ಮಂಗಳವಾರ, ಅಕ್ಟೋಬರ್ 15, 2019
26 °C
ಕಲಬುರ್ಗಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ

ಪಕ್ಷದೊಳಗಿನ ಮುನಿಸು ಬೀದಿಗೆ ತರಬೇಡಿ: ಮಲ್ಲಿಕಾರ್ಜುನ ಖರ್ಗೆ ಸಲಹೆ

Published:
Updated:
Prajavani

ಕಲಬುರ್ಗಿ: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ನಡೆಯುತ್ತಿದ್ದು, ಮುನಿಸುಗಳನ್ನು ಪಕ್ಷದ ವೇದಿಕೆಯಲ್ಲೇ ಬಗೆಹರಿಸಿಕೊಳ್ಳಬೇಕೇ ಹೊರತು ಬೀದಿಗೆ ತರಬಾರದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂದು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತಾರೆ. ಪಕ್ಷದ ಒಳಗಡೆ ಮುನಿಸುಗಳ ಬಗ್ಗೆ ಮಾತಾಡಲಿ, ಅದನ್ನ ಬೀದಿಗೆ ತರಬಾರದು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಅಭಿಪ್ರಾಯ ಭೇದಗಳು ಇರುತ್ತವೆ. ಚಾರಣೆ ಕೀ ಮುರ್ಗಿ, ಬಾರಣೇ ಕಾ ಮಸಾಲಾ ಎನ್ನುವ ಹಾಗೆ ಕಾಂಗ್ರೆಸ್‌ನ ಬೆಳವಣಿಗೆಗಳನ್ನು ಮಾಧ್ಯಮದವರು ಮಸಾಲಾ ಹಚ್ಚಿ ಹೇಳುತ್ತಾರೆ ಎಂದರು.

‘ಕಾಂಗ್ರೆಸ್ ಸೇರಿದ ಮೇಲೆ ಎಲ್ಲರೂ ಕಾಂಗ್ರೆಸ್‌ನವರೇ. ಇಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗರು ಅನ್ನುವ ಮಾತೇ ಇಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಸೂಕ್ತವಾದ ಸ್ಪಂದನೆ ಸಿಗುತ್ತಿಲ್ಲ. ಕನಿಷ್ಠ ಪಕ್ಷ ನಿಗಮ ಮಂಡಳಿಗೆ ಅಧ್ಯಕ್ಷರನ್ನೂ ನೇಮಕ‌ ಮಾಡಿಲ್ಲ. ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ರಾಜ್ಯ ಹಾಗೂ ಕೇಂದ್ರದ ವಿರುದ್ಧ ಧ್ವನಿ ಎತ್ತಲು ಯಾರೂ ಇಲ್ಲದಂತಾಗಿದೆ. ಕೇಂದ್ರಕ್ಕೆ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲದಂತಾಗಿದೆ’ ಎಂದು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾ‌ನಾಡಿದರೆ ಪ್ರಕರಣ ದಾಖಲಿಸ್ತಾರೆ. ಸರ್ಕಾರ ಉಳಿಸಿಕೊಳ್ಳಲು ಇವರೆಲ್ಲ ಸರ್ಕಸ್ ಮಾಡ್ತಿದಾರೆ. ಮೋದಿ ಮೇಲೆ ನಂಬಿಕೆ ಇಟ್ಟವರು ದೇಶಭಕ್ತರು, ಉಳಿದವರು ದೇಶದ್ರೋಹಿಗಳಾ’ ಎಂದು ಪ್ರಶ್ನಿಸಿದರು.

ಕೇಂದ್ರದ ವಿರುದ್ಧ ಮಾತಾಡಿದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರಿಗೆ ನೋಟಿಸ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ, ‘ಪ್ರತಿಯೊಂದಕ್ಕೂ ನೋಟಿಸ್‌ ನೀಡಲು ಮುಂದಾದರೆ, ಅನ್ಯಾಯದ ವಿರುದ್ಧ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಯಾರು ಮಾತನಾಡುತ್ತಾರೆ? ಹೀಗಾಗಿದೆ ಅಂತಾ ಧ್ವನಿ ಎತ್ತಿದರೆ ಶೋಕಾಸ್ ನೋಟಿಸ್‌ಗಳು ಬರುತ್ತವೆ. ಇದು ಅವರವರ ಪಕ್ಷದ ವಿಚಾರ ಇರಬಹುದು, ಆದರೆ ಧ್ವನಿ ಹತ್ತಿಕ್ಕುವ ಕೆಲಸವಿದು. ಮೋದಿ ಚಂದ್ರಯಾನಕ್ಕೆ ಬಂದಾಗ ನೆರೆಪಿಡೀತ ಪ್ರದೇಶದ ವೈಮಾನಿಕ ಸಮೀಕ್ಷೆ ಏಕೆ ಮಾಡಲಿಲ್ಲ’ ಎಂದು ಹರಿಹಾಯ್ದರು. 

‘ರಾಜ್ಯ ಸರ್ಕಾರಗಳು ಕೇಳಿದಷ್ಟು ಹಣವನ್ನು ಕೇಂದ್ರದಿಂದ ನೀಡಲು ಸಾಧ್ಯವಿಲ್ಲ. ಹಿಂದೆ ನಮ್ಮ ಸರ್ಕಾರವೂ ರಾಜ್ಯ ಸರ್ಕಾರಗಳು ಕೇಳಿದಷ್ಟು ಹಣ ನೀಡಿಲ್ಲ. ರಾಜ್ಯ ಕೇಳಿದ್ದು ₹ 38 ಸಾವಿರ ಕೋಟಿ. ಕೊಟ್ಟಿದ್ದು ಕೇವಲ ₹ 1200 ಕೋಟಿ. ಆದರೆ, ಇಷ್ಟೊಂದು ಕನಿಷ್ಠ ಪರಿಹಾರ ಕೊಟ್ಟಿದ್ದು ಬೇಸರವಾಗಿದೆ’ ಎಂದರು.

Post Comments (+)