ ಕೋಳಿ ಅವರ ವರ್ತನೆಯ ಬಗ್ಗೆ ಪ್ರಾಧ್ಯಾಪಕ ವಲಯ ಹಾಗೂ ವಿದ್ಯಾರ್ಥಿಗಳಲ್ಲಿ ಅಸಮಧಾನವಿದ್ದು, ಈ ಬಗ್ಗೆ ವಿ.ವಿ. ಆಡಳಿತ ಮಂಡಳಿಗೆ ದೂರನ್ನೂ ನೀಡಲಾಗಿದೆ. ಆದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT